ಕನ್ನಡಪ್ರಭ ವಾರ್ತೆ ಮದ್ದೂರು
ಎನ್ ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾದರೆ, ಕೇಂದ್ರ ಸಚಿವರಾಗಿ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ರೈತರು, ಜನಸಾಮಾನ್ಯರ ಹಲವು ಕಾರ್ಯಕ್ರಮಗಳಿಗೆ ಶಕ್ತಿ ತುಂಬಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.ಮಂಡ್ಯ ಲೋಕಸಭೆ ಮೈತ್ರಿ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಪರ ಗುರುವಾರ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸುಡುವ ಬಿಸಿಲನ್ನೂ ಲೆಕ್ಕಿಸದೇ ಬಿರುಸಿನ ಮತಪ್ರಚಾರ ನಡೆಸಿ ಮಾತನಾಡಿದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಲಾಟರಿ, ಸಾರಾಯಿ ನಿಷೇಧ, 25 ಸಾವಿರ ಕೋಟಿ ರೈತರ ಸಾಲಮನ್ನಾ, ಗ್ರಾಮ ವಾಸ್ತವ್ಯ, ಜನ ಸಂಪರ್ಕ ಸಭೆ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಎಲ್ಲಾ ವರ್ಗದವರಿಗೂ ಅನುಕೂಲ ಕಲ್ಪಿಸಿಕೊಟ್ಟಿದ್ದು, ಈ ಬಾರಿ ಸಂಸದರಾದರೆ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ ಎಂದರು.ರೈತರಿಗೆ ಮತ್ತು ಜನರಿಗೆ ಕೇವಲ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರುವ ಸರ್ಕಾರ, ಜನಸಾಮಾನ್ಯರು ಸಂಕಷ್ಟ ಪರಿಸ್ಥಿತಿಯಲ್ಲಿದ್ದರೂ ನೆರವಿಗೆ ಧಾವಿಸದೇ ಕಾಲಹರಣ ಮಾಡುತ್ತಿರುವುದಾಗಿ ದೂರಿದರು.
ಮೇಕೆದಾಟು ಅಣೆಕಟ್ಟೆ ನಿರ್ಮಿಸುವುದಾಗಿ ಹೇಳಿಕೆ ನೀಡಿದ ಸರ್ಕಾರ, ಅಧಿಕಾರಕ್ಕೆ ಬಂದು 9 ತಿಂಗಳು ಕಳೆದಿದ್ದರೂ ಇದುವರೆಗೂ ಯಾವುದೇ ಕಾರ್ಯಕ್ಕೆ ಮುಂದಾಗಿಲ್ಲ. ಇದು ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನಮ್ಮ ನೀರು ಬೇರೆಯವರ ಪಾಲಾಗುತ್ತಿದ್ದು, ಕೇವಲ ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ನಡೆಸಿ ನೃತ್ಯ ಮಾಡಿ ತೆರಳಿದ್ದೆ ನಿಮ್ಮ ಸಾಧನೆ ಎಂದು ಟೀಕಿಸಿದರು.ದೇಶದ ರಕ್ಷಣೆ, ಅಭಿವೃದ್ಧಿ ವಿಚಾರದಲ್ಲಿ ದಿನದ 24 ಗಂಟೆಯೂ ದುಡಿಯುತ್ತಿರುವ ವಿಶ್ವನಾಯಕ ಮೋದಿಯವರ ಕೈ ಬಲ ಪಡಿಸಬೇಕೆಂದು ಕೋರಿದರು.
ಸದಾಕಾಲ ರೈತಾಪಿ ವರ್ಗದ ಬಗ್ಗೆ ಚಿಂತನೆ ನಡೆಸುವ ಮತ್ತು ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿರುವ ಮತ್ತು ರಾಜ್ಯದಲ್ಲಿ 2 ಬಾರಿ ಸಿಎಂ ಆಗಿ ರಾಜ್ಯದ ರೈತರ ಜೊತೆಗೆ ತಾಲೂಕಿನಲ್ಲಿ ರೈತರ 96 ಕೋಟಿ ಮನ್ನಾ ಮಾಡಿದ್ದು, ಇದನ್ನರಿತು ಕುಮಾರಸ್ವಾಮಿಯವರಿಗೆ ಅಧಿಕ ಮತಗಳನ್ನು ನೀಡುವ ಮೂಲಕ ಸಂಸತ್ ಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಬಿಜೆಪಿ ಮುಖಂಡ ಎಸ್.ಪಿ ಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಜಿಪಂ ಮಾಜಿ ಸದಸ್ಯ ರವಿ, ಜೆಡಿಎಸ್ ಘಟಕದ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮಯ್ಯ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಉಪಾಧ್ಯಕ್ಷ ದೇವರಹಳ್ಳಿ ವೆಂಕಟೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ ಸತೀಶ್, ಮುಖಂಡರಾದ ಎಂ.ಸಿ ಸಿದ್ದು, ನಾಗೇಶ್, ಸಿ.ಡಿ.ಸಂತೋಷ್, ಅಭಿಷೇಕ್ ಇದ್ದರು.