ಚಳಿಗಾಲದ ಉತ್ತರಾಧಿವೇಶನಕ್ಕೆ ಕುಂದಾನಗರಿ ಸಜ್ಜು

KannadaprabhaNewsNetwork | Published : Dec 9, 2024 12:47 AM

ಸಾರಾಂಶ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.9ರಿಂದ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿ ಸಕಲ ರೀತಿಯಲ್ಲಿಯೂ ಸಿದ್ಧಗೊಂಡಿದೆ. ಸುವರ್ಣ ವಿಧಾನ ಸೌಧದಲ್ಲಿ ಉಭಯ ಕಲಾಪಗಳನ್ನು ನಡೆಸಲು ಸರ್ವರೀತಿಯಲ್ಲಿಯೂ ತಯಾರಿ ಪೂರ್ಣಗೊಂಡಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಸುವರ್ಣ ವಿಧಾನಸೌಧದಲ್ಲಿ ಡಿ.9ರಿಂದ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿ ಸಕಲ ರೀತಿಯಲ್ಲಿಯೂ ಸಿದ್ಧಗೊಂಡಿದೆ. ಸುವರ್ಣ ವಿಧಾನ ಸೌಧದಲ್ಲಿ ಉಭಯ ಕಲಾಪಗಳನ್ನು ನಡೆಸಲು ಸರ್ವರೀತಿಯಲ್ಲಿಯೂ ತಯಾರಿ ಪೂರ್ಣಗೊಂಡಿದೆ.

ಅಧಿವೇಶನಕ್ಕೆ ಬರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ಪೀಕರ್‌, ಸಚಿವರು, ಶಾಸಕರು, ವಿಪಕ್ಷಗಳ ನಾಯಕರು, ಹಿರಿಯ ಅಧಿಕಾರಿಗಳು, ಭದ್ರತೆ ನಿಯೋಜನೆಗೊಂಡಿರುವ ಪೊಲೀಸರು, ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 12000 ಸಿಬ್ಬಂದಿಗೆ ಅಗತ್ಯವಿರುವ ಊಟ, ವಸತಿ ಮತ್ತು ವಾಹನದ ವ್ಯವಸ್ಥೆಯನ್ನು ಒದಗಿಸಲಾಗಿದೆ. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೂಡ ಜಿಲ್ಲಾಡಳಿತ ಈಗಾಗಲೇ ಮಾಡಿಕೊಂಡಿದೆ.

ಅಧಿವೇಶನವನ್ನು ಅಚ್ಚುಕಟ್ಟಾಗಿ ಮತ್ತು ಯಶಸ್ವಿಗೊಳಿಸುವ ಸಂಬಂಧ ವಿಧಾನಸಭೆಯ ಸ್ಪೀಕರ್‌ ಯು.ಟಿ.ಖಾದರ್‌ ಮತ್ತು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಈಗಾಗಲೇ ಅಧಿಕಾರಿಗಳ ಜತೆಗೆ ಮಹತ್ವದ ಸಭೆಯನ್ನು ನಡೆಸಿ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಅಧಿವೇಶನದ ಯಶಸ್ಸಿಗೆ ಅಧಿಕಾರಿಗಳ ಮಟ್ಟದ ಒಟ್ಟು 10 ಸಮಿತಿಗಳನ್ನು ರಚಿಸಿಕೊಂಡು ಸಕ್ರಿಯವಾಗಿ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಅಣಿಯಾಗಿದೆ.

ಎಲ್ಲೆಡೆ ಬಿಗಿ ಪೊಲೀಸ್‌ ಬಿಗಿಭದ್ರತೆ: ಇವೆಲ್ಲದರ ನಡುವೆ ಹತ್ತು ದಿನಗಳ ಚಳಿಗಾಲದ ಅಧಿವೇಶನದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಆರು ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬೇರೆ ಬೇರೆ ಜಿಲ್ಲೆಯಿಂದ ಅಧಿಕಾರಿಗಳಿಂದ ಹಿಡಿದು ಪೊಲೀಸ್ ಸಿಬ್ಬಂದಿ ಈಗಾಗಲೇ ಬೆಳಗಾವಿಯತ್ತ ಮುಖ ಮಾಡಿದ್ದಾರೆ. ಭದ್ರತೆಗಾಗಿ ಆರು ಜನ ಎಸ್​​ಪಿ, ಹತ್ತು ಜನ ಹೆಚ್ಚುವರಿ ಎಸ್ಪಿ, 35 ಕೆಎಸ್ಆರ್‌ಪಿ ತುಕಡಿ, 230 ಪಿಎಸ್‌ಐ, 35 ಕೆಎಸ್‌ಆರ್‌ಪಿ ತುಕಡಿ, ಡಿಆರ್‌ಸಿಪಿ 10 ತುಕಡಿ, ಸೇರಿದಂತೆ 6000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ಪ್ರತಿಭಟನಾ ಸ್ಥಳ ಸೇರಿದಂತೆ ನಗರದ ಸೂಕ್ಷ್ಮ ಪ್ರದೇಶದಲ್ಲಿ ಒಟ್ಟು 450ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸುವರ್ಣಸೌಧದಲ್ಲಿಯೂ ಸ್ವಚ್ಛತೆ, ಭದ್ರತೆ:

ಸುವರ್ಣಸೌಧಕ್ಕೆ ಎಲ್ಲರಿಗೂ ಪ್ರವೇಶವಿಲ್ಲ. ಸರ್ಕಾರದ ಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮದವರು ಸೇರಿದಂತೆ ಪಾಸ್‌ ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಸುವರ್ಣ ವಿಧಾನಸೌಧದ ಪಶ್ಚಿಮ ಭಾಗದಲ್ಲಿ ಗಾರ್ಡನ್ ಕಾರ್ಯ ನಡೆಯುತ್ತಿದೆ. ವಾಟರ್ ಫಾಲ್, ಲಾನ್ ಕೆಲಸ ಆಗುತ್ತಿದೆ. ಅದೇ ರೀತಿ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ.ಬಿ.ಆರ್‌.ಅಂಬೇಡ್ಕರ್ ಪ್ರತಿಮೆಗಳ ಸುತ್ತಲೂ ಉದ್ಯಾನ ನಿರ್ಮಿಸಲಾಗುತ್ತಿದೆ. ಮಕ್ಕಳ ಅನುಕೂಲಕ್ಕಾಗಿ ವಿಜ್ಞಾನ ಪಾರ್ಕ್ ಕೂಡ ನಿರ್ಮಿಸಲಾಗುತ್ತಿದೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಗಾಂಧಿ ಅವರ ಜೀವನಗಾಥೆ ಸಾರುವ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಶಾಲಾ ಮಕ್ಕಳಿಗೆ ಆಡಿಟೋರಿಯಂನಲ್ಲಿ ಚರ್ಚಾಕೂಟ, ಭಾಷಣ, ಕಿರುಚಿತ್ರ ಪ್ರದರ್ಶನ ಸೇರಿದಂತೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಪ್ರತಿಭಟನೆಗಾಗಿಯೇ ಪ್ರತ್ಯೇಕ ಜಾಗ:ಪ್ರತಿವರ್ಷದಂತೆ ಈ ವರ್ಷದ ಅಧಿವೇಶನಕ್ಕೂ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಎದುರಾಗಲಿದೆ. ಸದನದೊಳಗೆ ಆಡಳಿತ ಪಕ್ಷಕ್ಕೆ ಪ್ರತಿಪಕ್ಷಗಳು ಬಿಸಿ ಮುಟ್ಟಿಸಿದರೆ, ಹೊರಗಡೆ ರೈತರು ಸೇರಿದಂತೆ ವಿವಿಧ ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸಲು ಸಿದ್ಧತೆ ನಡೆಸಿವೆ. ಈಗಾಗಲೇ ಪ್ರತಿಭಟನೆಗೆ ಅನುಮತಿ ನೀಡುವಂತೆ ಕೋರಿ ನಗರ ಪೊಲೀಸ್‌ ಕಮಿಷನರೇಟ್‌ ಕಚೇರಿಗೆ 55 ಸಂಘಟನೆಗಳು ಅರ್ಜಿ ಸಲ್ಲಿಸಿವೆ.

ಈ ಪೈಕಿ ಲಿಂಗಾಯತ ಪಂಚಮಸಾಲಿ ಸಮಾಜವು 2ಎಗಾಗಿ ಟ್ರ್ಯಾಕ್ಟರ್‌ ರ್‍ಯಾಲಿ, ರೈತರು, ಕಾರ್ಮಿಕರು, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅತಿಥಿ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪಾರಂಪರಿಕ ವೈದ್ಯರು, ಕನ್ನಡ ಹೋರಾಟಗಾರರು, ಜೈನ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ಅಣಿಯಾಗಿವೆ. ಪ್ರತಿಭಟನಾಕಾರರಿಗೆ ಅನುಕೂಲವಾಗುವಂತೆ ಸುವರ್ಣ ಸೌಧದ ಎದುರು ಹಲಗಾ ಬಳಿ, ಕೊಂಡಸಕೊಪ್ಪ ಬಳಿ ಟೆಂಟ್‌ಗಳನ್ನು ಹಾಕಿ ಸ್ಥಳ ನಿಗದಿಗೊಳಿಸಲಾಗಿದೆ.

2756 ಕೊಠಡಿ: ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸುವ ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ಮತ್ತು ಪತ್ರಕರ್ತರಿಗಾಗಿ ಜಿಲ್ಲಾಡಳಿತ ಈಗಾಗಲೇ 2756 ಕೊಠಡಿಗಳನ್ನು ಕಾಯ್ದಿರಿಸಿದೆ. ಇದಕ್ಕಾಗಿ ಪ್ರವಾಸಿ ಮಂದಿರಗಳು, ಖಾಸಗಿ ಹೋಟೆಲ್‌ಗಳು, ಕೆಎಲ್ಇ, ವಿಟಿಯು ಸೇರಿ ವಿವಿಧ ಸಂಸ್ಥೆಗಳ ಅತಿಥಿ ಗೃಹಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮಾತ್ರವಲ್ಲ, ಸಮುದಾಯ ಭವನಗಳು, ಚೌಟ್ರಿಗಳನ್ನು ಕೂಡ ವಸತಿಗಾಗಿ ಪಡೆದುಕೊಳ್ಳಲಾಗಿದೆ. ಭದ್ರತೆಗಾಗಿ ಆಗಮಿಸುತ್ತಿರುವ ಪೊಲೀಸರಿಗಾಗಿ ಟೌನ್‌ಶಿಪ್‌ಗಳನ್ನು ಕೂಡ ನಿರ್ಮಿಸಲಾಗಿದೆ.

ಝಗಮಗಿಸುವ ವಿದ್ಯುತ್‌ ದೀಪಾಲಂಕಾರ: ವಿಧಾನಮಂಡಲದ ಅಧಿವೇಶನ ಹಾಗೂ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಡಿ.9ರಿಂದಲೇ ನಗರದ 30 ಪ್ರಮುಖ ವೃತ್ತಗಳಲ್ಲಿ 32 ಕಿಮೀ ಉದ್ದ ಝಗಮಗಿಸುವ ವಿದ್ಯುತ್‌ ದೀಪಾಲಂಕಾರ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇದು ಮೈಸೂರು ದಸರಾವನ್ನು ಮೀರಿಸಲಿದೆ. ಇದರಿಂದಾಗಿ ಇಡೀ ನಗರವೇ ಝಗಮಗಿಸುವ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸಲಿದೆ. ಅಲ್ಲದೆ, ನಗರದ ಅಶೋಕ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಶ್ರೀಕೃಷ್ಣದೇವರಾಯ ವೃತ್ತ, ಡಾ.ಬಿ.ಆರ್‌.ಅಂಬೇಡ್ಕರ ರಸ್ತೆ, ಕಾಂಗ್ರೆಸ್‌ ರಸ್ತೆ, ಖಾಸಬಾಗ, ಕೇಂದ್ರೀಯ ಬಸ್‌ ನಿಲ್ದಾಣದ ಸೇರಿದಂತೆ ರಸ್ತೆಯ ಬದಿಗಿರುವ ಆವರಣ ಗೋಡೆಗಳ ಮೇಲೆ ಕಲಾವಿದರು ಬಣ್ಣ ಬಣ್ಣದ ಚಿತ್ತಾರ ಬಿಡಿಸಿ ಅಂದಗೊಳಿಸಿದ್ದಾರೆ.

ಮಹಾಮೇಳಾವ್‌ಗೆ ಬ್ರೇಕ್‌?: ಅಧಿವೇಶನದ ಮೊದಲ ದಿನವೇ ಸರ್ಕಾರದ ವಿರುದ್ಧ ಪರ್ಯಾಯವಾಗಿ ನಾಡದ್ರೋಹಿ ಎಂಇಎಸ್ ಮಹಾಮೇಳಕ್ಕೆ ಮುಂದಾಗಿದೆ. ಈ ಬಾರಿಯೂ ಎಂಇಎಸ್ ಮಹಾಮೇಳಕ್ಕೆ ಅವಕಾಶ ಸಿಕ್ಕಿಲ್ಲ. ಮಹಾಮೇಳ ಬ್ರೇಕ್ ಹಾಕಲು ಪೊಲೀಸ್ ಕಮೀಷನರ್ ನಿಷೇಧಾಜ್ಞೆ ಜಾರಿಗೆ ನಿರ್ಧಾರ ಮಾಡಿದ್ದಾರೆ. ‌ಮತ್ತೊಂದೆಡೆಗೆ ಜಿಲ್ಲಾಡಳಿತ ಮಹಾರಾಷ್ಟ್ರ ನಾಯಕರ ಬೆಳಗಾವಿ ಪ್ರವೇಶವನ್ನು ನಿರ್ಬಂಧಿಸಲು ಮುಂದಾಗಿದೆ.

Share this article