17, 18ಕ್ಕೆ ಬೆಂಗಳೂರಿನಲ್ಲಿ ಕುಂದಾಪ್ರ ಕನ್ನಡ ಹಬ್ಬ

KannadaprabhaNewsNetwork | Published : Aug 15, 2024 1:47 AM

ಸಾರಾಂಶ

ಬೆಂಗಳೂರಿನಲ್ಲಿ ಆ.17, 18ರಂದು ಕುಂದಾಪ್ರ ಕನ್ನಡ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಡಾ। ದೀಪಕ್ ಶೆಟ್ಟಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಂದಾಪ್ರ ಕನ್ನಡ ಪ್ರತಿಷ್ಠಾನದ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಆ.17 ಮತ್ತು 18ರಂದು ‘ಕುಂದಾಪ್ರ ಕನ್ನಡ ಹಬ್ಬ’ ನಡೆಯಲಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆ.17ರಂದು ಸಂಜೆ 5ಕ್ಕೆ ಕುಂದಾಪ್ರ ಕನ್ನಡ ಹಬ್ಬ ಉದ್ಘಾಟಿಸಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ। ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದ್ದಾರೆ.

ನಗರದ ಸೆಂಚುರಿ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಕಿರಣ್‌ಕುಮಾರ್ ಕೂಡ್ಗಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕೃಷ್ಣಮೂರ್ತಿ ಮಂಜ, ಕಿಶೋರ್ ಕುಮಾರ್ ಹೆಗ್ಡೆ ಭಾಗವಹಿಸಲಿದ್ದಾರೆ. ನಟ ರಿಷಬ್ ಶೆಟ್ಟಿ ಅವರಿಗೆ ಊರ ಗೌರವ ಸನ್ಮಾನ ಇರಲಿದೆ ಎಂದು ಹೇಳಿದರು.

ಭಾನುವಾರ ಸಂಜೆ 5ಕ್ಕೆ ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಡಾ। ಮಾಲತಿ ಕೆ.ಹೊಳ್ಳ ಅವರಿಗೆ ಊರ ಗೌರವ ಸನ್ಮಾನ ನಡೆಯಲಿದೆ. ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಎಂ.ಆರ್.ಜಿ. ಸಮೂಹದ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಯುನಿವರ್ಸಲ್ ಗ್ರೂಪ್‌ನ ಉಪೇಂದ್ರ ಶೆಟ್ಟಿ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ, ಶಿವರಾಮ ಹೆಗ್ಡೆ, ಚೆಪ್ ಟಾಕ್‌ನ ಗೋವಿಂದಬಾಬು ಪೂಜಾರಿ, ನಟಿ ಪ್ರಿಯಾಂಕಾ ಉಪೇಂದ್ರ, ನಟರಾದ ರಾಜ್‌ ಬಿ.ಶೆಟ್ಟಿ, ಗಣೇಶ್ ಭಾಗಮಿಸಲಿದ್ದಾರೆ ಎಂದು ತಿಳಿಸಿದರು.

ಆ.17ರ ಮಧ್ಯಾಹ್ನ 3ಕ್ಕೆ ನಗರದ ವಿವಿಧ ಭಾಗಗಳಿಂದ ಆಗಮಿಸುವ ಜನರ ಪುರ ಮೆರವಣಿಗೆ, ಸಂಜೆ 4ಕ್ಕೆ ಮಂಗಳೂರಿನ ಜರ್ನಿ ಥಿಯೇಟರ್ ತಂಡದಿಂದ ಜಾನಪದ, ರಂಗ ಹಾಗೂ ಕುಂದಾಪ್ರ ಕನ್ನಡ ಗೀತಗಾಯನ, ಸಂಜೆ 6.30ಕ್ಕೆ ಕರಾವಳಿ ಜಿಲ್ಲೆಗಳ ಸುಪ್ರಸಿದ್ದ ಕಲಾವಿದರಿಂದ ಯಕ್ಷಗಾನ ಜೋಡಾಟ ಇರಲಿದೆ.

ಆ. 18ರಂದು ಬೆಳಗ್ಗೆ 10ಕ್ಕೆ ಬಯಲಾಟ- ಗ್ರಾಮೀಣ ಉತ್ಸವದ ಜೊತೆಗೆ ತಾರೆಯರೊಂದಿಗೆ ಮಾತುಕತೆ, 11ಕ್ಕೆ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ‘ಡಾನ್ಸ್ ಕುಂದಾಪ್ರ ಡಾನ್ಸ್’, 11.15ಕ್ಕೆ ಕುಂದಾಪುರ ಭಾಷೆ ಬದುಕು ಬರಹ ಕುರಿತು ನುಡಿಚಾವಡಿ, ಮಧ್ಯಾಹ್ನ 12ಕ್ಕೆ ಮನು ಹಂದಾಡಿ ಅವರಿಂದ ಹಾಸ್ಯ ಕಾರ್ಯಕ್ರಮ, ಮಧ್ಯಾಹ್ನ 1.30ಕ್ಕೆ ಚಂಡೆ-ಜಂಬೆ ಜುಗಲ್ಬಂದಿ, 2.20ಕ್ಕೆ ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ಮತ್ತು ಮಂದಾರ್ತಿ ಮಾದೇವಿ ನೃತ್ಯ, 4.30ಕ್ಕೆ ರಥೋತ್ಸವ, ರಾತ್ರಿ 7.30ಕ್ಕೆ ರವಿ ಬಸ್ರೂರ್‌ ನೈಟ್ಸ್‌ ಅವರಿಂದ ಸಂಗೀತ ಸಂಜೆ ಸೇರಿದಂತೆ ಕಾರ್ಯಕ್ರಮದ ನಡುವೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ಡಾ। ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಲೆಕ್ಕಪರಿಶೋಧಕ ವಿಜಯ್ ಶೆಟ್ಟಿ, ಕ್ರೀಡಾ ಸಂಚಾಲಕ ಚಂದ್ರಶೇಖರ್ ಉಪಸ್ಥಿತರಿದ್ದರು.

Share this article