ಸರ್ಕಾರಿ ಕರ್ತವ್ಯ ಲೋಪ, ನಕಲಿ ದಾಖಲೆ ಸೃಷ್ಟಿ, ಆದೇಶ ಪಾಲನೆಯಲ್ಲಿ ನಿರ್ಲಕ್ಷ್ಯ, ವರದಿ ಸಲ್ಲಿಕೆ ವಿಳಂಬ ಆರೋಪ
ಕನ್ನಡಪ್ರಭ ವಾರ್ತೆ ಉಡುಪಿಸರ್ಕಾರಿ ಕರ್ತವ್ಯದಲ್ಲಿ ಲೋಪ, ನಕಲಿ ದಾಖಲೆಗಳ ಸೃಷ್ಟಿ ಇತ್ಯಾದಿ ಆರೋಪಗಳಡಿಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಕೆ.ಮಹೇಶ್ಚಂದ್ರ ಅವರನ್ನು ಅಮಾನತುಗೊಳಿಸಲಾಗಿದೆ.
ಮಹೇಶ್ಚಂದ್ರ ಅವರು ಹಿಂದೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದರು. ಇಲ್ಲಿನ ಬಡಾನಿಡಿಯೂರು ಗ್ರಾಮದಲ್ಲಿ 90 ಸೆಂಟ್ಸ್ ಜಮೀನಿನಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಅಧಿಕಾರಿಗಳ ಬಗ್ಗೆ ಉಡುಪಿ ಶಾಸಕರು ಆರೋಪಿಸಿದ್ದರು. ಆದರೆ ಅದಕ್ಕೆ ತೃಪ್ತಿಕರ ಸಮಜಾಯಿಷಿ ನೀಡದೇ ಕರ್ತವ್ಯ ಲೋಪ ಎಸಗಿದ್ದು, ಜಿಲ್ಲಾಡಳಿತಕ್ಕೆ ಮುಜುಗುರವಾಗಿದೆ ಎಂದು ಸ್ವತಃ ಜಿಲ್ಲಾಧಿಕಾರಿ ಅವರೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.ಅಲ್ಲದೇ ಮಹೇಶ್ಚಂದ್ರ ಅವರು ಉದ್ದೇಶಪೂರ್ವಕವಾಗಿ ಸಾರ್ವಜನಿಕರ ಅರ್ಜಿ ವಿಲೇಯಲ್ಲಿ ವಿಳಂಬ ಮಾಡುತಿದ್ದಾರೆ. ಮೇಲಾಧಿಕಾರಿಗಳ ಆದೇಶ ಪಾಲಿಸುತ್ತಿಲ್ಲ, ರಾಹೆ ಯೋಜನೆಗೆ ಭೂಸ್ವಾಧೀನ ಪರಿಹಾರ ಮೊತ್ತ ಭೂಮಾಲಿಕರಿಗೆ ಪಾವತಿಸಿಲ್ಲ, ಜಮೀನನ್ನು ರಾಹೆ ಪ್ರಾಧಿಕಾರಕ್ಕೆ ಹಸ್ತಾಂತರಿಸಿಲ್ಲ, ಕಚೇರಿಗೆ ಆಗಮಿಸುವ ಜನರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ, ಕಚೇರಿಯ ಸಿಬ್ಬಂದಿಗಳನ್ನು ಭೇಟಿಯಾಗುವಂತೆ ಸೂಚಿಸುತ್ತಾರೆ, ಕೆಲುವು ಯೋಜನೆಗಳಲ್ಲಿ ಸರ್ಕಾರದ ಧೋರಣೆಗಳಿಗೆ ವಿರುದ್ಧವಾಗಿ ಕಾರ್ಯವೆಸಗುತ್ತಿದ್ದಾರೆ ಎಂದೆಲ್ಲಾ ವರದಿಯಲ್ಲಿ ಹೇಳಲಾಗಿದೆ.ಅಲ್ಲದೇ ಪಡುಬಿದ್ರಿಯಲ್ಲಿ ಕಾರ್ಯಾಚರಿಸುತಿದ್ದ ಸುಜ್ಲಾನ್ ಕಂಪನಿಯ ಬಗ್ಗೆ ಸಾರ್ವಜನಿಕರ ದೂರುಗಳ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿದ್ದ ಅವರು ವರದಿಯನ್ನು ಸಲ್ಲಿಸಿಲ್ಲ, ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ರಚಿಸಲಾದ ಉಪಸಮಿತಿಯ ಅಧ್ಯಕ್ಷರಾಗಿದ್ದ ಅವರು ಬಿಡ್ಡುದಾರರಲ್ಲಿ ಗೊಂದಲವನ್ನುಂಟು ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ.ಜಿಲ್ಲಾಧಿಕಾರಿ ಅವರ ವರದಿ ಆಧಾರದಲ್ಲಿ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಸರ್ಕಾರ ಮಹೇಶ್ಚಂದ್ರ ಅವರ ಮೇಲೆ ತನಿಖೆಗೆ ಆದೇಶಿಸಿದೆ ಮತ್ತು ಮುಂದಿನ ಆದೇಶದವರೆಗೆ ಅವರನ್ನು ಅಮಾನತು ಮಾಡಲಾಗಿದೆ.ತೆರವಾದ ಈ ಸ್ಥಾನಕ್ಕೆ 2023ರಲ್ಲಿ ಇದೇ ಉಪವಿಭಾಗಾಧಿಕಾರಿಯಾಗಿದ್ದ ರಶ್ಮಿ ಎಸ್.ಆರ್. ಅವರನ್ನು ತಕ್ಷಣದಿಂದಲೇ ನೇಮಿಸಲಾಗಿದೆ.