ಕನ್ನಡಪ್ರಭ ವಾರ್ತೆ ಕುಣಿಗಲ್ ತಾಲೂಕಿನ ಚಿಕ್ಕ ಮಳಲವಾಡಿ ಗ್ರಾಮದಲ್ಲಿ ಇರುವ ಕುಣಿಗಲ್ ಅಮ್ಮ ದೇವಾಲಯ ಶಿಥಿಲಾವಸ್ಥೆ ಹಾಗೂ ಅಲ್ಲಿನ ದುಸ್ಥಿತಿಯ ಬಗ್ಗೆ ಕನ್ನಡ ಪ್ರಭದಲ್ಲಿ ಸಮಗ್ರ ವರದಿ ಮಾಡಿದ ಹಿನ್ನೆಲೆಯಲ್ಲಿ ಭಕ್ತರ ಸಮ್ಮುಖದಲ್ಲಿ ದೇವಾಲಯದ ಅಭಿವೃದ್ಧಿಗೆ ಚಾಲನೆ ನೀಡಿದರು.ಪ್ರತಿಯೊಂದು ಗ್ರಾಮಕ್ಕೆ ಗ್ರಾಮ ದೇವತೆ ಇದ್ದು ಗ್ರಾಮ ದೇವತೆ ಹೆಸರಿನಲ್ಲಿ ಇರುವಂತೆ ಕುಣಿಗಲ್ ಅಮ್ಮ ದೇವಾಲಯ ಕುಣಿಗಲ್ ವ್ಯಾಪ್ತಿಗೆ ಒಳಪಡುತ್ತಿದ್ದ ಚಿಕ್ಕ ಮಳಲವಡಿ ಗ್ರಾಮದಲ್ಲಿ ಇದೆ. ಸಾವಿರಾರು ವರುಷಗಳ ಇತಿಹಾಸ ಇರುವ ಈ ಕುಣಿಗಲ್ಲಮ್ಮ ದೇವಾಲಯ ಶಿಥಿಲಗೊಂಡಿದ್ದು ಬೀಳುವ ಹಂತದಲ್ಲಿತ್ತು. ಈ ಬಗ್ಗೆ ಆಗಸ್ಟ್ 15 ರ ಗುರುವಾರ ಕನ್ನಡ ಪ್ರಭ ಪತ್ರಿಕೆಯಲ್ಲಿ ಸಮಗ್ರ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಗ್ರಾಮಸ್ಥರು ವರಮಹಾಲಕ್ಷ್ಮಿ ಹಬ್ಬದ ದಿನದಂದು ಈ ದೇವಾಲಯದ ಸುತ್ತಲಿನ ಗಿಡಗಂಟೆ ತೆರವುಗೊಳಿಸಿ ಸುತ್ತಲೂ ಇದ್ದ ಹುತ್ತದ ಸುತ್ತಲಿನ ಪೊದೆಯನ್ನು ಸರಿಸಿ ದೇವಾಲಯ ಸ್ವಚ್ಛಗೊಳಿಸಿ ಚಪ್ಪರ ಶಾಮಿಯಾನ ಹೊಸ ನಾಮಫಲಕ ಹಾಕುವುದರ ಜೊತೆಗೆ ವಿದ್ಯುತ್ ದೀಪಗಳಿಂದ ದೇವಾಲಯವನ್ನು ಹಾಗೂ ಹಲವಾರು ವಿವಿಧ ಹೂಗಳಿಂದ ಕುಣಿಗಲ್ ಅಮ್ಮನ ವಿಗ್ರಹವನ್ನು ಶೃಂಗರಿಸಿ ಸುತ್ತಲಿನ ಗ್ರಾಮಸ್ಥರು ಪೂಜೆ ಸಲ್ಲಿಸುವ ಮುಖಾಂತರ ತಾಯಿಯ ಕೃಪೆಗೆ ಪಾತ್ರರಾದರು. ಚಿಕ್ಕಮಳವಾಡಿ ಗ್ರಾಮಸ್ಥರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಭಕ್ತರು ದಾನಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಇಲ್ಲಿಗೆ ಬಂದಿದ್ದ ಭಕ್ತರಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು,ಕುಣಿಗಲ್ ಅಮ್ಮ ದೇವಾಲಯಕ್ಕೆ ಭೇಟಿ ನೀಡಿದ ಕಿತ್ನಾಮಂಗಲದ ಅರೇ ಶಂಕರ ಮಠದ ಪೀಠಾಧ್ಯಕ್ಷರಾದ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ ಮಾಧ್ಯಮಗಳು ಇಂತಹ ದೇವಾಲಯಗಳ ಬಗ್ಗೆ ಹೆಚ್ಚು ವರದಿ ಮಾಡಿ ಜನ ಮತ್ತು ಸರ್ಕಾರವನ್ನು ಆಕರ್ಷಿಸುವ ಮತ್ತು ಜಾಗೃತಗೊಳಿಸುವ ಕೆಲಸವನ್ನು ಮಾಡಬೇಕಿದೆ. ಕನ್ನಡಪ್ರಭ ಇಂತಹ ವರದಿ ಮಾಡಿರುವುದು ಅಭಿನಂದನಾ ವಿಚಾರವಾಗಿದೆ ಮುಂದಿನ ದಿನಗಳಲ್ಲಿ ದೇವಾಲಯ ನಿರ್ಮಾಣಕ್ಕೆ ಉತ್ತಮ ಸ್ಪಂದನೆ ನೀಡಬೇಕೆಂದರು.
ಅಯೋಧ್ಯ ದೇವಾಲಯದಲ್ಲಿ ಪೂಜಾಸಮಿತಿಯ ಸದಸ್ಯ ಕೆಂಬಳಲು ನಾರಾಯಣಸ್ವಾಮಿ ಮಾತನಾಡಿ ಕುಣಿಗಲ್ ಅಮ್ಮ ಎಂಬ ಶಕ್ತಿ ದೇವತೆ ರಕ್ಷಣೆಗಾಗಿ ಹುತ್ತ ಬೆಳೆದಿದೆ ಆ ತಾಯಿಯ ಶಕ್ತಿ ಇಂದು ಕೂಡ ಇಲ್ಲಿ ಜೀವಂತವಾಗಿದ್ದು ಇಲ್ಲಿ ನೀವು ಯಾವುದೇ ಬೇಡಿಕೆ ಪ್ರಾರ್ಥನೆಗಳು ಗುಣಾತ್ಮಕವಾಗಿ ಒಳಿತಾಗುತ್ತದೆ. ಪ್ರತಿಯೊಬ್ಬರೂ ಬಂದು ದರ್ಶನ ಮಾಡುವುದರಿಂದ ಸಕಲ ಪಾಪಗಳು ದೂರಾಗುವುದರ ಜೊತೆಗೆ ಧನ ಲಾಭ ಬರುತ್ತದೆ ಯಾಕೆಂದರೆ ಇದು ಶಕ್ತಿ ಹಾಗೂ ಲಕ್ಷ್ಮಿ ಸ್ವರೂಪಳಾಗಿ ನೆಲೆಸಿದ್ದಾಳೆ ಎಂದರು. ಅಭಿವೃದ್ಧಿ ಸಮಿತಿ ರಚನೆ ಬೆಂಗಳೂರು ಮೈಸೂರು ಕುಣಿಗಲ್ ಸೇರಿದಂತೆ ಇತರೆಡೆಗಳಿಂದ ಹಲವಾರು ಭಕ್ತರು ದೇವಿಯ ದೇವಾಲಯವನ್ನು ನಿರ್ಮಾಣ ಮಾಡಲು ಸಹಾಯ ಹಸ್ತ ನೀಡಿದ್ದು ಚಿಕ್ಕಮಳವಾಡಿ ನೂರಾರು ಮಂದಿ 500 ಇಂದ 5 ಸಾವಿರದ ವರೆಗೆ ಹಣ ಕಬ್ಬಿಣ ಸಿಮೆಂಟ್ ಇಟ್ಟಿಗೆ ನೀಡುವ ಭರವಸೆ ನೀಡಿದ್ದಾರೆ. ಇದರಿಂದ ದೇವಾಲಯ ನಿರ್ಮಾಣ ಸಮಿತಿಯನ್ನು ಮಾಡಿಕೊಂಡ ಗ್ರಾಮಸ್ಥರು ಕೆಲವೇ ದಿನಗಳಲ್ಲಿ ದೇವಾಲಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದು ಸರ್ಕಾರ ಮತ್ತು ಸಂಘ ಸಂಸ್ಥೆ ಹಾಗೂ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.ಕನ್ನಡ ಪ್ರಭಕ್ಕೆ ಅಭಿನಂದನೆಈ ಬಾರಿ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಭಕ್ತರಿಂದ ಮತ್ತು ದಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಆದ್ದರಿಂದ ನಾವು ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದೇವೆ ಅದಕ್ಕಾಗಿ ಕನ್ನಡಪ್ರಭ ಪತ್ರಿಕೆಯನ್ನು ಅಭಿನಂದಿಸುತ್ತೇವೆ ಎಂದು ಭಕ್ತರಾದ ಸುರೇಶ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ತಾ ಪಂ ಅಧ್ಯಕ್ಷ ಎನ್ ಟಿ ವೆಂಕಟೇಶ್ , ಮುಖಂಡರಾದ ಪಟೇಲ್ ವೆಂಕಟೇಶ್ , ಪುಟ್ಟಯ್ಯ , ಬಜ್ಜಪ್ಪ . ಶಿವರಾಜು , ಚಿಕ್ಕರಾಜು, ಸತೀಶ್ ಸುರೇಶ್ , ಬಸವರಾಜು ಸೇರಿದಂತೆ ಇತರರು ಇದ್ದರು .