ಹೊಸಕೋಟೆ: ಬಸ್ಸುಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ‘ಕುಪ್ಪಂ ಗ್ಯಾಂಗ್’ನ ಕಿಡಿಗೇಡಿಗಳನ್ನು ಹೊಸಕೋಟೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಕಳ್ಳತನಕ್ಕಾಗಿ ಮಕ್ಕಳನ್ನೇ ದಾಳವಾಗಿ ಬಳಸಿಕೊಳ್ಳುತ್ತಿದ್ದ ಈ ತಂಡವೀಗ ಪೊಲೀಸರ ಅತಿಥಿಯಾಗಿದ್ದಾರೆ.
ಬಸ್ಸಿನಲ್ಲಿ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಈ ಗ್ಯಾಂಗ್, ಜನನಿಬಿಡ ಸಂದರ್ಭದಲ್ಲಿ ಮಕ್ಕಳಿಗೆ ವಾಂತಿ ಬರುತ್ತಿದೆ ಎಂದು ನಾಟಕ ಮಾಡುತ್ತಿದ್ದರು. ವಾಂತಿ ಮಾಡುತ್ತಿರುವ ಮಗುವನ್ನು ಕಂಡು ಪ್ರಯಾಣಿಕರು ಅಯ್ಯೋ ಎನ್ನುತ್ತಾ ಸಹಾಯಕ್ಕೆ ಮುಂದಾದಾಗ ಅಥವಾ ಗಮನ ಬೇರೆಡೆ ಹರಿಸಿದಾಗ, ಅದೇ ಸಮಯವನ್ನು ಬಳಸಿಕೊಂಡು ಅವರ ಬಳಿಯಿರುವ ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದರು.
ಹೊಸಕೋಟೆ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬರ ಗಮನ ಬೇರೆಡೆ ಸೆಳೆದಿದ್ದ ಈ ಖದೀಮರು, ಅವರ ಕೊರಳಿನಲ್ಲಿದ್ದ 74 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ದಾಖಲಾದ ದೂರಿನನ್ವಯ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.ಬಂಧಿತನಿಂದ 12 ಲಕ್ಷ ಮೌಲ್ಯದ ಚಿನ್ನಾಭರಣ, ೩.೫೦ ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
3: ಹೊಸಕೋಟೆ ಪೊಲೀಸರು ಬಂಧಿತರಿಂದ ವಶಪಡಿಸಿಕೊಂಡಿರುವ ಹಣ ಹಾಗೂ ಒಡವೆಗಳು.