ಕುರುಗೋಡು: ಪಟ್ಟಣದ ಕಳೆದ ಬಾರಿಯ ಆಯ-ವ್ಯಯವೇ ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲ. ಮೂಲಸೌಲಭ್ಯ ದೊರೆಯದೇ ಜನರು ರೋಸಿ ಹೋಗಿದ್ದಾರೆ ಎಂದು ಸದಸ್ಯರು ಪುರಸಭೆಯಲ್ಲಿ ಕರೆಯಲಾಗಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯವೃತ್ತದ ಸುತ್ತಮುತ್ತ ವರ್ತಕರು ಕೊಳೆತ ಹಣ್ಣು ಮತ್ತು ತರಕಾರಿ ಬೀದಿಗೆ ಬಿಸಾಡುತ್ತಿದ್ದಾರೆ. ಇದರಿಂದ ವಾತಾವರಣ ಕಲುಷಿತಗೊಳ್ಳುವ ಜತೆಗೆ ಬಿಡಾಡಿ ದನ ಮುಗಿಬೀಳುತ್ತಿವೆ. ಹೀಗಿದ್ದರೂ ಪುರಸಭೆ ಸಿಬ್ಬಂದಿ ಅವರ ವಿರುದ್ಧ ಕ್ರಮ ಜರುಗಿಸದೇ ಮೌನ ವಹಿಸಿರುವುದು ಏಕೆ? ಎಂದು ಸದಸ್ಯ ಮಂಜುನಾಥ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪುರಸಭೆ ಅಧ್ಯಕ್ಷ ಶೇಖಣ್ಣ, ನಿತ್ಯ ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ನಿಯಮ ಪಾಲಿಸದವರ ವಿರುದ್ಧ ದಂಡ ವಿಧಿಸಿ ಎಂದು ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದರು.ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಪ್ರತಿಕ್ರಿಯಿಸಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳು ಸಲ್ಲಿಸುವ ಬಜೆಟ್ ಆಧಾರದಲ್ಲಿ ರಾಜ್ಯ ಸರ್ಕಾರ ಬಜೆಟ್ ತಯಾರಿಸುತ್ತದೆ. ಸರ್ಕಾರ ದಿಂದ ದೊರೆಯುವ ಅನುದಾನ ಮತ್ತು ಪುರಸಭೆಯ ವಿವಿಧ ಮೂಲಗಳಿಂದ ಬರುವ ಆದಾಯದ ಆಧಾರದ ಮೇಲೆ ಪ್ರತಿ ವರ್ಷ ಬಜೆಟ್ ತಯಾರಿಸಬೇಕು ಎನ್ನುವ ನಿಯಮವಿದೆ. ಅಗತ್ಯ ಕಾಮಗಾರಿ ಬಗ್ಗೆ ಮಾಹಿತಿ ನೀಡಿ ಈ ವರ್ಷದ ಬಜೆಟ್ ನಲ್ಲಿ ಅಳವಡಿಸಿ ಎಲ್ಲರೂ ಸೇರಿ ಅನುಷ್ಟಾನಗೊಳಿಸೋಣ ಎಂದರು.