ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಗೌಡ ಸಮಾಜ ಆಶ್ರಯದಲ್ಲಿ ಸಮಾಜದ ವಿವಿಧ ಸಂಘಗಳ ಸಹಯೋಗದಲ್ಲಿ ಅರೆಭಾಷೆ ದಿನಾಚರಣೆ ನಡೆಯಿತು.ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾಭಿವೃದ್ಧಿ ಸಾಧ್ಯ. ಅರೆಭಾಷೆಯನ್ನು ನಿರಂತರ ಚಟುವಟಿಕೆಗಳ ಮೂಲಕ ಉಳಿಸಿ ಬೆಳೆಸಬೇಕು. ಸಮುದಾಯದ ಉಡುಗೆ ತೊಡುಗೆಗಳಲ್ಲಿ ಗೊಂದಲ ಇರಬಾರದು. ಸಮಾಜದ ಸಂಘಟನೆಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಸ್ಕೃತಿ ಆಚಾರ-ವಿಚಾರಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಜಾಗೃತಿ ಮೂಡಿಸಬೇಕು. ಪೂರ್ವಿಕರನ್ನು ಸ್ಮರಿಸಬೇಕು ಎಂದು ತಿಳಿ ಹೇಳಿದರು.ಕುಶಾಲನಗರ ಗೌಡ ಸಮಾಜದ, ಮಹಿಳಾ ಸಮಾಜಗಳ ಶಿಸ್ತು ಬದ್ಧ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸೈನಿಕರಾದ ಕುದುಪಜೆ ಭೋಜಪ್ಪ ಮಾತನಾಡಿ, ಆಚಾರ, ವಿಚಾರ, ಸಂಸ್ಕೃತಿಗಳು ಮನೆಯಿಂದ ಆರಂಭಗೊಳ್ಳುತ್ತದೆ. ತಾಯಿ ಇದಕ್ಕೆ ಪ್ರಮುಖ ಕಾರಣರಾಗಿರುತ್ತಾರೆ. ಹುಟ್ಟು ಸಾವು ನಡುವೆ ಸಂಸ್ಕೃತಿ ಸಂಸ್ಕಾರ ನಿರಂತರ ಜೊತೆಯಲ್ಲಿ ಇರುತ್ತದೆ ಎಂದರು.ಕುಲಚೆಟ್ಟಿರ ಕಾಶಿಪುವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಆಚಾರ ವಿಚಾರಗಳ ಬಗ್ಗೆ ಮಾಹಿತಿ ಒದಗಿಸಿದರು.
ಸಮಾಜದ ಉಪಾಧ್ಯಕ್ಷ ಸೆಟ್ಟಜನ ದೊರೆ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗೌಡ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಸೂದನ ಗೋಪಾಲ್, ಪದ್ಮಾವತಿ ಗೌಡ ಮಹಿಳಾ ಸಂಘ ಅಧ್ಯಕ್ಷೆ ಚಿಯಂಡಿ ಶಾಂತಿ, ಗೌಡ ಸ್ವಸಹಾಯ ಸಂಘ ಅಧ್ಯಕ್ಷರಾದ ಸೂದನ ಲಲಿತ, ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ, ಗೌಡ ನಿವೃತ್ತ ಸೈನಿಕರ ಕೂಟದ ಅಧ್ಯಕ್ಷರಾದ ದೇವಜನ ಚಿನ್ನಪ್ಪ, ಸಮಾಜದ ಪ್ರಧಾನ ಕಾರ್ಯದರ್ಶಿ ಕುಲ್ಲಚನ ಹೇಮಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪಳಂಗೊಟ್ಟು ವಿನಯ್ ಕಾರ್ಯಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು.