ಕನ್ನಡಪ್ರಭ ವಾರ್ತೆ ಕುಶಾಲನಗರ
ನಾಡು ಕಂಡ ಧೀಮಂತ ನಾಯಕ, ಗಂಡುಗಲಿ ಖ್ಯಾತಿಯ ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಪರಿಶ್ರಮದ ಫಲವಾಗಿ ಕುಶಾಲನಗರ ಅಭಿವೃದ್ಧಿಯ ನಾಗಾಲೋಟ ಕಾಣಲು ಸಾಧ್ಯವಾಯಿತು ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದ್ದಾರೆ.ಕುಶಾಲನಗರದ ಸಮಾನ ಮನಸ್ಕರ ವೇದಿಕೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಗುಂಡೂರಾವ್ ಪುಣ್ಯ ಸ್ಮರಣೆ’ ಕಾರ್ಯಕ್ರಮದಲ್ಲಿ ಗುಂಡೂರಾವ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಮೂರು ದಶಕಗಳ ಹಿಂದೆಯೇ ಮುಂದಿನ 30 ವರ್ಷಗಳ ದೂರದೃಷ್ಟಿ ಹೊಂದುವ ಮೂಲಕ ಸಾಕಷ್ಟು ಅಭಿವೃದ್ಧಿಯ ಪರ್ವ ಆರಂಭಿಸಿದ ಗುಂಡೂರಾವ್ ಅವರನ್ನು ಊರು ನಿತ್ಯವೂ ಸ್ಮರಿಸುವಂತಹ ಅವರ ಪ್ರತಿಮೆಯನ್ನು ಕುಶಾಲನಗರದ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಲೇಬೇಕಿದೆ ಎಂದರು.ಕುಶಾಲನಗರದ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್ ಮಾತನಾಡಿ, ಗುಂಡೂರಾವ್ ಹೆಸರು ಕುಶಾಲನಗರ ಊರಿನೊಂದಿಗೆ ತಳುಕು ಹಾಕಿಕೊಂಡಿರುವುದರಿಂದ ಅವರ ಹೆಸರನ್ನು ಊರಿನವರು ಒಗ್ಗೂಡಿ ಚಿರಸ್ಥಾಯಿಗೊಳಿಸಬೇಕೆಂದರು.
ಕುಶಾಲನಗರದ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಮಾತನಾಡಿ, ಗುಂಡೂರಾವ್ ಕುಶಾಲನಗರಕ್ಕೆ ಮಾಡಿದ ಅಭಿವೃದ್ಧಿ ಯೋಜನೆಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಗುಂಡೂರಾವ್ ನಂತರದ ಯಾವುದೇ ರಾಜಕಾರಣಿಗಳು, ಜನಪ್ರತಿನಿಧಿಗಳಿಂದ ಕುಶಾಲನಗರದ ವಿಶೇಷ ಪ್ರಗತಿ ಸಾಧ್ಯವಾಗಿಲ್ಲ ಎಂದರು.ಸಮಾನ ಮನಸ್ಕ ವೇದಿಕೆ ಸಂಚಾಲಕ ಕೆ.ಎಸ್.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಗುಂಡೂರಾವ್ ಕಟ್ಟಿ ಬೆಳೆಸಿದ ಕುಶಾಲನಗರದಲ್ಲಿ ಬದುಕು ಕಟ್ಟಿರುವ ಪ್ರತಿಯೊಬ್ಬರು ಅವರನ್ನು ಸ್ಮರಿಸಬೇಕು ಎಂದರು.
ಕಾವೇರಿ ನದಿ ಸಂರಕ್ಷಣಾ ಸಮಿತಿ ಸಂಚಾಲಕ ಎಂ.ಎನ್.ಚಂದ್ರಮೋಹನ್ ಮಾತನಾಡಿ, ಕುಶಾಲನಗರ ಜಿಲ್ಲೆಯಲ್ಲಿಯೇ ವೇಗದಲ್ಲಿ ಅಭಿವೃದ್ದಿ ಹೊಂದಲು ಕಾರಣೀಭೂತರಾಗಿರುವ ದಿ.ಗುಂಡೂರಾವ್ ಜಯಂತಿ ಹಾಗೂ ಸ್ಮರಣೆ ಕಾರ್ಯಕ್ರಮಗಳನ್ನು ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಪ್ರತೀ ವರ್ಷ ರೂಪಿಸಬೇಕು ಎಂದರು.ಉದ್ಯಮಿ ಮಂಜುನಾಥ ಗುಂಡೂರಾವ್, ಎಸ್.ಎನ್.ರಾಜೇಂದ್ರ, ಪುರಸಭೆ ಸದಸ್ಯ ಬಿ.ಅಮೃತರಾಜು, ಮಾಜಿ ಸದಸ್ಯ ಎಂ.ನಂಜುಂಡಸ್ವಾಮಿ ಮಾತನಾಡಿದರು.
ಮಾಜಿ ಸದಸ್ಯ ಕೆ.ಜಿ.ಮನು, ಕಲಾವಿದ ರಾಜು, ಮಂಜುನಾಥ್,ಪ್ರಕಾಶ್, ಗಯಾಜ್ ಇದ್ದರು.