ಕನ್ನಡಪ್ರಭ ವಾರ್ತೆ ಕುಶಾಲನಗರಅಣೆಕಟ್ಟು, ಜಲಾಶಯಗಳನ್ನು ನಿರ್ಮಿಸಿದ ಸಂದರ್ಭ ಮುಳುಗಡೆಯಾಗಿ ಭೂಮಿ ಕಳೆದುಕೊಂಡ ಭೂಮಾಲೀಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ರೂಪಿಸಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಪುತ್ರ ಹಾಗೂ ಮಾಜಿ ಶಾಸಕ ಕೈಲಾಸ್ ನಾಥ್ ವಿ. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೈತಾಪಿ ವರ್ಗ ಆರ್ಥಿಕವಾಗಿ ಸದೃಢರಾಗಬೇಕಾದಲ್ಲಿ ಅವರಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾಗುತ್ತದೆ ಎಂದು ಕೈಲಾಸ್‌ನಾಥ್ ಹೇಳಿದರು.
ರಾಜ್ಯದಲ್ಲಿ ಜಲಾಶಯ ಅಣೆಕಟ್ಟುಗಳ ನಿರ್ಮಾಣ ಸಂದರ್ಭ ಭೂಮಿ ಕಳೆದುಕೊಂಡ ರೈತರ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದರು. ಈ ಬಗ್ಗೆ ಹಾಲಿ ಮತ್ತು ಮಾಜಿ ಶಾಸಕರು ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದರು.ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗಿದ್ದ ಸಂದರ್ಭ ರಾಜ್ಯದಲ್ಲಿ ವಿವಿಧಡೆ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಅದರಲ್ಲಿ ಹಾರಂಗಿ ಕೂಡ ಒಂದಾಗಿದೆ ಎಂದು ಅವರು ನೆನಪಿಸಿದರು.ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಎಚ್.ಸಿ. ಬಸವರಾಜ್ ಜನರಲ್ಲಿ ಸ್ಮರಣೆ ಸಂಸ್ಕೃತಿ ಅಗತ್ಯವಾಗಿದೆ ಎಂದರಲ್ಲದೆ ಯುವ ಪೀಳಿಗೆ ಇತಿಹಾಸದ ಬಗ್ಗೆ ಗಮನಹರಿಸಬೇಕಾಗಿದೆ. ತ್ಯಾಗ ಬಲಿದಾನ ಮೂಲಕ ಸಾಮಾಜಿಕ ಕೆಲಸಗಳನ್ನು ನಿರ್ವಹಿಸಿದ ಚೇತನಗಳ ಬಗ್ಗೆ ಸ್ಮರಿಸುವುದು ಅಗತ್ಯವಾಗಿದೆ ಎಂದರು.ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಜನ್ಮದಿನೋತ್ಸವ ಲಾಂಛನ ಬಿಡುಗಡೆ ಮಾಡಿದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ನೀರಾವರಿ ಮೂಲಕ ಆರ್ಥಿಕ ಬೆಳವಣಿಗೆ ಸಾಧ್ಯ ಎಂದರಲ್ಲದೆ ಪ್ರತಿಯೊಬ್ಬರೂ ಪ್ರಕೃತಿ ಬಗ್ಗೆ ಕಾಳಜಿ ವಹಿಸಬೇಕು. ರೈತಾಪಿ ವರ್ಗಕ್ಕೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿದಲ್ಲಿ ರಾಜ್ಯ ರಾಷ್ಟ್ರದ ಬೆಳವಣಿಗೆ ಅತಿ ಶೀಘ್ರ ಕಾಣಬಹುದು ಎಂದರು.ಜಿಲ್ಲೆಯಲ್ಲಿ ಹಾರಂಗಿ ಅಣೆಕಟ್ಟು ನಿರ್ಮಾಣ ಸಂದರ್ಭ ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಅವರ ಕಾರ್ಯ ಯೋಜನೆಗಳ ಬಗ್ಗೆ ಅವರು ಶ್ಲಾಘಿಸಿದರು.
ಹಾರಂಗಿ ನೀರು ಬಳಕೆದಾರರ ಮಹಾಮಂಡಲ ಅಧ್ಯಕ್ಷ ಚೌಡೇಗೌಡ, ಕೂಡು ಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ ನಾಯಕ್ ಮಾತನಾಡಿದರು. ಮುಖ್ಯ ಅತಿಥಿಗಳು ಹಾಗೂ ಮಾಜಿ ಶಾಸಕರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.