ಕಲಾವಿದರ ಉಪಯೋಗಕ್ಕಿಲ್ಲದ ಕುಶಾಲನಗರ ಕಲಾಭವನ

KannadaprabhaNewsNetwork |  
Published : Feb 02, 2024, 01:01 AM IST
ಕಲಾಭವನ | Kannada Prabha

ಸಾರಾಂಶ

ಕುಶಾಲನಗರದ ಹೃದಯ ಭಾಗದಲ್ಲಿ ಕಲಾ ಚಟುವಟಿಕೆಗಳಿಗೆ ಅನುಕೂಲವಾಗಲೆಂದು 2009ರಲ್ಲಿ ಚಾಲನೆಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾಭವನ, 2024 ಬಂದರೂ ಇನ್ನೂ ಲೋಕಾರ್ಪಣೆಯಾಗಿಲ್ಲ. ಕಲಾಭವಣದ ಕಟ್ಟಡ ಪೂರ್ಣಗೊಂಡರೂ ಒಳಗಿನ ಮೂಲ ಸೌಕರ್ಯಗಳು ಬಾಕಿ ಇವೆ.

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕಿನ ಮತ್ತು ನೆರೆಯ ಜಿಲ್ಲೆಗಳ ಕಲಾವಿದರಿಗೆ ಪ್ರೋತ್ಸಾಹ ನೀಡುವ ಜೊತೆಗೆ ಕಲೆಗಳಿಗೆ ವೇದಿಕೆ ಸೃಷ್ಟಿ ಮಾಡುವ ಉದ್ದೇಶದೊಂದಿಗೆ ಕುಶಾಲನಗರದಲ್ಲಿ ನಿರ್ಮಾಣಗೊಂಡಿರುವ ಯೋಜನೆಯೊಂದು ಸುಮಾರು ಒಂದು ದಶಕ ಕಳೆದರೂ ಇನ್ನೂ ಲೋಕಾರ್ಪಣೆಯಾಗದೆ ಕಲಾವಿದರ ಉಪಯೋಗಕ್ಕಿಲ್ಲದಂತಾಗಿದೆ. ಇದು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯನ್ನು ಪ್ರಶ್ನಿಸುವಂತಿದೆ.ಕುಶಾಲನಗರದ ಹೃದಯ ಭಾಗದಲ್ಲಿ ಕಲಾ ಚಟುವಟಿಕೆಗಳಿಗೆ ಅನುಕೂಲವಾಗಲೆಂದು 2009ರಲ್ಲಿ ಚಾಲನೆಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾಭವನ, 2024 ಬಂದರೂ ಇನ್ನೂ ಲೋಕಾರ್ಪಣೆಯಾಗದಿರುವುಕ್ಕೆ ಹೊಣೆ ಯಾರು ಎಂಬುದು ಕಲಾರಸಿಕರು, ಸಾರ್ವಜನಿಕರ ಪ್ರಶ್ನೆಯಾಗಿದೆ.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು 2009ರಲ್ಲಿ ಶಂಕುಸ್ಥಾಪನೆ ಸ್ಥಾಪನೆ ನೆರವೇರಿಸಿದ್ದು, ನಂತರ ದಿನಗಳಲ್ಲಿ ಹಲವು ಸರ್ಕಾರಗಳು ಅಧಿಕಾರಕ್ಕೆ ಬಂದರೂ ಈ ಯೋಜನೆ ಮಾತ್ರ ನನೆಗುದಿಗೆ ಬಿದ್ದಿದೆ.* ಕಟ್ಟಡ ಪೂರ್ಣಗೊಂಡರೂ ವ್ಯವಸ್ಥೆಗಳಿಲ್ಲಆರಂಭಿಕವಾಗಿ ೩ ಕೋಟಿ ರು. ಅನುದಾನದಲ್ಲಿ ಕಾಮಗಾರಿ ಚಾಲನೆಗೊಂಡಿತು. ಬಳಿಕ ಹೆಚ್ಚುವರಿಯಾಗಿ ೯೦ ಲಕ್ಷದ ಪ್ರಸ್ತಾವನೆಯ ಅನುದಾನ ಕೂಡ ಬಿಡುಗಡೆಯಾಯಿತು. ಆದರೆ ಕುಂಟುತ್ತಾ ಸಾಗಿದ ಕಾಮಗಾರಿ ವೆಚ್ಚ ದುಪ್ಪಟ್ಟಾಯಿತು. ಒಳಾಂಗಣದ ಅಪೂರ್ಣ ಕಾಮಗಾರಿ, ಹೊರ ಆವರಣದಲ್ಲಿ ಕೆಲವೊಂದು ಕಾಮಗಾರಿಗೆ ಹೆಚ್ಚುವರಿ ೨ ಕೋಟಿಯ ಬೇಡಿಕೆ ಸರ್ಕಾರದ ಮಟ್ಟದಲ್ಲಿ ಬೇಡಿಕೆಯಾಗಿಯೇ ಉಳಿಯಿತು. ಇದರಿಂದ ಕಟ್ಟಡ ಪೂರ್ಣಗೊಂಡಿದ್ದರೂ ಒಳಗೆ ಆಸನದ ವ್ಯವಸ್ಥೆ, ಧ್ವನಿ ಮತ್ತು ಬೆಳಕು, ಕಟ್ಟಡ ಸುತ್ತಲೂ ಇಂಟರ್ ಲಾಕ್, ಜನರೇಟರ್, ನೀರಿನ ವ್ಯವಸ್ಥೆಗೆ ಕೊಳವೆಬಾವಿ, ಕ್ಯಾಂಟಿನ್ ಮತ್ತಿತರ ವ್ಯವಸ್ಥೆಗಳು ಸಿದ್ಧಗೊಂಡಿಲ್ಲ.

ಇದಕ್ಕಾಗಿ 2015ರಲ್ಲಿ ಹೆಚ್ಚುವರಿ 2 ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಯಿತು. ಆದರೆ ಆ ಮೊತ್ತ ಇದುವರೆಗೆ ಬಿಡುಗಡೆಗೊಂಡಿಲ್ಲ. ಇನ್ನು ಇದೇ ಪ್ರಸ್ತಾವನೆ ಈಗಿನ ಕಾಲಘಟ್ಟಕ್ಕೆ ಹೋಲಿಸಿದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ಅವರ ಅಧಿಕಾರದ ನಂತರ ರಾಜ್ಯದಲ್ಲಿ ಆರು ಮುಖ್ಯಮಂತ್ರಿಗಳು ಬದಲಾದರೂ ಕುಶಾಲನಗರದ ಕಲಾಭವನ ಮಾತ್ರ ಲೋಕಾರ್ಪಣೆಗೊಳ್ಳುವಲ್ಲಿ ವಿಫಲವಾಗಿ ಸಾವಿರಾರು ಕಲಾವಿದರು ತಮ್ಮ ಸೌಲಭ್ಯದಿಂದ ವಂಚನೆಗೆ ಒಳಗಾದರೂ ಎಂದರೆ ತಪ್ಪಾಗಲಾರದು.

ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಗಳು, ಈ ಯೋಜನೆ ಇಲ್ಲಿ ನಡೆಯುತ್ತಿರುವುದನ್ನೇ ಮರೆತುಬಿಟ್ಟಿದ್ದಾರೆ. ಒಟ್ಟಾರೆ ಕೋಟ್ಯಂತರ ರು. ವೆಚ್ಚದ ಯೋಜನೆಯೊಂದು ಕಾಡುಪಾಲಾಗುತ್ತಿರುವುದು ಕಲಾಸಕ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತ ಈ ಬಗ್ಗೆ ಇನ್ನಾದರೂ ಗಮನಹರಿಸಬೇಕಾಗಿದೆ.

-----ಸ್ಥಳೀಯ ಕಲಾವಿದರು ಕಾರ್ಯಕ್ರಮಗಳಿಗೆ ಖಾಸಗಿ ಕಟ್ಟಡಗಳ ಸಭಾಂಗಣಕ್ಕೆ ಮೊರೆ ಹೋಗುವ ಮೂಲಕ ಹೆಚ್ಚಿನ ಮೊತ್ತವನ್ನು ಬಾಡಿಗೆ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಇದರಿಂದ ಕಲಾವಿದರು ತಮ್ಮ ಪ್ರತಿಭೆಗಳನ್ನು ಹೊರತರುವ ಕಾರ್ಯಕ್ರಮಗಳ ಆಯೋಜನೆಗೆ ಹಿಂದೇಟು ಹಾಕುವಂತಾಗಿದೆ.

। ಲೋಕೇಶ್ ಸಾಗರ್, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಮಾಜಿ ಅಧ್ಯಕ್ಷ-----------

ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗನೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು.। ಮಂತರ್‌ ಗೌಡ, ಮಡಿಕೇರಿ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ