ಕುಶಾಲನಗರ: ಮಿಡ್‌ಬ್ರೇನ್ ಆಕ್ಟಿವೇಶನ್ ಸ್ಪರ್ಧೆ

KannadaprabhaNewsNetwork | Published : Jan 31, 2024 2:16 AM

ಸಾರಾಂಶ

9ನೇ ವರ್ಷದ ರಾಜ್ಯ ಮಟ್ಟದ ಅಬಾಕಸ್, ವೇದಿಕ್ ಮ್ಯಾಥ್ಸ್, ರೂಬಿಕ್ಸ್ ಕ್ಯೂಬ್, ಕ್ಯಾಲಿಗ್ರಫಿ ಮತ್ತು ಮಿಡ್‌ಬ್ರೇನ್ ಆಕ್ಟಿವೇಶನ್ ಸ್ಪರ್ಧೆಯನ್ನು ಕುಶಾಲನಗರ ರೈತ ಸಹಕಾರ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕೊಡಗು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವಯ್ಯ ಎಸ್.ಪಲ್ಲೇದ್‌ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರಸ್ಮಾರ್ಟ್ ಬ್ರೈನ್ಸ್ ಅಬಾಕಸ್‌ ಅಕಾಡೆಮಿ ವತಿಯಿಂದ 9ನೇ ವರ್ಷದ ರಾಜ್ಯ ಮಟ್ಟದ ಅಬಾಕಸ್, ವೇದಿಕ್ ಮ್ಯಾಥ್ಸ್, ರೂಬಿಕ್ಸ್ ಕ್ಯೂಬ್, ಕ್ಯಾಲಿಗ್ರಫಿ ಮತ್ತು ಮಿಡ್‌ಬ್ರೇನ್ ಆಕ್ಟಿವೇಶನ್ ಸ್ಪರ್ಧೆಯನ್ನು ಕುಶಾಲನಗರ ರೈತ ಸಹಕಾರ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವಯ್ಯ ಎಸ್.ಪಲ್ಲೇದ್‌ ಕಾರ್ಯಕ್ರಮ ಉದ್ಘಾಟಿಸಿದರು.ಚಿಕ್ಕವಯಸ್ಸಿನಲ್ಲೇ ಮಕ್ಕಳು ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಇಂದಿನ ಪೈಪೋಟಿ ಯುಗದಲ್ಲಿ ಗುರಿ ಸಾಧಿಸಲು ಸಾಧ್ಯ ಎಂದು ಹೇಳಿದರು. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯವೆ ಹೊರತು ಸೋಲು ಗೆಲುವು ಮುಖ್ಯ ಅಲ್ಲ ಎಂದು ಅವರು ಕಿವಿಮಾತು ಹೇಳಿದರು. ನಿರಂತರ ಪರಿಶ್ರಮದ ಫಲವಾಗಿ ಗೆಲುವು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಅಬಾಕಸ್ ಪೂರಕವಾಗಿದೆ. ಇದರ ಸದುಪಯೋಗಪಡಿಸಿಕೊಂಡು ಪ್ರತಿಭಾನ್ವಿತರಾಗಿ ಮುಂದೆ ಬರಬೇಕೆಂದು ಕರೆ ನೀಡಿದರು.ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಶೈಜೆನ್ ಕೆ. ಪೀಟರ್ ಮಾತನಾಡಿ, ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಅಬಾಕಸ್‌ನಂತಹ ವಿಶಿಷ್ಟ ಜ್ಞಾನ ಹೊಂದುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಎಲ್ಲ ರೀತಿಯಲ್ಲಿಯೂ ಅನುಕೂಲಕರವಾಗಿದೆ.ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಬಾಕಸ್ ನಲ್ಲಿ ಪಾಲ್ಗೊಳ್ಳುತ್ತಿರುವುದು ಮೆಚ್ಚುಗೆಯ ವಿಷಯ ಎಂದು ಹೇಳಿದರು. ಉದ್ಗಮ್ ಶಾಲೆ ಪ್ರಾಂಶುಪಾಲ ಬೋಪಣ್ಣ, ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಅಕಾಡೆಮಿ ನಿರ್ದೇಶಕಿ ಕುಸುಮಾ ಎಸ್. ರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಬಾಕಸ್ ಪೂರ್ಣ ಶಿಕ್ಷಣ ಪಡೆದ ಮೂವರು ವಿದ್ಯಾರ್ಥಿಗಳಿಗೆ ಪದವಿ ಪ್ರಶಸ್ತಿ ಪ್ರದಾನ ಮಾಡಲಾಯಿತು . ಈ ಸಂದರ್ಭ ಅಬಾಕಸ್ ಅಕಾಡೆಮಿಯ ಶಿಕ್ಷಕರಾದ ಗೀತಾ, ಕಲ್ಪನಾ, ಕಾವ್ಯ, ಪವಿತ್ರ ಹಾಗೂ ನಿರ್ದೇಶಕರಾದ ಸುಕೇಶ್ ರಾಜ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಇದ್ದರು.

Share this article