ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಪ್ರಾಧಿಕಾರದ ಕಚೇರಿಯಲ್ಲಿ ಹೋಮ, ಪೂಜಾ ಕಾರ್ಯಕ್ರಮ ನೆರವೇರಿಸಿದ ಬಳಿಕ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಿದರು.
ನಂತರ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಜನಸಾಮಾನ್ಯರ ಕೆಲಸ ಕಾರ್ಯಗಳು ಕಾನೂನಿನ ಚೌಕಟ್ಟಿನಲ್ಲಿ ನಡೆಯುವಂತಾಗಬೇಕಿದೆ. ಜನಸೇವೆಗೆ ನೂತನ ಪದಾಧಿಕಾರಿಗಳು ಹಾಗೂ ಅಧಿಕಾರಿ ವರ್ಗದವರು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.ಅಧಿಕಾರದ ದರ್ಪ ತೋರದೆ ಕಚೇರಿಗೆ ಬರುವವರನ್ನು ಸೌಜನ್ಯದಿಂದ ರಾಜಕೀಯ ರಹಿತವಾಗಿ ಸೇವಾ ಮನೋಭಾವದೊಂದಿಗೆ ಸ್ಪಂದಿಸಿ ಕುಶಾಲನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸಬೇಕಿದೆ ಎಂದು ಕರೆ ನೀಡಿದರು.
ಕೊಡಗಿನ ವಾಣಿಜ್ಯ ನಗರಿ ಕುಶಾಲನಗರ ವೇಗವಾಗಿ ಬೆಳೆಯುತ್ತಿದೆ. ಹಲವು ಪ್ರಮುಖ ಯೋಜನೆಗಳು ಇಲ್ಲಿ ಅನುಷ್ಠಾನಗೊಳ್ಳುತ್ತಿದ್ದು ಇದನ್ನು ಸುಸೂತ್ರವಾಗಿ ನಿರ್ವಹಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಪ್ರಾಧಿಕಾರದ ಕಾರ್ಯಯೋಜನೆ ಆಗಬೇಕು. ಕುಶಾಲನಗರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಅವಕಾಶವನ್ನು ನೂತನ ಪದಾಧಿಕಾರಿಗಳು ಎಲ್ಲರ ಸಹಕಾರದ ಮೂಲಕ ಸಮರ್ಥವಾಗಿ ನಿಭಾಯಿಸುವಂತೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ, ಸ್ವಾರ್ಥ ರಹಿತವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಪ್ರಾಧಿಕಾರ ನಡೆಸುವಂತಾಗಲಿ ಎಂದರು.
ಕುಶಾಲನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ಚರಣ್, ತಹಸೀಲ್ದಾರ್ ಕಿರಣ್ ಗೌರಯ್ಯ, ಪುರಸಭಾ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸ್ವಾತಿ ಸೇರಿದಂತೆ ಪುರಸಭಾ ಸದಸ್ಯರು, ಕಾಂಗ್ರೆಸ್ ವಿವಿಧ ಘಟಕಗಳ ಪ್ರಮುಖರು ಇದ್ದರು.