ಸಾರಾಂಶ
ಮೂಲ ಸೌಕರ್ಯ ಹೆಚ್ಚಿಸಲು, ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಹಂತ ಹಂತವಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ಮೂಲ ಸೌಕರ್ಯ ಹೆಚ್ಚಿಸಲು, ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಹಂತ ಹಂತವಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭರವಸೆ ನೀಡಿದರು.ಬಿಜೆಪಿಯ ನಿರಾಣಿ ಹಣಮಂತಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಎರಡು ವರ್ಷಗಳಲ್ಲಿ ವಿವಿಗೆ 51.65 ಕೋಟಿ ರು. ಮಂಜೂರಾಗಿದ್ದು, ಪ್ರಸ್ತುತ 21.75 ಕೋಟಿ ರು. ಕಾಮಗಾರಿ ನಡೆಯುತ್ತಿದೆ. ಇದಲ್ಲದೆ ಬಾಗಲಕೋಟೆಯಲ್ಲಿ ಕಿಸಾನ್ ಮಾಲ್ ಸ್ಥಾಪನೆಗೆ 15 ಲಕ್ಷ ರು. ತೋಟಗಾರಿಕೆ ಕಾಲೇಜು, ಆಡಳಿತ ಮತ್ತು ಶೈಕ್ಷಣಿಕ ಭವನಕ್ಕೆ 39.95 ಕೋಟಿ, ದೇಸಿ ಬೀಜ ತಳಿಗಳ ಬ್ಯಾಂಕ್ ಸ್ಥಾಪನೆಗೆ 1.50 ಕೋಟಿ ರು.ಬ್ಯಾಡಗಿ ಮೆಣಸಿನಕಾಯಿ ತಳಿ ಸಂರಕ್ಷಣೆ, ಮತ್ತು ಎಲೆ ಮುರುಟು ರೋಗ ಕ್ರಿಪ್ಸ್ ಇತ್ಯಾದಿ ಸಮಸ್ಯೆ ಪರಿಹಾರ ಕಂಡುಕೊಳ್ಳಲು 75 ಲಕ್ಷ ರು. ಮಂಜೂರು ಮಾಡಲಾಗಿದೆ. ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿವಿಗೆ ಅಡಕೆ ಬೆಳೆ ಎಲೆ ಚುಕ್ಕ ರೋಗ ಸಂಶೋಧನೆಗೆ 43.61 ಲಕ್ಷ ರು. ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಮುನ್ನ ಮಾತನಾಡಿದ ನಿರಾಣಿ ಹಣಮಂತಪ್ಪ ಅವರು, ಹಲವು ಮೂಲ ಸೌಲಭ್ಯಗಳ ಸಮಸ್ಯೆ ಹಾಗೂ ಶೇ.50 ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಬಾಗಲಕೋಟಿ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.