ನಿತ್ಯ ಸಂಜೆ 7ರಿಂದ 9.30ರ ವರೆಗೆ ಮಕ್ಕಳ ಓದುವ ಸಮಯ ಎಂದು ಪರಿಗಣಿಸಿ ಸ್ವಯಂಪ್ರೇರಿತರಾಗಿ ಎಲ್ಲ ಮನೆಗಳಲ್ಲಿ ದೂರದರ್ಶನ ಬಂದ್ ಮಾಡಿ, ಮೊಬೈಲ್ ಸದ್ದು ಇಲ್ಲದಂತೆ ಮಾಡಿ, ಮಕ್ಕಳ ಓದಿಗೆ ಸಹಕರಿಸಿ ಎಂದು ಪಿಡಿಒಗಳಿಗೆ ಆದೇಶ ರವಾನಿಸಲಾಗಿದೆ.
ಹಾನಗಲ್ಲ: ಇದು ಓದುವ ಸಮಯ, ಟಿವಿ ಬಂದ್ ಮಾಡಿ, ಮೊಬೈಲ್ ಸ್ವಿಚ್ ಆಫ್ ಮಾಡಿ, ಡಿಜಿಟಲ್ ಉಪವಾಸದ ಮೂಲಕ ಮಕ್ಕಳ ಓದಿಗೆ ಮನೆಯಲ್ಲಿ ಪೂರಕ ವಾತಾವರಣ ನಿರ್ಮಿಸಿಕೊಡಿ...
ಹೀಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಉನ್ನತಗೊಳಿಸಲು ಸಾರ್ವಜನಿಕರ ಸಹಕಾರವನ್ನು ಕೇಳಿ, ಜಾಗೃತಿ ಮೂಡಿಸಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ರಡ್ಡೆರ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ಅವರ ಮನವಿಯಂತೆ ಆದೇಶವೊಂದನ್ನು ಎಲ್ಲ ಪಿಡಿಒಗಳಿಗೆ ರವಾನಿಸಿದ್ದಾರೆ.ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮವಾಗಲು ಶಿಕ್ಷಕರ ಶ್ರಮದೊಂದಿಗೆ ಪಾಲಕರ ಕಾಳಜಿಯೂ ಸೇರಿದರೆ ಪ್ರಯತ್ನಕ್ಕೆ ಫಲ ದೊರೆಯುತ್ತದೆ. ಹೀಗಾಗಿ ಹಾನಗಲ್ಲ ತಾಲೂಕಿನ 157 ಗ್ರಾಮಗಳ, 42 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶವೊಂದನ್ನು ಕಳುಹಿಸಿ, ಎಲ್ಲ ಗ್ರಾಮಗಳಲ್ಲಿ ಡಂಗುರ ಸಾರಿ, ವ್ಯಾಪಕ ಜಾಗೃತಿ ಮೂಡಿಸಿ, ನಿತ್ಯ ಸಂಜೆ 7ರಿಂದ 9.30ರ ವರೆಗೆ ಮಕ್ಕಳ ಓದುವ ಸಮಯ ಎಂದು ಪರಿಗಣಿಸಿ ಸ್ವಯಂಪ್ರೇರಿತರಾಗಿ ಎಲ್ಲ ಮನೆಗಳಲ್ಲಿ ದೂರದರ್ಶನ ಬಂದ್ ಮಾಡಿ, ಮೊಬೈಲ್ ಸದ್ದು ಇಲ್ಲದಂತೆ ಮಾಡಿ, ಮಕ್ಕಳ ಓದಿಗೆ ಸಹಕರಿಸಿ ಎಂದು ಆದೇಶವೊಂದನ್ನು ಹೊರಡಿಸಿದ್ದಾರೆ.
ಈಗಾಗಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ 29 ಅಂಶಗಳ ಯೋಜನೆ ಜಾರಿಯಲ್ಲಿದೆ. ಹೆಚ್ಚುವರಿ ವರ್ಗಗಳನ್ನು ನಡೆಸುವುದು, ಕನಿಷ್ಠ 40 ಅಂಕಗಳನ್ನು ಪಡೆಯುವ ಮಿಶನ್-40 ಯೋಜನೆಯೂ ಜಾರಿಯಲ್ಲಿದೆ. ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆ ಭೇಟಿ, ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆಯ ತಂಡದಿಂದ ಪ್ರಗತಿ ಪರಿಶೀಲನೆ, ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸುವುದು, ಪಾಲಕರ ಸಭೆ ನಡೆಸಿ ಅವರ ಮಕ್ಕಳ ಶೈಕ್ಷಣಿಕ ಸ್ಥಿತಿ ಗಮನಕ್ಕೆ ತರುವುದು. ಪಾಲಕರು ಮಕ್ಕಳ ಕಲಿಕೆಗೆ ಪೂರಕವಾಗಿ ಸ್ಪಂದಿಸಲು ವಿನಂತಿಸುವುದು, ಪ್ರತಿ ನಿತ್ಯ ಅಂದಿನ ಪಾಠಗಳ ಕಿರು ಪರೀಕ್ಷೆಗಳನ್ನು ನಡೆಸಿ ಫಲಿತಾಂಶಕ್ಕೆ ಒತ್ತು ನೀಡುವುದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಉತ್ತೀರ್ಣಕ್ಕೆ ಪ್ರೋತ್ಸಾಹಿಸುವುದು, ಉತ್ತಮ ಓದಿನಲ್ಲಿರುವ ಮಕ್ಕಳಿಗೆ ಉನ್ನತ ಅಂಕ ಗಳಿಕೆಗೆ ಪ್ರೋತ್ಸಾಹಿಸುವ ನಿತ್ಯ ಚಟುವಟಿಕೆ ಈಗ ಎಲ್ಲ ಪ್ರೌಢಶಾಲೆಗಳಲ್ಲಿ ನಡೆದೇ ಇವೆ.ಇವುಗಳೊಂದಿಗೆ ಈಗ ಇದು ಓದುವ ಸಮಯ ಎಂಬ ಮಕ್ಕಳಿಗೆ ಪೂರಕ ವಾತಾವರಣಕ್ಕೆ ಪಾಲಕರು ಸಹಕರಿಸಲು ಜಾಗೃತಿ ಮೂಡಿಸುತ್ತಿರುವುದು ಮಕ್ಕಳ ಓದಿಗೆ ಇನ್ನಷ್ಟು ಪುಷ್ಟಿ ನೀಡಬಲ್ಲದು ಎಂಬ ಚಿಂತನೆಯ ಕಾರ್ಯರೂಪ ಪಡೆದಿದೆ. ಟಿವಿ, ಮೊಬೈಲ್ ಮಕ್ಕಳ ಕಲಿಕೆಯ ಹಿನ್ನಡೆಗೆ ಕಾರಣವಾಗಿದೆ ಎಂಬ ಆರೋಪಗಳು ಕೂಡ ಇರುವುದರಿಂದ ಈ ಜಾಗೃತಿ ಅತ್ಯಂತ ಫಲಪ್ರದವಾಗಬಲ್ಲದು ಎಂಬ ನಿರೀಕ್ಷೆ ಇಲಾಖೆಗೆ ಇದೆ. ಹಾನಗಲ್ಲ ತಾಲೂಕಿನ 74 ಪ್ರೌಢಶಾಲೆಗಳಲ್ಲಿರುವ 3500 ಮಕ್ಕಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ.
ಹೊಸ ಯೋಜನೆ: ಹಾನಗಲ್ಲ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ನಡೆಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಸಹಕಾರಿಯಾಗುವ ಹೊಸ ಯೋಜನೆಗಳನ್ನು ರೂಪಿಸಿ, ಕಾರ್ಯರೂಪಕ್ಕೆ ತರಲಾಗುತ್ತಿದೆ. ಇದು ಓದುವ ಸಮಯ ಎಂಬ ಜಾಗೃತಿ ಖಂಡಿತವಾಗಿಯೂ ಪಾಲಕರು ಮಕ್ಕಳ ಓದಿಗೆ ಸಹಕರಿಸಲು ಸಾಧ್ಯವಾಗುತ್ತದೆ. ಇದರ ಪಾಲನೆಗಾಗಿ ಎಲ್ಲ ಗ್ರಾಪಂಗಳಲ್ಲಿ ಡಂಗುರ ಸಾರುವ ಕಾರ್ಯಕ್ಕೂ ಚಾಲನೆ ದೊರೆತಿದೆ. ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರೂ ಇದಕ್ಕಾಗಿ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿದ್ದಾರೆ. ಅತ್ಯಂತ ತೃಪ್ತಿಕರ ಫಲಿತಾಂಶ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಹಾನಗಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ ಹೇಳಿದರು.