ಗೈಡುಗಳು ಮತ್ತು ನ್ಯಾಚುರಲಿಸ್ಟ್‌ ಹುದ್ದೆಗಳಿಗೆ ಅರಣ್ಯ ಇಲಾಖೆಯಿಂದ ಕೋರ್ಸ್‌ ನಡೆಸಿ ತರಬೇತಿ। ತರಬೇತಿ ಪಡೆದವರಿಗೆ ರಾಜ್ಯದಲ್ಲಿ ಮಾತ್ರವಲ್ಲ,ಕೇರಳ, ತಮಿಳುನಾಡು, ಮಹಾರಾಷ್ಟ್ರದಲ್ಲೂ ಬೇಡಿಕೆ

ವಿನೋದ್ ಕುಮಾರ್ ಬಿ.ನಾಯ್ಕ್

ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಕಾಡಂಚಿನ ಯುವ ಜನತೆಗೆ ಮತ್ತೆ ತರಬೇತಿ ನಡೆಸಲು ನಿರ್ಧರಿಸಿದ್ದು, ಆ ತರಬೇತಿಗೆ ರಾಷ್ಟ್ರೀಯ ಮಾನ್ಯತೆ ದೊರಕಿಸಲು ಕ್ರಮಗಳನ್ನು ಕೈಗೊಂಡಿದೆ. ರಾಷ್ಟ್ರೀಯ ಕೌಶಲ್ಯ ಅರ್ಹತಾ ಫ್ರೇಮ್‌ ವರ್ಕ್‌ ಅಡಿ ಪ್ರಮಾಣಪತ್ರ ದೊರಕಿಸಿಕೊಡಲು ಯೋಜನೆ ರೂಪಿಸಿದೆ. ಆಗ ನಮ್ಮ ರಾಜ್ಯದಲ್ಲಿ ಈ ತರಬೇತಿ ಪಡೆದವರು ಇಡೀ ದೇಶದಲ್ಲಿ ಎಲ್ಲಿ ಬೇಕಾದರೂ ತಮ್ಮ ಅರ್ಹತೆಗೆ ಲಭ್ಯವಿರುವ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕವನ್ನು ಸ್ಟಾರ್ಟ್‌ ಅಪ್‌ಗಳ ತವರೂರು ಎಂದು ಕರೆಯುತ್ತಾರೆ. ಇಲ್ಲಿನ ಯುವ ಜನತೆ ಹಾಗೂ ಇಲ್ಲಿರುವ ನಾವೀನ್ಯತೆಗೆ ಪೂರಕವಾದ ಪರಿಸರ ಹಾಗೂ ಬೃಹತ್‌ ಕೌಶಲ್ಯ ಸಂಪನ್ಮೂಲ ಅನೇಕ ಹೊಸ ಅವಕಾಶಗಳನ್ನು ತೆರೆಯುತ್ತಾ ಬಂದಿದೆ. ಇಂತಹ ನಾವೀನ್ಯತೆಯ ಪರಿಸರ ಇದೀಗ ಪರಿಸರ ಪ್ರವಾಸೋದ್ಯಮ ಕ್ಷೇತ್ರದಲ್ಲೂ ಅನೇಕ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತಿದೆ.

ಕರ್ನಾಟಕ ಅರಣ್ಯ ಇಲಾಖೆಯ ಅಡಿಯಲ್ಲಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗಿದೆ. ಇದರ ಜೊತೆಗೆ ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯಲ್ಲಿರುವ ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ ಸಹ ಪರಿಸರ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುತ್ತಿರುವ ಬೃಹತ್‌ ಸಂಸ್ಥೆ. ಅಲ್ಲದೇ, ರಾಜ್ಯದ ಉದ್ದಗಲಕ್ಕೂ ನೂರಾರು ರೆಸಾರ್ಟ್‌ಗಳಿವೆ. ಇಲ್ಲೆಲ್ಲ ಪರಿಸರ ವಿಜ್ಞಾನ ಕ್ಷೇತ್ರದ ಜ್ಞಾನ ಇರುವ ಅಥವಾ ತರಬೇತಿ ಪಡೆದಿರುವ ಸಿಬ್ಬಂದಿಯ ಅವಶ್ಯಕತೆ ಇದೆ. ಇಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಲೇ ಇವೆ.

ನಾವು ಬಂಡೀಪುರ, ನಾಗರಹೊಳೆ, ಭದ್ರಾ, ಬಿಆರ್‌ ಹಿಲ್ಸ್‌ ಹೀಗೆ ಅನೇಕ ಕಡೆ ಸಫಾರಿಗೆ ಹೋದಾಗ ಕಾಡಿನ ಬಗ್ಗೆ ವಿವರಣೆ ನೀಡುವ ಗೈಡ್‌ ಜೊತೆಗೆ ಬರುತ್ತಾರೆ. ಕಾಡಿನ ಮರ-ಗಿಡಗಳು, ಹುಲಿಯ ಹೆಜ್ಜೆ ಗುರುತು, ಆನೆಯ ಗುಟುರು, ಹಕ್ಕಿಯ ಕೂಗು, ಜೀರುಂಡೆಯ ಸದ್ದು ಹೀಗೆ ಎಲ್ಲವನ್ನೂ ನಮಗೆ ವಿವರಿಸುತ್ತಾ ಇಡೀ ಸಫಾರಿ ಅನುಭವವನ್ನೇ ರೋಚಕಗೊಳಿಸುತ್ತಾರೆ. ಕೇವಲ ಆನೆ, ಹುಲಿ ನೋಡೋಣ ಎಂದುಕೊಂಡು ಕಾಡಿಗೆ ಬರುವವರನ್ನು ಇಡೀ ಕಾಡಿನ ಸಣ್ಣ ಪುಣ್ಣ ಜೀವಿಗಳೂ ನೀಡುವ ಕೊಡುಗೆಯನ್ನು ವಿವರಿಸಿ ಪ್ರಕೃತಿಯ ಬಗ್ಗೆ ಅಪಾರ ಪ್ರೀತಿ ಹುಟ್ಟುವಂತೆ ಮಾಡುವವರೇ ಈ ಗೈಡುಗಳು ಮತ್ತು

ನ್ಯಾಚುರಲಿಸ್ಟ್‌ಗಳು.

ಅರಣ್ಯ ಇಲಾಖೆ ಅನೇಕ ವರ್ಷಗಳಿಂದ ಸಫಾರಿ ಗೈಡುಗಳಿಗೆ ತರಬೇತಿ ನೀಡುತ್ತಾ ಬಂದಿದೆ. ಜೊತೆಗೆ ಜಂಗಲ್‌ ಲಾಡ್ಜಡ್‌ ಸಹ ತನ್ನ ಸಫಾರಿ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿ ಸಜ್ಜುಗೊಳಿಸಿದೆ. ಇದಕ್ಕೂ ಮೊದಲು ನ್ಯಾಚುರಲಿಸ್ಟ್‌ ಕೋರ್ಸ್‌ ನಡೆಸಿ ಅದರಲ್ಲೂ ಸುಮಾರು 150 ಜನರನ್ನು ತರಬೇತು ಗೊಳಿಸಲಾಗಿದೆ. ಇವರೆಲ್ಲರೂ ಕಾಡಂಚಿನ ಗ್ರಾಮದವರು. ಈಗ ಇವರೆಲ್ಲರೂ ಉದ್ಯೋಗದಲ್ಲಿದ್ದಾರೆ. ಇವರಿಗೆ ರಾಜ್ಯದಲ್ಲಿ ಮಾತ್ರವಲ್ಲ, ನೆರೆಯ ಕೇರಳ, ತಮಿಳುನಾಡು, ಮಹಾರಾಷ್ಟ್ರದಲ್ಲೂ ಬೇಡಿಕೆ ಇದೆ.

ಖಾಸಗಿ ರೆಸಾರ್ಟ್‌ಗಳೂ ಸಹ ಈಗ ತಮ್ಮಲ್ಲಿ ತಂಗುವ ಅತಿಥಿಗಳಿಗೆ ಮಾಹಿತಿ ನೀಡಿ ಅವರ ಪ್ರವಾಸ ಬೋರಿಂಗ್‌ ಆಗದಂತೆ ನೋಡಿಕೊಳ್ಳುತ್ತಿರುವುದರಿಂದ ಅಲ್ಲೂ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಅರಣ್ಯ ಇಲಾಖೆ ಸರ್ಟಿಫೈಡ್‌ ಇಕೊ ವಾಲಂಟಿಯರ್ಸ್‌ ಅಂದರೆ ಪ್ರಮಾಣೀಕೃತ ಪರಿಸರ ಸ್ವಯಂಸೇವಕರು ಎನ್ನುವ ತರಬೇತಿಯನ್ನೂ ಸಹ ನಡೆಸುತ್ತಿತ್ತು. ಈಗಾಗಲೇ 850ಕ್ಕೂ ಹೆಚ್ಚು ಜನರಿಗೆ ಈ ತರಬೇತಿ ನೀಡಲಾಗಿದೆ. ಇದಕ್ಕೆ ಯಾರು ಬೇಕಾದರೂ ಅರ್ಜಿ ಹಾಕಿ ಭಾಗವಹಿಸಬಹುದು. ಈ ತರಬೇತಿ ಅದೆಷ್ಟು ಜನಪ್ರಿಯವಾಯಿತೆಂದರೆ, ಆನ್‌ಲೈನ್‌ನಲ್ಲಿ ಅರ್ಜಿ ಕರೆದ ಕೇವಲ 30 ನಿಮಿಷಗಳಲ್ಲಿ ಎಲ್ಲವೂ ಭರ್ತಿಯಾಗಿ ಬಿಡುತ್ತಿತ್ತು. ಈ ತರಬೇತಿಗೆ ನಗರ ಪ್ರದೇಶಗಳ ಯುವಜನತೆ ತಮ್ಮ ಉದ್ಯೋಗಕ್ಕೆ ರಜೆ ಹಾಕಿ ಶುಲ್ಕ ಪಾವತಿ ಮಾಡಿ ಬರುತ್ತಿದ್ದರು. ಇಲ್ಲಿ ತರಬೇತಿ ಪಡೆದ ಸ್ವಯಂ ಸೇವಕರು ತಮ್ಮ ಬಿಡುವಿನ ವೇಳೆಯಲ್ಲಿ ಸ್ವಯಂ ಸೇವಕರಾಗಿ ಅರಣ್ಯ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಬರುತ್ತಿದ್ದರು. ಇದೀಗ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಕಾಡಂಚಿನ ಯುವ ಜನತೆಗೆ ಮತ್ತೆ ತರಬೇತಿ ನಡೆಸಲು ನಿರ್ಧರಿಸಿದ್ದು, ಆ ತರಬೇತಿಗೆ ರಾಷ್ಟ್ರೀಯ ಮಾನ್ಯತೆ ದೊರಕಿಸಲು ಕ್ರಮಗಳನ್ನು ಕೈಗೊಂಡಿದೆ. ರಾಷ್ಟ್ರೀಯ ಕೌಶಲ್ಯ ಅರ್ಹತಾ ಫ್ರೇಮ್‌ ವರ್ಕ್‌ ಅಡಿ ಪ್ರಮಾಣಪತ್ರ ದೊರಕಿಸಿಕೊಡಲು ಯೋಜನೆ ರೂಪಿಸಿದೆ. ಆಗ ನಮ್ಮ ರಾಜ್ಯದಲ್ಲಿ ಈ ತರಬೇತಿ ಪಡೆದವರು ಇಡೀ ದೇಶದಲ್ಲಿ ಎಲ್ಲಿ ಬೇಕಾದರೂ ತಮ್ಮ ಅರ್ಹತೆಗೆ ಲಭ್ಯವಿರುವ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. 18 ವರ್ಷ ದಾಟಿದ ಗ್ರಾಮೀಣ ಯುವಕರು, ಸ್ವ ಸಹಾಯ ಸಂಘದ ಸದಸ್ಯರು ಮತ್ತು ಮಹಿಳೆಯರು,

ಅಗತ್ಯವಿರುವ ಎಲ್ಲರೂ ಈ ತರಬೇತಿ

ಬೋಟ್‌ ಚಾಲಕರು, ಟ್ರಕ್ಕಿಂಗ್‌ ಮಾಡುವವರು ಹೀಗೆ ಅಗತ್ಯವಿರುವ ಎಲ್ಲರೂ ಈ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಇಲ್ಲಿ ತರಬೇತಿ ಪಡೆದವರಿಗೆ ಪ್ರಥಮ ಚಿಕಿತ್ಸೆ ನೀಡುವುದನ್ನೂ ಸಹ ಕಲಿಸಲಾಗುತ್ತದೆ.

ಅರಣ್ಯ ಇಲಾಖೆಯ ಈ ಅಲ್ಪಾವಧಿಯ ತರಬೇತಿಗಳು ಇಲಾಖೆಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಹಾಗೂ ವನ್ಯಜೀವಿ ಪ್ರೇಮಿಗಳಿಗೆ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವ ಅವಕಾಶವನ್ನೂ ಕಲ್ಪಿಸಿಕೊಡುತ್ತದೆ. ಇವರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸವನ್ನು ಅರಣ್ಯಾಧಿಕಾರಿಗಳು ಮಾಡಬೇಕಾಗುತ್ತದೆ. ನಮ್ಮ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಅನೇಕ ದೇವಾಲಯಗಳಿವೆ, ಕಾಡಿನ ಮೂಲಕ ಹಾದು ಹೋಗುವ ನಮ್ಮ ಅನೇಕ ಹೆದ್ದಾರಿಗಳು ವಾರಾಂತ್ಯದಲ್ಲಿ ಈಗ ಕಾಡಿನೊಳಗೆ ಟ್ರಾಫಿಕ್‌ ಜಾಮ್‌ ಬಿಸಿ ಅನುಭವಿಸುತ್ತಿವೆ. ವನ್ಯಜೀವಿ-ಮಾನವ ಸಂಘರ್ಷಗಳು ಬಹಳ ಹೆಚ್ಚಾಗುತ್ತಿವೆ ಇಂತಹ ಸಂದರ್ಭಗಳಲ್ಲಿ ಈ ಸ್ವಯಂ ಸೇವಕರು ತಮ್ಮ ಸೇವೆಯನ್ನು ನೀಡಲು ಸಜ್ಜಾಗಿರುತ್ತಾರೆ, ಅವರ ಸೇವೆಯನ್ನು ಅರಣ್ಯಾಧಿಕಾರಿಗಳು ಬಳಸಿಕೊಳ್ಳಬೇಕು.

ನ್ಯಾಚುರಲಿಸ್ಟ್‌ಗಳು, ಗೈಡ್‌ಗಳು ಹೀಗೆ ತರಬೇತಿ ಪಡೆದವರು ಸಹ ಅರಣ್ಯ ಇಲಾಖೆಗೆ, ಪರಿಸರ ಪ್ರವಾಸೋದ್ಯಮಕ್ಕೆ ಹೊಸ ಹೊಳಪನ್ನು ನೀಡಲು ಶಕ್ತರಾಗಿದ್ದಾರೆ. ಕಾಡಂಚಿನ ಗ್ರಾಮಗಳ ಜನರಿಗೆ ಕಾಡಿನಿಂದ ಉದ್ಯೋಗವೂ ಸಿಕ್ಕಂತಾಗುತ್ತದೆ. ಆ ಭಾಗದ ಆರ್ಥಿಕತೆಗೂ ಬಲ ಬರುತ್ತದೆ. ಇವೆಲ್ಲದರ ಜೊತೆಗೆ ಅರಣ್ಯ ಸಂರಕ್ಷಣೆಗೆ ಕಾಯಕದಲ್ಲಿ ನಗರವಾಸಿಗಳಿಗೆ ಅವಕಾಶ ನೀಡುವುದರ ಜೊತೆಗೆ ಅವರನ್ನೂ ತೊಡಗಿಸಿಕೊಂಡಂತಾಗುತ್ತದೆ.