ಆನೆ ಕೆಲಸಕ್ಕೆ ಬೇರೆ ರೀತಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಆಗುವುದಿಲ್ಲ. ಮಾವುತರ ಮಕ್ಕಳೇ ವಂಶ ಪಾರಂಪರ್ಯವಾಗಿ ಬರಬೇಕಿದೆ. ನಮ್ಮಲ್ಲಿ ಬಹುತೇಕ ಜೇನು ಕುರುಬ ಸಮುದಾಯದ ಆದಿವಾಸಿಗಳು ಆನೆ ಮಾವುತರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಕ್ಕಳು ಮತ್ತು ಕುಟುಂಬದ ಕಲ್ಯಾಣ ಆದ್ಯತೆಯಾಗಬೇಕಿದೆ.

ಆನೆಗಳು ನಮ್ಮ ಸಂಸ್ಕೃತಿಯ ಪ್ರತೀಕ. ಕಾಡಿನಲ್ಲಿ ಸ್ವಚಂದವಾಗಿ ಓಡಾಡಿಕೊಂಡಿದ್ದ ಆನೆಗಳನ್ನು ಶತಮಾನಗಳ ಹಿಂದೆ ಮನುಷ್ಯ ಪಳಗಿಸಿಬಿಟ್ಟ. ಅಷ್ಟು ದೊಡ್ಡ ಆನೆಯನ್ನು ಕೇವಲ ಮನೋಬಲ ದಿಂದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದನ್ನು ಕಲಿತ. ಅಲ್ಲಿಂದ ಆನೆಯ ಗುಲಾಮಗಿರಿ ಶುರುವಾಯಿತು. ಆನೆ ಅಡಿಯಾಳಾಯಿತು.

ನಮ್ಮ ರಾಜ್ಯದಲ್ಲಿ ಸಾಕಾನೆಗಳಿಗೆ ಶತಮಾನಗಳ ಇತಿಹಾಸವಿದೆ. ರಾಜ ಮಹಾರಾಜರ ಸೈನ್ಯದಲ್ಲಿ ದೇಶಸೇವೆ ಮಾಡಿದ ಆನೆಗಳು, ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಅನೇಕ ಉದಾಹರಣೆಗಳು ಇವೆ. ಮೈಸೂರು ಖೆಡ್ಡಾ ಕಾರ್ಯಾಚರಣೆ ಒಂದು ಕಾಲದಲ್ಲಿ ವಿಶ್ವ ಪ್ರಸಿದ್ಧವಾಗಿತ್ತು.

ರಾಜಮನೆತನಗಳು ಇದ್ದಾಗಲೇ ಆನೆಗಳನ್ನು ಬ್ರಿಟಿಷರು ಮರದ ದಿಮ್ಮಿಗಳನ್ನು ಸಾಗಿಸಲು ಬಳಸಲಾರಂಭಿಸಿದರು. ನಂತರ ಅರಣ್ಯ ಇಲಾಖೆ ಯಾವಾಗ ಸ್ಥಾಪನೆಯಾಯಿತೋ ಆಗ ಆನೆಗಳು ಸರಕಾರದ ವಶಕ್ಕೆ ಬಂದವು. ಆನೆಗಳನ್ನು ಇಲಾಖೆ ತನ್ನ ಕೆಲಸಕ್ಕೆ ಬಳಸಲಾರಂಭಿಸಿತು.

ಸಾಕಾನೆಗಳ ಶಿಬಿರಗಳಲ್ಲಿ ಆನೆಗಳನ್ನು ಮೊದಲಿಗೆ ಇಲಾಖೆಯು ಸಹ ಮರದ ದಿಮ್ಮಿಗಳ ಕೆಲಸಕ್ಕೆ ಬಳಸುತ್ತಿತ್ತು. ನಂತರ ಕಾಡಿನಲ್ಲಿ ಮರಗಳ ಕಟಾವಿಗೆ ನಿಷೇಧ ಬಂದ ಮೇಲೆ ನಿಂತಿತು. ಈಗ ಆನೆಗಳನ್ನು ಹುಲಿ ಹಿಡಿಯಲು ಮತ್ತು ನಾಡಿಗೆ ಬಂದು ಕಾಟ ಕೊಡುವ ಕಾಡಾನೆಗಳನ್ನು ಹಿಡಿಯಲು ಬಳಸಲಾಗುತ್ತಿದೆ.

ಸಾಕಾನೆಗಳಿಲ್ಲದೆ ಅರಣ್ಯ ಇಲಾಖೆಯನ್ನು ಊಹಿಸಲು ಅಸಾಧ್ಯ. ಅಷ್ಟೊಂದು ಅಗಾಧವಾದ ಕೊಡುಗೆ ಈ ಆನೆಗಳದ್ದು . ನಾಡಿಗೆ ಬಂದು ಉಪಟಳ ಕೊಡುವ ಕಾಡಿನ ಆನೆಗಳನ್ನು ಅಷ್ಟು ಸುಲಭವಾಗಿ ಹಿಡಿಯಲು ಅಸಾಧ್ಯ. ಅಂತಹ ಆನೆಗಳನ್ನು ಆನೆಗಳ ಮೂಲಕವೇ ಹಿಡಿಯಬೇಕು. ಅವುಗಳನ್ನು ಪಳಗಿಸಲು ಸಹ ಸಾಕಾನೆಗಳೇ ಬೇಕು. ಅಷ್ಟೇ ಅಲ್ಲ, ಈ ಆನೆಗಳನ್ನು ಮರಳಿ ಕಾಡಿಗೆ ಓಡಿಸುವಾಗಲೂ ಸಾಕಾನೆಗಳನ್ನು ಬಳಸುತ್ತಾರೆ. ದಸರಾ ಹಬ್ಬದಲ್ಲಿ ನಾವು ನೋಡುವ ಇದೇ ಆನೆಗಳು ಕಾಡಿನಲ್ಲಿ ಸಾಕಷ್ಟು ಬೆವರು ಹರಿಸುತ್ತವೆ. ನಾವು ದಸರೆಯಲ್ಲಿ ಅವುಗಳಿಗೆ ಮಾಡಿದ ಅಲಂಕಾರ ರಾಜವೈಭೋಗ ನೋಡಿ ಬಹಳ ಖುಷಿಯಾಗುತ್ತೇವೆ. ಆದರೆ, ಕಾಡಿನಲ್ಲಿ ಈ ಸಾಕಾನೆಗಳ ಸಾಹಸವೇ ಬೇರೆ ಇರುತ್ತದೆ. ನಮ್ಮಲ್ಲಿ ಆನೆ ಶಿಬಿರಗಳು, ಮಾವುತರು, ಕಾವಡಿಗಳು ಮತ್ತು ಅವುಗಳ ವೈದ್ಯರು ಸೇರಿದಂತೆ ಬೃಹತ್ ಆನೆ ಪಡೆಯೇ ಇದೆ.

ಇದೇ ಆನೆಗಳು ಹುಲಿ ಉಪಟಳಕ್ಕೂ ಪರಿಹಾರ ಒದಗಿಸುತ್ತಿವೆ. ನಮ್ಮಲ್ಲಿ ಹಿಡಿಯುವ ಬಹುತೇಕ ಎಲ್ಲಾ ಹುಲಿಗಳ ಕಾರ್ಯಾಚರಣೆಯಲ್ಲಿ ಆನೆಗಳು ಇದ್ದೇ ಇರುತ್ತವೆ. ಅಭಿಮನ್ಯು ಆನೆ ಎಂತಹ ಹುಲಿಗೂ ಹೆದರುವುದಿಲ್ಲ. ಕಾಡಾನೆ ಎಷ್ಟೇ ಬಲಿಷ್ಠವಾಗಿದ್ದರೂ ತನ್ನ ಚಾಕಚಕ್ಯತೆಯಿಂದ ಅದನ್ನು ಮಣಿಸುತ್ತದೆ. ಅದರ ಮಾವುತ ವಸಂತ್ ಮತ್ತು ಅಭಿಮನ್ಯು ನಡುವೆ ಯಾರು ಊಹಿಸದ ಬಾಂಧವ್ಯವಿದೆ.

ನಾಡಿಗೆ ಬಂದು ಕಾಟ ಕೊಡುವ ಕಾಡಿನ ಆನೆಗಳ ಕಾರ್ಯಾಚರಣೆಯಿಂದ ಹಿಡಿದು ಹುಲಿಗಳನ್ನು ಸೆರೆ ಹಿಡಿಯುವವರೆಗೆ, ಕಾಡಿನಲ್ಲಿ ಪರಾಕ್ರಮ ತೋರಿಸುವುದರ ಜೊತೆಗೆ ನಾಡಿನಲ್ಲಿ ದಸರಾ ಹಬ್ಬದಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವವರಿಗೆ ಅರಣ್ಯ ಇಲಾಖೆ ಆನೆಗಳು ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಇವುಗಳನ್ನು ಕೆಲವೊಮ್ಮೆ ಕಾಡಂಚಿನ ಪ್ರದೇಶಗಳಲ್ಲಿ ಗಸ್ತು ಮಾಡಲು ಸಹ ಬಳಸಲಾಗುತ್ತಿದೆ.

ಇಂಥ ಆನೆಗಳನ್ನು ಪಳಗಿಸುವ, ಅವುಗಳ ಮೇಲೆ ಸವಾರಿ ಮಾಡಿ ಅವುಗಳನ್ನು ನಿಯಂತ್ರಿಸುವ ಕುಶಲಮತಿಗಳೇ ಮಾವುತರು. ಆನೆಗಳ ಪ್ರತಿಯೊಂದು ವರ್ತನೆಯನ್ನು ಗಮನಿಸಿ ತಕ್ಷಣ ಪ್ರತಿಕ್ರಿಯಿಸುವ ಮಾವುತರ ಕೆಲಸ ಅಷ್ಟೊಂದು ಸುಲಭವಲ್ಲ. ಟನ್‌ಗಟ್ಟಲೆ ತೂಗುವ ಆನೆಯನ್ನು ಕೇವಲ ಅಂಕುಶ ಹಿಡಿದು ನಿಯಂತ್ರಿಸುವ ಕಲೆ ಎಲ್ಲರಿಗೂ ಸಿದ್ಧಿಸದು.

ಮಾವುತರ ಮತ್ತು ಕಾವಡಿಗಳು ಅರಣ್ಯ ಇಲಾಖೆಯ ನೌಕರರೇ ಆದರೂ ಅತ್ಯಂತ ಕೆಳ ಹಂತದಲ್ಲಿದ್ದಾರೆ. 100 ಮಂದಿ ಮಾವುತರು, 112 ಮಂದಿ ಕಾವಾಡಿಗಳು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾವುತರು ಆನೆಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರಿಗೆ ಮಕ್ಕಳಿಗಿಂತ ಹೆಚ್ಚು. ಹಗಲು ರಾತ್ರಿ ಆನೆ ಜೊತೆಗೆ ಹೆಚ್ಚು ಸಮಯ ಕಳೆಯುವುದರಿಂದ ಅವುಗಳ ಜೊತೆ ಮನೋಬಂಧವ್ಯ ಸೃಷ್ಟಿಯಾಗುತ್ತದೆ. ಅನೇಕ ಆನೆಗಳು ತಮ್ಮ ಮಾವುತರನ್ನು ಬಿಟ್ಟರೆ ಬೇರೆಯವರನ್ನು ಹತ್ತಿರಕ್ಕೂ ಸೇರಿಸಿಲ್ಲ. ಮಾವುತರ ಸಹಾಯಕರನ್ನು ಕಾವಾಡಿಗಳು ಎನ್ನುತ್ತಾರೆ. ಕಾವಡಿಗಳು ಸಾಕಷ್ಟು ಅನುಭವ ಪಡೆಯ ಮೇಲೆ ಮಾವುತರಾಗಿ ಬಡ್ತಿ ಹೊಂದುತ್ತಾರೆ. ಆನೆಗಳ ಆರೋಗ್ಯ, ಮರಿಗಳ ಪಾಲನೆ, ಅದಕ್ಕೆ ಬೇಕಾದ ಆಹಾರ ತಯಾರಿಕೆ, ಅದಕ್ಕೆ ಆಗಾಗ ತರಬೇತಿ ಎಲ್ಲವನ್ನು ಮಾವುತ ಮತ್ತು ಕಾವಾಡಿ ಮಾಡುತ್ತಿರುತ್ತಾರೆ.

ಆನೆ ಕೆಲಸಕ್ಕೆ ಬೇರೆ ರೀತಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಆಗುವುದಿಲ್ಲ. ಮಾವುತರ ಮಕ್ಕಳೇ ವಂಶ ಪಾರಂಪರ್ಯವಾಗಿ ಬರಬೇಕಿದೆ. ನಮ್ಮಲ್ಲಿ ಬಹುತೇಕ ಜೇನು ಕುರುಬ ಸಮುದಾಯದ ಆದಿವಾಸಿಗಳು ಆನೆ ಮಾವುತರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಕ್ಕಳು ಮತ್ತು ಕುಟುಂಬದ ಕಲ್ಯಾಣ ಆದ್ಯತೆಯಾಗಬೇಕಿದೆ. ಮೈಸೂರು ದಸರಾ ವೇಳೆಯಲ್ಲಿ ಮಾವುತರು, ಕಾವಾಡಿಗಳಿಗೆ ಒಂದಷ್ಟು ಆತಿಥ್ಯ ಸಿಗುತ್ತದೆ ಎಂಬುದು ಬಿಟ್ಟರೆ ಉಳಿದ ದಿನಗಳಲ್ಲಿ ಅವರ ಜೀವನ ಸುಖಮಯವಾಗೇನು ಇರುವುದಿಲ್ಲ. ಇಂಥ ಮಾವುತರು, ಕಾವಾಡಿಗಳಿಗೆ ಸರ್ಕಾರದ ನೆರವು ಇನ್ನಷ್ಟು ಸಿಗಬೇಕಿದೆ.

ರಾಜ್ಯದಲ್ಲಿನ ಆನೆ ಶಿಬಿರಗಳು

ಕ್ರ.ಸಂ. ವಿಭಾಗ ಆನೆ ಶಿಬಿರ ಒಟ್ಟು ಆನೆಗಳು ಹೆಣ್ಣು ಗಂಡು

01 ಮಡಿಕೇರಿ ದುಬಾರೆ 30 04 26

02 ಮಡಿಕೇರಿ ಹಾರಂಗಿ 6 - 6

03 ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮತ್ತಿಗೋಡು 15 04 11

04 ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಭೀಮನಕಟ್ಟೆ 2 - 2

05 ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಕಾವೇರಿ/ದೊಡ್ಡಹಾರವೆ 5 1 4

06 ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಬಾಳೆ 2 1 1

07 ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ರಾಮಾಪುರ 25 11 14

08 ಶಿವಮೊಗ್ಗ ವನ್ಯಜೀವಿ ವಿಭಾಗ ಸಕ್ರೆಬೈಲು 24 5 19

09 ಕಾಳಿ ಹುಲಿ ಸಂರಕ್ಷಿತ ಪ್ರದೇಶ ಫಾನ್ಸೋಲಿ 5 3 2

10 ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಬೂದಿಪಡಗ -