ರಾಜ್ಯದಲ್ಲಿ ಹಿಂಗಾರು ಮಳೆ ಚುರುಕಾಗಿದ್ದು, ಸಿಡಿಲು ಬಡಿದು ಒಬ್ಬ ಸಾವನ್ನಪ್ಪಿದ್ದು, ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮಧ್ಯೆ, ಧಾರವಾಡ, ಚಿಕ್ಕಮಗಳೂರು ಸೇರಿ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗಿದೆ.

ಬೆಂಗಳೂರು : ರಾಜ್ಯದಲ್ಲಿ ಹಿಂಗಾರು ಮಳೆ ಚುರುಕಾಗಿದ್ದು, ಸಿಡಿಲು ಬಡಿದು ಒಬ್ಬ ಸಾವನ್ನಪ್ಪಿದ್ದು, ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮಧ್ಯೆ, ಧಾರವಾಡ, ಚಿಕ್ಕಮಗಳೂರು ಸೇರಿ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗಿದೆ.

ಗದಗ ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಕುರಿಗಾಹಿ ಮಾಬುಸಾಬ್‌ ಮುಲ್ಲಾನವರ್‌ (44) ಶುಕ್ರವಾರ ಮೃತಪಟ್ಟಿದ್ದಾರೆ. 5 ಕುರಿಗಳೂ ಮೃತಪಟ್ಟಿವೆ.

ಧಾರಾಕಾರ ಮಳೆ

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಶುಕ್ರವಾರ ಅಪರಾಹ್ನ ಧಾರಾಕಾರ ಮಳೆಯಾಗಿದ್ದು, ಉಪ್ಪಿನಂಗಡಿ ಸಮೀಪ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆದ್ರೋಡಿಯಿಂದ ಕಾಂಚನ ಕ್ರಾಸ್‌ವರೆಗಿನ ಪ್ರದೇಶದಲ್ಲಿ ಹೆದ್ದಾರಿ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಸಿಡಿಲು ಬಡಿದು ಮೂವರು ಗಂಭೀರ

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ತಾಲೂಕಿನ ಕೌಡಿಚ್ಚಾರ್ ಸಮೀಪ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದು, ಸುಮಾರು 2 ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಈ ಮಧ್ಯೆ, ಮೂಲ್ಕಿ ಸಮೀಪದ ಅತ್ತೂರು ಬಳಿ ಮನೆಗೆ ಸಿಡಿಲು ಬಡಿದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿವಮೊಗ್ಗ, ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ ಸೇರಿ ಉತ್ತರ ಕರ್ನಾಟಕದ ಹಲವೆಡೆ ಭಾರಿ ಮಳೆಯಾಗಿದೆ.