ಕುಶಾಲನಗರ ಪಟ್ಟಣ ಒಳಚರಂಡಿ ಕಾಮಗಾರಿ ಶೀಘ್ರ ಪೂರ್ಣ: ತಿಮ್ಮಪ್ಪ

KannadaprabhaNewsNetwork |  
Published : Dec 18, 2024, 12:48 AM IST
167 ನೆಯ ಮಹಾ ಆರತಿ ಸಂದರ್ಭ | Kannada Prabha

ಸಾರಾಂಶ

ಕುಶಾಲನಗರ ಪಟ್ಟಣ ಒಳಚರಂಡಿ ಯೋಜನೆ ಕಾಮಗಾರಿ ಸದ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಪುರಸಭೆ ಸದಸ್ಯ ಡಿ.ಕೆ. ತಿಮ್ಮಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ಪಟ್ಟಣ ಒಳಚರಂಡಿ ಯೋಜನೆ ಕಾಮಗಾರಿ ಸದ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಕುಶಾಲನಗರ ಪುರಸಭೆ ಸದಸ್ಯ ಡಿ.ಕೆ. ತಿಮ್ಮಪ್ಪ ತಿಳಿಸಿದ್ದಾರೆ.

ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಸಹಯೋಗದೊಂದಿಗೆ ಹುಣ್ಣಿಮೆ ಅಂಗವಾಗಿ ನಡೆದ 167ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪುರಸಭೆ ವತಿಯಿಂದ ಈಗಾಗಲೇ ಪಟ್ಟಣ ವಿವಿಧ ಬಡಾವಣೆಗಳಲ್ಲಿ ನೇರವಾಗಿ ನದಿಗೆ ಸೇರುತ್ತಿದ್ದ ಕಲುಷಿತ ನೀರನ್ನು ನೈಸರ್ಗಿಕವಾಗಿ ಯುಜಿಡಿ ಕೊಳವೆಗಳ ಮೂಲಕ ಹಾಯಿಸಿ ನದಿ ನೇರವಾಗಿ ಕಲುಷಿತಗೊಳ್ಳುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಹಿಂದಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಈಗಿನ ಶಾಸಕ ಡಾ.ಮಂತರ್ ಗೌಡ, ಒಳಚರಂಡಿ ಯೋಜನೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದು, ಸದ್ಯದಲ್ಲೇ ಯೋಜನೆ ಪೂರ್ಣಗೊಂಡು ನದಿ ಕಲುಷಿತ ಮತ್ತು ಪಟ್ಟಣದ ಸ್ವಚ್ಛತೆಯ ಗುರಿ ಸಾಧನೆ ಸಾಧ್ಯವಾಗಲಿದೆ ಎಂದರು.

ನಿರಂತರವಾಗಿ ಜೀವನದಿ ಕಾವೇರಿಗೆ ಆರತಿ ಬೆಳಗುವ ಮೂಲಕ ಜನಜಾಗೃತಿ ಮೂಡಿಸುತ್ತಿರುವ ಆರತಿ ಬಳಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಆರತಿ ಕಟ್ಟೆ ನಿರ್ಮಾಣ, ಅನ್ನದಾಸೋಹ ಭವನ ನಿರ್ಮಾಣ ಹಾಗೂ ಗಣಪತಿ ಮೂರ್ತಿಗಳ ವಿಸರ್ಜನೆ ಮಾಡುವ ನಿಟ್ಟಿನಲ್ಲಿ ಶಾಶ್ವತ ಕೆರೆ ನಿರ್ಮಿಸಲು ಕೂಡ ಪುರಸಭೆಯಿಂದ ಚಿಂತನೆ ಹರಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಮಾತನಾಡಿದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಿ.ಪಿ. ಗಣಪತಿ, ಕುಶಾಲನಗರದಲ್ಲಿ ಕಳೆದ 14 ವರ್ಷಗಳಿಂದ ಆರಂಭಗೊಂಡ ಕಾವೇರಿ ಆರತಿ ಮೂಲಕ ಕಾವೇರಿ ಕೂಗು ರಾಜ್ಯ ರಾಷ್ಟ್ರಮಟ್ಟಕ್ಕೆ ಕೇಳಿಸಿದೆ. ನದಿ ತೀರದಲ್ಲಿ ನಾಗರಿಕತೆ ಬೆಳೆದು ಬಂದಿದ್ದು, ಅಭಿವೃದ್ಧಿಯ ನಾಗಾಲೋಟದಲ್ಲಿ ಇದೀಗ ನದಿ ಪರಿಸರ ಕಲುಷಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಕೃತಿಯ ಆರಾಧನೆ ಮೂಲಕ ಪರಿಸರ ಸಂರಕ್ಷಣೆ ಸಾಧ್ಯ ಎಂದು ಹೇಳಿದರು.

ಕಾವೇರಿ ನದಿ ಸ್ವಚ್ಛತಾ ಅಭಿಯಾನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಸ್ತಾವಿಕವಾಗಿ ಮಾತನಾಡಿದರು.

ಅರ್ಚಕ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ ಅಷ್ಟೋತ್ತರ ನಂತರ ಚಂಡೆ, ಮಂಗಳವಾದ್ಯಗಳ ನಡುವೆ ಕಾವೇರಿ ನದಿಗೆ ಮಹಾ ಆರತಿ ಬೆಳಗಿದರು.

ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಮುಖರಾದ ಮಂಡೆಪಂಡ ಬೋಸ್ ಮೊಣ್ಣಪ್ಪ, ಡಿ.ಆರ್. ಸೋಮಶೇಖರ್, ಚಂದ್ರು, ಶ್ರೀನಿವಾಸ್, ಶಂಕರ್ ವೇಣುಗೋಪಾಲ್, ಚೈತನ್ಯ, ಧರಣಿ ಸೋಮಯ್ಯ ಬಳಗದ ಸದಸ್ಯರು ಮತ್ತು ಅಯ್ಯಪ್ಪ ಸ್ವಾಮಿ ವ್ರತಧಾರಿಗಳು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ