ಕನ್ನಡಪ್ರಭವಾರ್ತೆ ಕುಶಾಲನಗರ
ಅತಿ ವಿಶಿಷ್ಟ ತಾಂತ್ರಿಕತೆ ಹೊಂದಿರುವ ಈ ಸೇತುವೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ರಾಜಾದಿ ರಾಜರು, ಮಹಾತ್ಮಾ ಗಾಂಧೀಜಿ ಸೇರಿದಂತೆ ಹಲವು ಗಣ್ಯರು ನಡೆದಾಡಿರುವ ಈ ಅಪರೂಪ ವಿನ್ಯಾಸದ ಸೇತುವೆಯನ್ನು ಪುರಸಭೆ ನೇತೃತ್ವದಲ್ಲಿ ಪುನಶ್ಚೇತನಗೊಳಿಸಲು ಸರ್ಕಾರದಿಂದ ಅನುಮತಿ ದೊರೆತಿದೆ.
ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿರುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಹಳೆಯ ಸೇತುವೆಗೆ ಎರಡು ಕಡೆ ಕಬ್ಬಿಣದ ಮೆಶ್ ಅಳವಡಿಸಿ ನವೀಕರಣ ಮಾಡಲು ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ ಜೆ ಗಿರೀಶ್ ಅವರಿಗೆ ಹೆದ್ದಾರಿ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಶಿಥಿಲಗೊಂಡ ಸೇತುವೆಯ ಪಕ್ಕದಲ್ಲಿ ಕಳೆದ 25 ವರ್ಷಗಳ ಹಿಂದೆ ನೂತನ ಸೇತುವೆ ನಿರ್ಮಾಣ ಮಾಡಲಾಗಿದ್ದು ಹಳೆ ಸೇತುವೆಯ ಮೂಲಕ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ನೂತನ ಸೇತುವೆ ನಿರ್ಮಾಣ ಸಂದರ್ಭ ಹಳೆಯ ಸೇತುವೆಯನ್ನು ತೆರೆವುಗೊಳಿಸಲು ಅಂದಿನ ಸರ್ಕಾರ ಗುತ್ತಿಗೆದಾರರಿಗೆ ಸೂಚನೆ ನೀಡಿತ್ತು. ಆ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಧರ್ಮಸಿಂಗ್ ಅವರಿಗೆ ಪುರಾತನ ಸೇತುವೆ ಸ್ಮಾರಕವಾಗಿ ಉಳಿಸುವಂತೆ ಸಲ್ಲಿಸಿದ ಮನವಿ ಮೇರೆಗೆ ಸೇತುವೆಯನ್ನು ಕೆಡವದಂತೆ ಆದೇಶ ಹೊರಡಿಸಿತ್ತು.ಪ್ರಸಕ್ತ ಸೇತುವೆಯ ಎರಡು ಭಾಗಗಳಲ್ಲಿ ಗಿಡಗಂಟಿಗಳು ಬೆಳೆದು ಸೇತುವೆ ದುಸ್ಥಿತಿಯಲ್ಲಿದ್ದು ಸೇತುವೆ ಮೇಲಿಂದ ಜನರು ಕಸ ಕಡ್ಡಿಗಳನ್ನು ನದಿಗೆ ಎಸೆಯುತ್ತಿದ್ದಾರೆ. ಇತ್ತೀಚೆಗೆ ಹಲವರು ಈ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೇತುವೆ ಎರಡು ಬದಿಯಲ್ಲಿ ಕಬ್ಬಿಣ ಗ್ರಿಲ್ ಅಳವಡಿಸಿ ವಿದ್ಯುತ್ ದೀಪ ಅಳವಡಿಸುವುದರೊಂದಿಗೆ ಸೇತುವೆಯನ್ನು ಉದ್ಯಾನವನದ ರೀತಿ ಪರಿವರ್ತಿಸಿ ಸ್ಮಾರಕವನ್ನಾಗಿ ಉಳಿಸಿಕೊಳ್ಳುವ ಉದ್ದೇಶವಿದೆ ಎಂದು ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ ಜೆ ಗಿರೀಶ್ ಮಾಹಿತಿ ನೀಡಿದ್ದಾರೆ.
ಸ್ವಚ್ಛ ಅಭಿಯಾನ: ಇತ್ತೀಚೆಗಷ್ಟೇ 25 ವಸಂತಗಳನ್ನು ಕಂಡಿರುವ ಪಕ್ಕದ ನೂತನ ಸೇತುವೆಗೆ ರೋಟರಿ ಕುಶಾಲನಗರ ಸ್ವಚ್ಛ ಕಾವೇರಿ ಮತ್ತು ಸ್ವಚ್ಛ ಪಟ್ಟಣಕ್ಕೆ ಅಭಿಯಾನ ರೂಪಿಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ನೂತನ ಸೇತುವೆಯ ಎರಡು ಬದಿಗಳಲ್ಲಿ ಕಬ್ಬಿಣದ ಮೆಶ್ ಹಾಗೂ ವಿದ್ಯುತ್ ಸಂಪರ್ಕ ಅಳವಡಿಸುವ ಕೆಲಸ ನಡೆದಿದೆ.
ಸಿಮೆಂಟ್ ಇಲ್ಲ ಇಟ್ಟಿಗೆ ಗಾರೆ ಮಾತ್ರ
ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಎರಡು ಸೇತುವೆಗಳನ್ನು ಒಳಗೊಂಡಂತೆ ಬೃಹತ್ ಗಾತ್ರದ ಪ್ರವೇಶ ದ್ವಾರ ನಿರ್ಮಿಸಲು ಪುರಸಭೆ ಈಗಾಗಲೇ ಕಾರ್ಯ ಯೋಜನೆ ಹಮ್ಮಿಕೊಂಡಿದೆ.