ಮತ ಹಕ್ಕು ಚಲಾಯಿಸಿದ ನವ ದಂಪತಿ

ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿದ ನೂತನ ವಧು-ವರರು ಕುಶಾಲನಗರದ ಮತಗಟ್ಟೆ 170 ರಲ್ಲಿ ಮತದಾನ ಮಾಡಿ ತನ್ನ ಹಕ್ಕನ್ನು ಚಲಾಯಿಸಿದ ದೃಶ್ಯ ಶುಕ್ರವಾರ ಕಂಡು ಬಂತು. ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಶಾಂತಿಯುತ ಚುನಾವಣೆ ನಡೆಯಿತು.

KannadaprabhaNewsNetwork | Published : Apr 26, 2024 7:49 PM IST

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಶಾಂತಿಯುತ ಚುನಾವಣೆ ನಡೆಯಿತು. ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿದ ನೂತನ ವಧು-ವರರು ಸ್ಥಳೀಯ ಮತಗಟ್ಟೆ 170 ರಲ್ಲಿ ಮತದಾನ ಮಾಡಿ ತನ್ನ ಹಕ್ಕನ್ನು ಚಲಾಯಿಸಿದ ದೃಶ್ಯ ಕಂಡು ಬಂತು.

ಕುಶಾಲನಗರ ಪಟ್ಟಣದ 20 ಮತ್ತು ಗ್ರಾಮಾಂತರ ಪ್ರದೇಶದ 38 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯಲ್ಲಿ ಕುಶಾಲನಗರ ಪಟ್ಟಣದ ಕೆಲವು ಮತಗಟ್ಟೆಗಳಲ್ಲಿ ಮತದಾರರ ಸರತಿ ಸಾಲಿನ ದೃಶ್ಯ ಕಂಡು ಬಂದಿತ್ತು.

ಪಟ್ಟಣದ ಮತಗಟ್ಟೆ ಸಂಖ್ಯೆ 170 ರಲ್ಲಿ ಬೆಳಗ್ಗಿನಿಂದಲೇ ನಿಧಾನಗತಿಯಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದವು.

ಮಾದಾಪಟ್ಟಣದ ಮತಗಟ್ಟೆಯಲ್ಲಿ ಕೂಡ ನಿಧಾನ ಪ್ರಕ್ರಿಯೆಯಿಂದ ಮತದಾರರು ಸರತಿ ಸಾಲಿನಲ್ಲಿ ತುಂಬಾ ಹೊತ್ತು ನಿಲ್ಲಬೇಕಾದ ಪ್ರಮೇಯ ಉಂಟಾಯಿತು.

ಉರಿ ಬಿಸಿಲಿನ ಬೇಗೆ ಹಿನ್ನೆಲೆಯಲ್ಲಿ ಸಂಜೆ ವೇಳೆ ಹೆಚ್ಚಿನ ಮತದಾರರು ಮತಗಟ್ಟೆಗೆ ಆಗಮಿಸಿದ ದೃಶ್ಯ ಗೋಚರಿಸಿತು.

ಕುಶಾಲನಗರದ ಮತಗಟ್ಟೆ ಸಂಖ್ಯೆ 170 ರಲ್ಲಿ ಬೆಳಗ್ಗೆ ಮತ ಯಂತ್ರ ಕೆಟ್ಟು ನಿಂತಿದ್ದ ಕಾರಣ ಸಂಜೆ 30 ನಿಮಿಷಗಳ ಕಾಲ ಹೆಚ್ಚುವರಿ ಅವಧಿ ನೀಡಲಾಗಿತ್ತು.

31 ಮತಗಟ್ಟೆಗಳಲ್ಲಿ ಶಾಂತ ಮತದಾನ:

ನಾಪೋಕ್ಲು ಹೋಬಳಿ ವ್ಯಾಪ್ತಿಯ 31 ವಿವಿಧ ಮತಗಟ್ಟೆಗಳಲ್ಲಿ ಲೋಕಸಭಾ ಚುನಾವಣೆಯ ಮತದಾನ ಶುಕ್ರವಾರ ಶಾಂತಿಯುತವಾಗಿ ನಡೆಯಿತು.

ನಕ್ಸಲ್‌ ಪೀಡಿತ ಅತಿ ಸೂಕ್ಷ್ಮ ಪ್ರದೇಶವಾದ ಚಯ್ಯಂಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನೋಳ ಸರ್ಕಾರಿ ಪ್ರಾಥಮಿಕ ಶಾಲಾ ಮತದಾನ ಕೇಂದ್ರ ಹಾಗೂ ಕಕ್ಕಬೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲಡಿ ಸರ್ಕಾರಿ ಶಾಲಾ ಮತದಾನ ಕೇಂದ್ರದ ಎರಡರಲ್ಲಿ ವಿಶೇಷ ಭದ್ರತೆ ಒದಗಿಸಲಾಗಿತ್ತು.ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆ 56 ರಲ್ಲಿ ನಾಪೋಕ್ಲಿನ ಹಿರಿಯರಾದ ಬೊಪ್ಪೆರ ಕಾವೇರಪ್ಪ (98), ನಾಪೋಕ್ಲು ಮನವಟ್ಟಿರ ಮಾಚಯ್ಯ(89) ಅವರ ಪತ್ನಿ ನಿವೃತ್ತ ಶಿಕ್ಷಕಿ ಬೇಬಿ ನಂಜಮ್ಮ (84) ಬಿದ್ದಾಟಂಡ ಬಬ್ಬು ಬೋಪಣ್ಣ (81), ವಿಶೇಷ ಚೇತನ ಅಸ್ಮ ಟಿ.ಬಿ , ಬೇತು ಸರ್ಕಾರಿ ಪ್ರಾಥಮಿಕ ಶಾಲೆಯ ನಂಬರ್ ಒಂದು ಮತದಾನ ಕೇಂದ್ರದಲ್ಲಿ ಬೇತು ಮುಕ್ಕಟ್ಟಿ ಪಾರ್ವತಿ (87) ಸೇರಿದಂತೆ ಹಲವರು ಕುಟುಂಬದ ಸದಸ್ಯರ ಸಹಕಾರದೊಂದಿಗೆ ಮತ ಚಲಾಯಿಸಿದರು.

ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆಯಲ್ಲಿ ಮತ ಬೊಪ್ಪೆರ ಕಾವೇರಪ್ಪ(98) ಮಾತನಾಡಿ ಮತ ಹಾಕಿ ಹಕ್ಕು ಚಲಾಯಿಸಿದ್ದೇನೆ. ಮತದಾನ ಮಾಡದಿದ್ದರೆ ದೇಶಕ್ಕೆ ದ್ರೋಹ ಬಗೆದಂತೆ ಎಂದರು.

Share this article