ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಕಾವೇರಿ ನದಿ ಪ್ರವಾಹದಿಂದ ಜನ ಜೀವನ ಬಹುತೇಕ ಅಸ್ತವ್ಯಸ್ತಗೊಂಡಿದೆ. ಕುಶಾಲನಗರ ಪಟ್ಟಣದ ಸಾಯಿ ಬಡಾವಣೆ ಸಂಪೂರ್ಣ ಜಲಾವೃತಗೊಂಡಿದ್ದು ಮನೆಗಳಿಗೆ ನೀರು ನುಗ್ಗಿದ ಕಾರಣ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ.ಪ್ರವಾಹ ಪೀಡಿತ ಮತ್ತು ಮಳೆ ಹಾನಿ ಪ್ರದೇಶಗಳಿಗೆ ಕೊಡಗು ಮೈಸೂರು ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಒಡೆಯರ್ ಜಿಲ್ಲಾ ಆಡಳಿತದ ಜೊತೆಗೆ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಗತ್ಯವಿರುವ ಯೋಜನೆಗಳನ್ನು ರೂಪಿಸುವ ಮೂಲಕ ಕುಶಾಲನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರವಾಹ ಮುಕ್ತ ಪ್ರದೇಶವನ್ನಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ.ಕುಶಾಲನಗರ ಸಮೀಪದ ಗಾಂಧಿ ಬಸವನಹಳ್ಳಿ ಬಳಿಯ ರೊಂಡಕೆರೆ ಭಾರಿ ಮಳೆಯಿಂದ ಒಡೆದು ಹೋಗಿದ್ದು ಕೆಳಭಾಗದಲ್ಲಿ ಕೆಲವು ಮನೆಗಳಿಗೆ ಹಾನಿ ಉಂಟಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ತಹಸಿಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕುಶಾಲನಗರ ಪ್ರವಾಹ ಪೀಡಿತ ಬಡಾವಣೆ ಸಾಯಿ ಬಡಾವಣೆಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭ ಡಿವೈಎಸ್ಪಿ ಗಂಗಾಧರಪ್ಪ ಮತ್ತಿತರರು ಇದ್ದರು.
ದಿನದ 24 ಗಂಟೆಗಳ ಕಾಲ ಸ್ಥಳಿಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಮಳೆಹಾನಿ ಮತ್ತು ಪ್ರವಾಹ ಪೀಡಿತ ಪ್ರದೇಶದಲ್ಲಿ ಕರ್ತವ್ಯ ಮಾಡಲಿದ್ದಾರೆ ಎಂದು ಡಿ ವೈ ಎಸ್ ಪಿ ಗಂಗಾಧರಪ್ಪ ತಿಳಿಸಿದ್ದಾರೆ.ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಏರಿಕೆ ಆಗುತ್ತಿದ್ದು ಕುಶಾಲನಗರ-ಮಡಿಕೇರಿ-ಮೈಸೂರು ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಅಪಾಯ ಎದುರಾಗಿದೆ.
ಕುಶಾಲನಗರದ ತಾವರೆಕೆರೆ ಮತ್ತು ಗಂಧದಕೋಟೆ ಬಳಿ ನದಿ ನೀರು ಹೆದ್ದಾರಿ ರಸ್ತೆ ಬದಿಗೆ ತಲುಪಿದ್ದು ಹೆಚ್ಚಿನ ಮಳೆಯಾಗುತ್ತಿದ್ದು ಹೆದ್ದಾರಿ ರಸ್ತೆ ಮೇಲೆ ನೀರು ಹರಿಯುವ ಸಾಧ್ಯತೆ ಅಧಿಕವಾಗಿದೆ.