ಕೊನೆಗೂ ರೈತರ ಹೋರಾಟ, ಜನಪ್ರತಿನಿಧಿಗಳ ಒತ್ತಾಯ ಹಾಗೂ ನಿರಂತರ ಸಾರ್ವಜನಿಕ ಒತ್ತಡಕ್ಕೆ ಸ್ಪಂದಿಸಿದ ಸರ್ಕಾರ ಸೆ. 22ರಂದು ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಆದೇಶ ಹೊರಡಿಸಿದೆ.
ಪರಶಿವಮೂರ್ತಿ ಮಾಟಲದಿನ್ನಿ
ಕುಷ್ಟಗಿ: ಮಳೆ ಕೈಕೊಟ್ಟಿತು, ಹೊಲಗಳಲ್ಲಿ ಬೆಳೆ ಒಣಗಿತು, ರೈತರ ಬದುಕು ಸಂಕಷ್ಟಕ್ಕೆ ಸಿಲುಕಿತು. ಆದರೆ ಬರಪೀಡಿತ ತಾಲೂಕು ಪಟ್ಟಿಯಲ್ಲಿ ಮಾತ್ರ ಕುಷ್ಟಗಿ ತಾಲೂಕಿಗೆ ಸ್ಥಾನ ಸಿಗಲಿಲ್ಲ. ರೈತರ ಅಸಮಾಧಾನ ಹಂತ ಹಂತವಾಗಿ ಹೋರಾಟದ ರೂಪ ಪಡೆಯಿತು. ಕೊನೆಗೂ ರೈತರ ಹೋರಾಟ, ಜನಪ್ರತಿನಿಧಿಗಳ ಒತ್ತಾಯ ಹಾಗೂ ನಿರಂತರ ಸಾರ್ವಜನಿಕ ಒತ್ತಡಕ್ಕೆ ಸ್ಪಂದಿಸಿದ ಸರ್ಕಾರ ಮಂಗಳವಾರ ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಆದೇಶ ಹೊರಡಿಸಿದೆ.
ಕಂದಾಯ ಇಲಾಖೆಯ ಕಮೀಷನರ್ ಹೊನ್ನಂಬಾ ಎಸ್. ಅವರು ಸೆ. 22ರಂದು ಕುಷ್ಟಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಕನ್ನಡಪ್ರಭ ಧ್ವನಿ: ಕುಷ್ಟಗಿ ತಾಲೂಕಿನಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದರೂ, ರಾಜ್ಯ ಸರ್ಕಾರ ಘೋಷಿಸಿದ್ದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕುಷ್ಟಗಿ ಸೇರ್ಪಡೆಯಾಗಿರಲಿಲ್ಲ. ಈ ವ್ಯತ್ಯಾಸವನ್ನು ''''ಕನ್ನಡಪ್ರಭ'''' ಎರಡು ಬಾರಿ ವಿಶೇಷ ವರದಿಗಳ ಮೂಲಕ ಮುನ್ನೆಲೆಗೆ ತಂದಿತ್ತು.
ಮಳೆ ಮಾಪನ ಕೇಂದ್ರಗಳಲ್ಲಿನ ಅಂಕಿ-ಅಂಶಗಳಿಗಿಂತ ಗ್ರಾಮೀಣ ಭಾಗದ ಹೊಲಗಳಲ್ಲಿ ಕಂಡುಬರುತ್ತಿದ್ದ ವಾಸ್ತವ ಪರಿಸ್ಥಿತಿ ಭಿನ್ನವಾಗಿತ್ತು. ಬೆಳೆ ಒಣಗುತ್ತಿರುವುದು, ರೈತರ ಆತಂಕ ಹೆಚ್ಚುತ್ತಿರುವುದು ಹಾಗೂ ಬರ ಘೋಷಣೆಯ ಅಗತ್ಯವನ್ನು ವರದಿಗಳು ಎತ್ತಿಹಿಡಿದವು.
ರೈತರ ಆಕ್ರೋಶ: ಬರ ಘೋಷಣೆ ಆಗದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆ ಹೋರಾಟಗಳು ತೀವ್ರಗೊಂಡವು. ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಜತೆ ಸಾವಿರಾರು ರೈತರನ್ನು ಸೇರಿಸಿ ಕುಷ್ಟಗಿಯಲ್ಲಿ ಪ್ರತಿಭಟನೆ ನಡೆಸಿದರು.
ಹನುಮಸಾಗರ ಪಟ್ಟಣ ಬಂದ್ ನಡೆಯಿತು. ತಾವರಗೇರಾದಿಂದ ರೈತರು ಪಾದಯಾತ್ರೆ ನಡೆಸಿದರು. ಕರ್ನಾಟಕ ರಾಜ್ಯ ರೈತ ಪ್ರಾಂತ ಸಂಘ ಸೇರಿದಂತೆ ವಿವಿಧ ರೈತ ಸಂಘಟನೆಗಳು, ಪ್ರಗತಿಪರ ರೈತರು ಹಾಗೂ ಸಾರ್ವಜನಿಕರು ಹೋರಾಟಕ್ಕೆ ಧ್ವನಿಗೂಡಿಸಿದರು.
ಕುಷ್ಟಗಿ ಪಟ್ಟಣದಲ್ಲಿ ಹೋರಾಟಗಾರ ಬಸವರಾಜ ಗಾಣಿಗೇರ ಅವರು ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರದ ಗಮನ ಸೆಳೆದರು. ಬರ ಘೋಷಣೆಯಾಗದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯೂ ಕೇಳಿಬಂದಿತ್ತು.
ಸಿಎಂ, ಡಿಸಿಎಂಗೆ ಮನವಿ: ಬರ ಘೋಷಣೆಗೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಮಾಜಿ ಸಚಿವ ಅಮರೇಗೌಡ ಪಾಟೀಲ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಒಂದೆಡೆ ರೈತರ ಬೀದಿ ಹೋರಾಟ, ಮತ್ತೊಂದೆಡೆ ಜನಪ್ರತಿನಿಧಿಗಳ ಮನವಿ ಹಾಗೂ ಸಾರ್ವಜನಿಕ ಒತ್ತಡ; ಇದರ ಪರಿಣಾಮ ಕಂದಾಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಹಲವು ದಿನಗಳಿಂದ ಬರ ಘೋಷಣೆಗೆ ಒತ್ತಾಯಿಸುತ್ತಿದ್ದ ರೈತರ ಹೋರಾಟಕ್ಕೆ ಜಯ ದೊರೆತಿದೆ.
ಬರ ಘೋಷಣೆಯಿಂದ ರೈತರಿಗೆ ಸರ್ಕಾರದ ನಿಯಮಾನುಸಾರ ದೊರೆಯಲಿರುವ ಪರಿಹಾರ, ಉದ್ಯೋಗ ಖಾತರಿ ಕಾಮಗಾರಿಗಳ ವಿಸ್ತರಣೆ, ಬೆಳೆಹಾನಿ ಪರಿಹಾರ ಸೇರಿದಂತೆ ಬರಪರಿಹಾರ ಕ್ರಮಗಳ ನಿರೀಕ್ಷೆ ಮೂಡಿದೆ. ಆದರೆ ಘೋಷಣೆಯ ಬಳಿಕ ಪರಿಹಾರ ಕ್ರಮಗಳು ತ್ವರಿತವಾಗಿ ರೈತರ ಹೊಲ-ಮನೆ ತಲುಪಬೇಕು ಎಂಬುದು ಇದೀಗ ರೈತರ ಪ್ರಮುಖ ನಿರೀಕ್ಷೆಯಾಗಿದೆ.
ತುರ್ತು ಕ್ರಮ ಕೈಗೊಳ್ಳಿ: ಕುಷ್ಟಗಿ ತಾಲೂಕಿನ ರೈತರು ಹಾಗೂ ಸಂಘಟನೆಗಳ ಹೋರಾಟ ಫಲವಾಗಿ ಬರಪೀಡಿತ ತಾಲೂಕಾಗಿ ಘೋಷಣೆಯಾಗಿದೆ. ಹೋರಾಟಗಾರರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಸರ್ಕಾರ ನಮ್ಮ ತಾಲೂಕಿನಲ್ಲಿ ಬರಪರಿಹಾರ ಕ್ರಮಗಳನ್ನು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವೆ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.