- ಬನ್ನಿಕೋಡು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ- - - ಮಲೇಬೆನ್ನೂರು: ಮನುಷ್ಯನ ಸಾಮಾಜಿಕ ಸ್ಥಿತ್ಯಂತರಗಳು ಹಾಗೂ ವೈವಿಧ್ಯಮಯ ತಲ್ಲಣಗಳನ್ನು ಕುವೆಂಪು ತಮ್ಮ ಸಾಹಿತ್ಯ ಕೃಷಿಯಲ್ಲಿ ಅನಾವರಣಗೊಳಿಸಿದ್ದಾರೆ ಎಂದು ಉಪನ್ಯಾಸಕ ಬಿ.ಬಿ. ರೇವಣ ನಾಯಕ್ ಹೇಳಿದರು.
ಇಲ್ಲಿಗೆ ಸಮೀಪದ ಬನ್ನಿಕೋಡು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಶಾಲಾ ಅಂಗಳದಲ್ಲಿ ಸಾಹಿತ್ಯೋತ್ಸವ ಮತ್ತು ಶ್ರೀಮತಿ ಲಲಿತಮ್ಮ ಡಾ।। ಚಂದ್ರಶೇಖರ್ ದತ್ತಿ, ಶ್ರೀಮತಿ ಶೀಲಾವತಿ ರಾಮಕೃಷ್ಣ ಮೂರ್ತಿ ದತ್ತಿ, ಜಿ.ಎಂ. ಮಲ್ಲಿಕಾರ್ಜುನ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪುರವರ ಸಾಹಿತ್ಯ ವಿಚಾರಧಾರೆಗಳು ವಿಷಯ ಕುರಿತು ಮಾತನಾಡಿದರು. ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಮತ್ತು ವೈಚಾರಿಕ ಚಿಂತನೆಗಳಿಗೆ ಆದ್ಯತೆ ನೀಡಿದ ಕುವೆಂಪು ಅವರು ಶೋಷಣೆಯಿಂದ ಮುಕ್ತರಾಗಲು ಗಮನಹರಿಸಿದ್ದರು ಎಂದರು.ಧನಾತ್ಮಕ ಚಿಂತನೆಯೇ ದೇವರು ಎಂದು ಅವರ ಸಾಹಿತ್ಯದಲ್ಲಿ ಕಂಡುಬಂದಿದ್ದು, ಅಜ್ಞಾನದ ಕೋಣೆಗೆ ಕುವೆಂಪುರವರ ಸಾಹಿತ್ಯವು ವಿಜ್ಞಾನದ ದೀಪವನ್ನು ಹಚ್ಚಿ, ಸಮಾಜಕ್ಕೆ ಸ್ಫೂರ್ತಿ ನೀಡಿದೆ. ಅಗಾಧ ಕನ್ನಡದ ಬೆಳವಣಿಗೆಗೆ ಆಧುನಿಕ ಸಾಹಿತ್ಯದ ಮೆರುಗು ನೀಡಿದ್ದಾರೆ. ಕುವೆಂಪು ಅವರ ಸಾಹಿತ್ಯದಲ್ಲಿ ವಿದ್ಯುತ್ ಸಂಚಾರವನ್ನು ಕಾಣಬಹುದು ಎಂದರು.
ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಪರಿಷತ್ತು ನಡೆದುಬಂದ ದಾರಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಂವಾದ ನಡೆಸಿದರು. ವಿದ್ಯಾರ್ಥಿಗಳಾದ ನಿರಂಜನ್, ಬಿಂದು, ಉಮಾಮಹೇಶ್ವರಿ, ಗುರುಕಿರಣ್, ಸ್ನೇಹಾ ಅವರು ಪ್ರಶ್ನೋತ್ತರದಲ್ಲಿ ವಿಜೇತರಾದರು.ಗ್ರಾಪಂ ಅಧ್ಯಕ್ಷೆ ಮೀನಾಕ್ಷಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕಾರ್ಯಕಾರಿ ಸದಸ್ಯ ರಿಯಾಜ್ ಅಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪ್ರಾಚಾರ್ಯ ವಿ.ಬಿ. ಕೊಟ್ರೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಕಸಬಾ ಕಸಾಪ ಅಧ್ಯಕ್ಷೆ ಗೀತಾ ಕೊಂಡಜ್ಜಿ, ಸಂಘಟನಾ ಕಾರ್ಯದರ್ಶಿ ಸದಾನಂದ, ಶಿಕ್ಷಕರಾದ ಗಣೇಶ್, ನಿಂಗರಾಜ್, ನಾಗರಾಜ್, ಸುರೇಂದ್ರ ಮತ್ತಿತರರು ಹಾಜರಿದ್ದರು.
- - --೧ಎಂಬಿಆರ್೧: ಬನ್ನಿಕೋಡು ಶಾಲೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದರು.