ಕನ್ನಡಪ್ರಭ ವಾರ್ತೆ ಮಧುಗಿರಿ
ಕುವೆಂಪು ಕನ್ನಡ ಪ್ರಜ್ಞೆಯ ಉನ್ನತ ಶಿಖರ, ಕನ್ನಡ ಡಿಂಡಿಂ ಬಾರಿಸು ಕರ್ನಾಟಕವನ್ನು ಎಚ್ಚರಿಸಿದರು ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ನುಡಿದರು.ಇಲ್ಲಿನ ಸಹೃದಯ ಬಳಗದಿಂದ ಏರ್ಪಡಿಸಿದ್ದ ಜಯ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆಗೆ ಶತಮಾನ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕವಿಗೆ ನುಡಿನಮನ ಸಲ್ಲಿಸಿ, ಈ ಗೀತೆ ವಿವಿಧೆತೆಯಲ್ಲಿ ಏಕತೆ ಸಾಧಿಸಿದೆ. ಕನ್ನಡಿಗರ ಜನಮನದಲ್ಲಿ ನಿತ್ಯ ನಿರಂತರವಾಗುತ್ತಿದೆ. ಕಿಶೋರ ಚಂದ್ರವಾಣಿ ಎಂಬ ಹೆಸರಿನಿಂದ ಕುವೆಂಪು ಬರೆದ ಈ ನಾಡಗೀತೆ ಪ್ರಾಕೃತಿಕ ಸಂಪತ್ತು , ಧರ್ಮದೀಪಕರು, ಕವಿವರ್ಯರು, ಕಲೆ ಮುಂತಾದ ವಿಚಾರಗಳನ್ನು ತಿಳಿಸುತ್ತದೆ. ನಾವು ನಮ್ಮ ರಾಜ್ಯದ ದೃಷ್ಠಿಯಿಂದ ಕರ್ನಾಟಕದ ಕನ್ನಡಿಗರು. ರಾಷ್ಟ್ರದ ದೃಷ್ಟಿಯಿಂದ ಭಾರತೀಯರು. ನಮ್ಮ ಕರ್ನಾಟಕ ,ಭಾರತೀಯತೆ ಎಂದಿಗೂ ಎದುರು ನಿಲ್ಲದು ಎಂದು ಕುವೆಂಪು ಬಹಳ ಹಿಂದೆಯೇ ತಿಳಿಸಿದ್ದರು ಎಂದರು.
ಗ್ರಂಥಪಾಲಕ ಜಿ.ಎಸ್.ನಾಗಭೂಷಣ್ ಮಾತನಾಡಿ, ಕನ್ನಡ ಕರ್ನಾಟಕದ ಹಿರಿಮೆ ಶತ ಶತಮಾನದ್ದು, ಕರ್ನಾಟಕದ ಲೌಕಿಕ, ರಾಜಕೀಯ, ವೈಜ್ಞಾನಿಕ, ಆರ್ಥಿಕ ಇನ್ನೂ ಹತ್ತಾರು ಕ್ಷೇತ್ರಗಳಿಗೆ ಸಂಬಂಧಪಟ್ಟಿದ್ದನ್ನು ನಾವು ಸಾಧಿಸಿ ತೋರಿಸಬೇಕಿದೆ. ಕನ್ನಡಿಗರು ವಿನಯಕ್ಕಾಗಿ ಬಗ್ಗಿ ನಡೆಯಬಹುದು. ಆದರೆ ಎಂದಿಗೂ ಅಶಕ್ತರಲ್ಲ ಎಂಬುದನ್ನು ಮರೆಯಬಾರದು ಎಂದರು.ಉಪನ್ಯಾಕ ಮಂಜುಪ್ರಸಾದ್ ಮಾತನಾಡಿ, ಸೇಕ್ಸಪಿಯರ್ ಮಹಾಕವಿ ಹುಟ್ಟುವುದಕ್ಕೆ 600 ವರ್ಷಗಳ ಹಿಂದೆಯೇ ಮಹಾಕವಿ ಪಂಪ ಜನಿಸಿದ್ದ ಎಂಬುದನ್ನು ನೆನಪಿಸಿದರು. ರಾಜ್ಯವನ್ನು ಪಟ್ಟಭದ್ರ ಹಿತಸಕ್ತರ ಹಿಡಿತದಿಂದ ಬಿಡಿಸಿಕೊಂಡು ದೇಶ ಭಾಷೆ,ರಾಜ್ಯ ಭಾಷೆಗಳನ್ನು ಪ್ರೀತಿಸಿ ಅನ್ಯ ಭಾಷೆಗಳನ್ನು ಗೌರವಿಸಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಹನುಮಂತರಾಯಪ್ಪ ಮಾತನಾಡಿ,ನಾಡು,ನುಡಿ,ಸಂಸ್ಕೃತಿಯ ಬಗ್ಗೆ ಕುವೆಂಪು ಅಭಿಪ್ರಾಯಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಆಸಕ್ತ ನಾಗರಿಕರು ,ಬೋಧಕ ಬೋಧಕೇತರರು ಭಾಗವಹಿಸಿದ್ದರು.