ಗುಂಡಿಗಳ ಸಾಮ್ರಾಜ್ಯವಾದ ರಸ್ತೆಗಳಲ್ಲಿ ಸಂಚಾರ ದುಸ್ತರ
ರಾಮಮೂರ್ತಿ ನವಲಿಕನ್ನಡಪ್ರಭ ವಾರ್ತೆ ಗಂಗಾವತಿ
ನಗರದಲ್ಲಿ 35 ವಾರ್ಡ್‌ಗಳಲ್ಲಿ 100ಕ್ಕೂ ಹೆಚ್ಚು ಬಡಾವಣೆಗಳಿದ್ದು, ಪ್ರಮುಖವಾಗಿ ಮೂರನೇ ವಾರ್ಡ್ ವ್ಯಾಪ್ತಿಯ ಸಿದ್ದಿಕೇರಿ ರಸ್ತೆಯ ಮಾರ್ಗದ ರಾಷ್ಟ್ರಕವಿ ಕುವೆಂಪು ಬಡಾವಣೆ ಈಗ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ.ಇಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿದ್ದು, 500ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ರಸ್ತೆ ಮಾತ್ರ ಅದ್ವಾನಗೊಂಡಿದ್ದು, ನಿವಾಸಿಗಳು ಸಂಚರಿಸಲು ಹರಸಾಹಸ ಮಾಡುತ್ತಿದ್ದಾರೆ. ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿರುವ ಆಟೋಗಳು ಗುಂಡಿಗಳ ಸಾಮ್ರಾಜ್ಯವಾದ ರಸ್ತೆಗಳಲ್ಲಿ ಸಂಚರಿಸಬೇಕಾಗಿದೆ. ಮಳೆ ಬಂದರೆ ಇದು ಕೃಷಿ ಹೊಂಡದಂತಾಗಿರುತ್ತದೆ. ವೃದ್ಧರು, ಮಹಿಳೆಯರು ಸಂಚರಿಸುವುದು ದುಸ್ತರವಾಗಿದೆ.
ರಸ್ತೆ ಪಕ್ಕದಲ್ಲಿ ಜಾಲಿ, ಮುಳ್ಳಿನ ಕಂಟಿಗಳು:ಸಿದ್ದಿಕೇರಿ ಪ್ರಮುಖ ರಸ್ತೆಯಿಂದ ಕುವೆಂಪು ಬಡಾವಣೆಗೆ ಸುಮಾರು 1 ಕಿಮೀ ಅಂತರ ಇದೆ. ರಸ್ತೆ ಪಕ್ಕದಲ್ಲಿ ಜಾಲಿ, ಮುಳ್ಳಿನ ಕಂಟಿಗಳು ರಾರಾಜಿಸುತ್ತವೆ. ರಾತ್ರಿ ಸಮಯದಲ್ಲಿ ವಾಹನಗಳು ಬರುತ್ತಿದ್ದರೂ ಒಬ್ಬರಿಗೊಬ್ಬರು ಕಾಣದಂತೆ ಮುಳ್ಳಿನ ಕಂಟಿಗಳು ಇವೆ.
ವಸತಿ ನಿಲಯಕ್ಕೂ ತೊಂದರೆ:ಇದೇ ಮಾರ್ಗದಲ್ಲಿ ಪರಿಶಿಷ್ಟ ಪಂಗಡಗಳ ಮಹಿಳೆಯರ ವಸತಿ ನಿಲಯ ಇದೆ. ಇಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದು, ದಿನ ನಿತ್ಯ ಕಾಲು ದಾರಿಯಲ್ಲೆ ಶಾಲಾ, ಕಾಲೇಜುಗಳಿಗೆ ಹೋಗುತ್ತಾರೆ. ಸರಿಯಾದ ರಸ್ತೆ ಇಲ್ಲದ ಕಾರಣ ವಿದ್ಯಾರ್ಥಿನಿಯರು ಸಂಬಂಧಪಟ್ಟ ಇಲಾಖೆಗೆ ನಿತ್ಯ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ. ಇನ್ನು ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ ಎಂಬ ದೂರು ಕೇಳಿ ಬರುತ್ತದೆ.
ಇನ್ನಾದರೂ ಈ ವಾರ್ಡಿಗೆ ಸಂಬಂಧಪಟ್ಟ ಸದಸ್ಯರು, ಅಧಿಕಾರಿಗಳು ಗಮನಹರಿಸಿ ಉತ್ತಮ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಜೊತೆಗೆ ಸಮರ್ಪಕ ನೀರು ಪೂರೈಕೆ, ಸ್ವಚ್ಛತೆಗೆ ಕ್ರಮಕೈಗೊಳ್ಳಬೇಕು ಎನ್ನುವುದು ವಾರ್ಡಿನ ನಾಗರಿಕರ ಆಗ್ರಹವಾಗಿದೆ.