ಕುವೆಂಪು ವಿವಿಯ ಘಟಿಕೋತ್ಸವದಂತಹ ಸಮಾರಂಭ ನಿರ್ವಹಿಸಲು ಇವೆಂಟ್ ಮ್ಯಾನೇಜ್ ಮೆಂಟ್‌ಗೆ ಗುತ್ತಿಗೆ ನೀಡುತ್ತಾರೆ ಎಂದರೆ ವಿವಿಯಲ್ಲಿ ಎಷ್ಟರಮಟ್ಟಿಗೆ ಅವ್ಯವಹಾರ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಆರೋಪಿಸಿದರು.
ಶಿವಮೊಗ್ಗ: ಕುವೆಂಪು ವಿವಿಯ ಘಟಿಕೋತ್ಸವದಂತಹ ಸಮಾರಂಭ ನಿರ್ವಹಿಸಲು ಇವೆಂಟ್ ಮ್ಯಾನೇಜ್ ಮೆಂಟ್‌ಗೆ ಗುತ್ತಿಗೆ ನೀಡುತ್ತಾರೆ ಎಂದರೆ ವಿವಿಯಲ್ಲಿ ಎಷ್ಟರಮಟ್ಟಿಗೆ ಅವ್ಯವಹಾರ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇದೆನೆಲ್ಲ ನೋಡಿದರೆ ಕುವೆಂಪು ವಿವಿಯು ಮುಚ್ಚುವ ದಿನಗಳು ದೂರವಿಲ್ಲ ಎಂದು ಅನಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಆರೋಪಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ವಿವಿಯಲ್ಲಿ ಸುಮಾರು 500ಕ್ಕೂ ಹೆಚ್ಚು ನೌಕರರಿದ್ದಾರೆ. ವಿದ್ಯಾರ್ಥಿಗಳಿಂದ ಪಡೆದ ಶುಲ್ಕದಲ್ಲಿ ಅರೆಕಾಲಿಕ ಉದ್ಯೋಗಿಗಳಿಗೆ ವೇತನ ನೀಡಲು ಬಳಸಿಕೊಳ್ಳುತ್ತಾರೆ ಎಂದರೆ ಕುವೆಂಪು ವಿವಿ ಸ್ಥಿತಿ ಎಲ್ಲಿಗೆ ಬಂದಿದೆ ಎಂದು ಅರ್ಥವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕುವೆಂಪು ವಿವಿಯಲ್ಲಿ ಭ್ರಷ್ಟಾಚಾರ ಸೇರಿದಂತೆ ಅನೇಕ ಅಧ್ವಾನಗಳು ನಡೆಯತೊಡಗಿವೆ. ಈ ಬಗ್ಗೆ ಸರ್ಕಾರವಾಗಲೀ ಅಲ್ಲಿನ ಕುಲಪತಿಗಳು ಕಿಂಚಿತ್ತೂ ಯೋಚಿಸುತ್ತಿಲ್ಲ. ಹೀಗೆ ಮುಂದುವರೆದರೆ ಕುವೆಂಪು ವಿವಿ ಮುಚ್ಚುವ ದಿನಗಳು ಹತ್ತಿರ ಬರುತ್ತವೆ. ಅದಕ್ಕೂ ಮುಂಚೆ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿಯೂ ಒಂದು. ಪ್ರತಿ ವರ್ಷ ಕುವೆಂಪು ವಿವಿ ವ್ಯಾಪ್ತಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆಯುತ್ತಾರೆ. ಆದರೆ ಅವರಿಗೆ ಯುವನಿಧಿಗೆ ಅರ್ಜಿ ಹಾಕಲು ಕೂಡ ಬರುವುದಿಲ್ಲ. ಕಾರಣ ಕುವೆಂಪು ವಿವಿಯಲ್ಲಿರುವ ಅವ್ಯವಸ್ಥೆ. ಅವರಿಗೆ ಇದುವರೆಗೂ ಅಂಕಪಟ್ಟಿಯೇ ಬಂದಿಲ್ಲ. ಒಂದು ಅಂಕಪಟ್ಟಿ ಕೊಡಲು ಇವರಿಗೆ ವರ್ಷಗಳು ಬೇಕೇ ಎಂದ ಅವರು, ಈ ಬಗ್ಗೆ ಕುಲಪತಿಗಳನ್ನು ಕೇಳಿದರೆ ಅವರ ಉತ್ತರವೇ ಒಂದು ರೀತಿಯ ದರ್ಪವಾಗಿರುತ್ತದೆ. ಬೇರೆ ದೇಶದಿಂದ ಬಂದವರಂತೆ ಅವರು ಕಾಣುತ್ತಾರೆ ಎಂದು ಕಿಡಿಕಾರಿದರು.
ಇನ್ನು ಅಲ್ಲಿನ ಸಾಫ್ಟ್‌ವೇರ್ ಹಗರಣ ದೊಡ್ಡದಿದೆ. ಸದ್ಯದರಲ್ಲೇ ಈ ಹಗರಣದ ಬಗ್ಗೆ ತನಿಖೆಯಾಗಲಿದೆ. ಸುಮಾರು 25 ಲಕ್ಷಕ್ಕೂ ಹೆಚ್ಚು ಮೊತ್ತದ ಹಗರಣ ಇದಾಗಿದೆ ಎಂದು ದೂರಿದರು.
ಘಟೀಕೋತ್ಸವಕ್ಕೆ ಉನ್ನತ ಶಿಕ್ಷಣ ಸಚಿವರೇಕೆ ಬರಲಿಲ್ಲ ?
ಘಟಿಕೋತ್ಸವ ಸಮಾರಂಭಕ್ಕೆ ಉನ್ನತ ಶಿಕ್ಷಣ ಸಚಿವರು ಬರಬೇಕಿತ್ತು. ಇಲ್ಲಿನ ಸಮಸ್ಯೆಗಳ ಬಗ್ಗೆ ಆಲಿಸಬೇಕಿತ್ತು. ನಾವು ಕೂಡ ಅವರು ಬರುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರು ಬರಲಿಲ್ಲ. ಕಳೆದ ವರ್ಷವೂ ಅವರು ಬಂದಿರಲಿಲ್ಲ. ಕುವೆಂಪು ವಿವಿ ಬಗ್ಗೆ ಯಾಕಿಷ್ಟು ಅನಾದರ ಎಂದು ಅರ್ಥವಾಗುತ್ತಿಲ್ಲ. ರಾಜ್ಯಪಾಲರು ಕಾರ್ಯಕ್ರಮಕ್ಕೆ ಬರುತ್ತಾರೆ ಎಂಬ ಕಾರಣಕ್ಕೆ ಅವರು ಬರಲಿಲ್ಲ ಎಂಬ ಅನುಮಾನ ನಮಗಿದೆ. ಅವರು ಹೇಳಿದ ದಿನಾಂಕವನ್ನೇ ಗೊತ್ತುಪಡಿಸಲಾಗಿತ್ತು. ಆದರೂ ಅವರು ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದವರೇ ಆದ ಹಿರಿಯ ಮುತ್ಸದ್ದಿ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಿದರು. ಇದಕ್ಕಾದರೂ ಅವರು ಬರಬಹುದಿತ್ತು. ಆದರೆ, ಬರಲಿಲ್ಲ. ಏನಾಗಿದೆ ಅವರಿಗೆ ಎಂದು ಗೊತ್ತಿಲ್ಲ. ಇದು ವಿದ್ಯಾರ್ಥಿಗಳಿಗೆ ಮತ್ತು ವಿಶ್ವವಿದ್ಯಾಲಯಕ್ಕೆ ಮಾಡಿದ ಅವಮಾನ ಎಂದು ಹರಿಹಾಯ್ದರು.ಇನ್ನು ರಾಜ್ಯ ಸರ್ಕಾರ ಈಗ ಮತ್ತೊಂದು ನಿರ್ಧಾರ ಕೈಗೊಂಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ಸ್ಥಾಪಿಸಲು ಹೊರಟಿದೆ. ಈ ವಿವಿಗೆ ಮುಖ್ಯಮಂತ್ರಿಗಳು ಕುಲಾಧಿಪತಿಗಳಾಗಿರಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಇದು ಎಷ್ಟರಮಟ್ಟಿಗೆ ಸರಿಯೋ ಅರ್ಥವಾಗುತ್ತಿಲ್ಲ. ಬಹುಶಃ ರಾಜ್ಯಪಾಲರೇ ಕುಲಪತಿಗಳಾಗಬೇಕು ಎಂಬ ಈಗಿರುವ ನಿಯಮದಿಂದ ರಾಜ್ಯ ಸರ್ಕಾರ ಆತಂಕಗೊಂಡಂತೆ ಕಾಣುತ್ತದೆ. ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿಯೇ ಬರುತ್ತದೆ. ಹಾಗಾಗಿ ಅವರ ಪಕ್ಷದವರೇ ರಾಜ್ಯಪಾಲರಾಗುತ್ತಾರೆ ಎಂಬ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ, ಅವರಿಗೆ ನೆನಪಿರಲಿ, ರಾಜ್ಯದಲ್ಲಿಯೂ ಕೂಡ ಬಿಜೆಪಿ ಸರ್ಕಾರ ಬರುತ್ತದೆ ಎಂದು ಕುಟುಕಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಲತೇಶ್, ಅಣ್ಣಪ್ಪ ಕೆ.ವಿ., ಚಂದ್ರಶೇಖರ್ ಇದ್ದರು.
ಕುವೆಂಪು ವಿವಿಯಲ್ಲಿ ಈ ಹಿಂದೆ ಪದವಿ ಪರೀಕ್ಷೆ ಪತ್ರಿಕೆಗಳ ಮೌಲ್ಯಮಾಪನ ಮಾಡಿದ ಉಪನ್ಯಾಸಕರಿಗೆ ಮೌಲ್ಯಮಾಪನ ಸಂಭಾವನೆ ನೀಡಿಲ್ಲ. ನಾಲ್ಕು ತಿಂಗಳು ಕಳೆದರೂ ಅವರಿಗೆ ಇನ್ನೂ ಭತ್ಯೆ ನೀಡಿಲ್ಲ. ಅವರು ಮುಂದಿನ ದಿನದಲ್ಲಿ ಮೌಲ್ಯಮಾಪನವನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ವಿವಿಯಲ್ಲಿ ಪರೀಕ್ಷಾ ಹಗರಣಗಳು ಎಗ್ಗಿಲ್ಲದೇ ನಡೆಯುತ್ತಿವೆ. ಈ ಎಲ್ಲದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು.
- ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ.
ಮಧು ಬಂಗಾರಪ್ಪ ತಮ್ಮ ಮಾತಿಗೆ ಲಗಾಮು ಹಾಕಬೇಕು
ಶಿವಮೊಗ್ಗ: ಜಿಲ್ಲಾ ಉಸ್ತುವಾರಿಯ ಸಚಿವ ಮಧು ಬಂಗಾರಪ್ಪ ಅವರು ಸಂಸದರ ವಿರುದ್ಧ ಕೆಟ್ಟ ಪದಗಳು ಬಳಕೆ ಮಾಡಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಧು ಬಂಗಾರಪ್ಪ ಅವರು ತಮ್ಮ ಮಾತಿಗೆ ಲಗಾಮು ಹಾಕಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕಿಡಿಕಾರಿದರು.
ನಿಮ್ಮ ಲೆವೆಲ್‌ಗೆ ನಮ್ಮ ಒಬ್ಬ ಅಧ್ಯಕ್ಷ ಸಮರ್ಥನಾಗಿದ್ದಾನೆ. ನೀವು ಸಚಿವರಾಗಿದ್ದರೂ ಜಿಲ್ಲೆಗೆ ಕೇಂದ್ರದಿಂದ ಮಾತ್ರ ಅನುದಾನವನ್ನು ನೋಡುತ್ತಿದ್ದೇವೆ, ರಾಜ್ಯದಿಂದ ಯಾವ ಅನುದಾನಗಳು ಬರುತ್ತಿಲ್ಲ. ರಾಜ್ಯ ಸರ್ಕಾರದಿಂದ ಶಿವಮೊಗ್ಗ ಜಿಲ್ಲೆಗೆ ಒಂದೇ ಒಂದು ಘೋಷಣೆ ಮಾಡಿರುವುದು ಇದ್ದರೆ ತೋರಿಸಿ ಎಂದು ಸವಾಲು ಎಸೆದರು.
ರಾಜ್ಯದಲ್ಲಿ 23 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಮುಗಿದು ಪಾರದರ್ಶಕವಾಗಿ ನೇಮಕ ಆಗಿದೆ. 15 ಕೋಟಿ ಗಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಬಿಜೆಪಿಯಲ್ಲಿ ಸಣ್ಣ ಪುಟ್ಟ ಗೊಂದಲಗಳು ಆಗುವುದು ಸಹಜ. ರಾಜ್ಯ ಹಾಗೂ ಜಿಲ್ಲೆಯ ಪಕ್ಷದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಒಂದು ಶಿಸ್ತು ಇದೆ. ಆ ಶಿಸ್ತಿನ ಪ್ರಕಾರವೇ ನಡೆಯುತ್ತದೆ. ಗೊಂದಲಗಳಿದ್ದರೆ ಹಿರಿಯರು ಅದನ್ನು ಸರಿಪಡಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.