ನಿವೃತ್ತ ಪ್ರಾಂಶುಪಾಲ ಅಭಿಮತ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಕುವೆಂಪುರವರ ವೈಚಾರಿಕ ಪ್ರಜ್ಞೆ ಹಾಗೂ ವಿಶ್ವಮಾನವ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ದಾದಾಪೀರ್ ನವಿಲೆಹಾಳ್ ಹೇಳಿದರು.
ತಾಲೂಕಿನ ಸೀಬಾರದ ವಿಶ್ವಮಾನವ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ 121ನೇ ಜನ್ಮದಿನಾಚರಣೆ ಅಂಗವಾಗಿ ಚಿತ್ರದುರ್ಗ ಸೈನ್ಸ್ ಫೌಂಡೇಶನ್, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.ಕುವೆಂಪುರವರನ್ನು ಅಧ್ಯಯನ ಮಾಡುವುದು ತುಂಬಾ ಕಷ್ಟ. ಕುವೆಂಪುರವರು ಇಂಗ್ಲೀಷ್ ಪ್ರೇಮಿಯಾಗಿದ್ದರೂ ಕನ್ನಡದ ಮೇಲಿನ ಸೆಳೆತ, ವ್ಯಾಮೋಹ ಅಪ್ರತಿಮವಾಗಿತ್ತು. ಕನ್ನಡ ಭಾಷೆಯ ಮೇಲಿನ ಆಸಕ್ತಿಯನ್ನು ಚಿಕ್ಕ ವಯಸ್ಸಿನಲ್ಲಿಯೇ ಬೆಳೆಸಿಕೊಂಡರು. ತಮ್ಮ ಕಾವ್ಯಗಳ ಮೂಲಕ ಕನ್ನಡಿಗರಿಗೆ ಎಚ್ಚರಿಸುತ್ತಿದ್ದರು. ಅವರ ಕಾವ್ಯಗಳು, ನಾಟಕಗಳು, ಇಂದಿಗೂ ಎಲ್ಲರ ಗಮನ ಸೆಳೆಯುತ್ತಿವೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಕುವೆಂಪುರವರ ಹೆಸರಿನಲ್ಲಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕುವೆಂಪುರವರನ್ನು ಒಳಗೊಂಡಂತೆ ಎಲ್ಲಾ ಕವಿಗಳು, ಸಾಹಿತಿಗಳು ಕನ್ನಡ ಭಾಷೆಯ ಬೆಳವಣಿಗೆಗೆ ಪ್ರಾಧಾನ್ಯತೆ ನೀಡಿದರು. ಕುವೆಂಪುರವರ ವಿಚಾರಕ್ರಾಂತಿಗೆ ನಾವೆಲ್ಲರೂ ಕೈ ಜೋಡಿಸೋಣ ಎಂದರು.ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರ ದತ್ತಿ ನಿಧಿಯಿಂದ ನಡೆದ ಪ್ರಬಂಧ ಸ್ಪರ್ಧೆ, ಏಕಪಾತ್ರಾಭಿನಯ, ನಾಟಕ ಓದುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಅಧ್ಯಕ್ಷ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ವಿಶ್ವಮಾನವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ನೀಲಕಂಠದೇವ, ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ, ಕೆವಿ.ನಾಗಲಿಂಗರೆಡ್ಡಿ, ಜಲೀಲ್ ಸಾಬ್, ಎಚ್.ಆರ್.ಸುಧಾ, ಚನ್ನಬಸಪ್ಪ, ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.