ಬೋಗಸ್‌ ಕಾರ್ಡ್‌ದಾರರಿಗೆ ಕಾರ್ಮಿಕ ಕಿಟ್, ಕಾರ್ಮಿಕರ ಪ್ರತಿಭಟನೆ

KannadaprabhaNewsNetwork |  
Published : Jul 24, 2025, 12:49 AM IST
ಫೋಟೋ : 23ಎಚ್‌ಎನ್‌ಎಲ್2, 2ಎ | Kannada Prabha

ಸಾರಾಂಶ

ಈಗಾಗಲೇ ಕೆಲವರಿಗೆ ಕಾರ್ಮಿಕರ ಕಿಟ್ ನೀಡಲಾಗಿದ್ದು ಅವನ್ನು ಮರಳಿ ಪಡೆಯಬೇಕು. ಬೋಗಸ್ ಕಾರ್ಡುದಾರರ ಮಾಹಿತಿ ಪಡೆದು, ಪರಿಶೀಲಿಸಿ ಕ್ರಮ ಜರುಗಿಬೇಕು ಎಂದು ಒತ್ತಾಯಿಸಲಾಯಿತು.

ಹಾನಗಲ್ಲ: ಕಾರ್ಮಿಕರ ಕಿಟ್ ವಿತರಣೆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು ಬೋಗಸ್ ಕಾರ್ಡುದಾರರಿಗೆ ಕಿಟ್ ವಿತರಿಸಲಾಗುತ್ತಿದೆ. ಏಜೆಂಟರ ಮೂಲಕ ಕಾರ್ಮಿಕ ಕಾರ್ಡ್ ದಾಖಲಾತಿ ನಡೆಯುತ್ತಿದೆ ಎಂದು ಆಪಾದಿಸಿ ಕಾರ್ಮಿಕರ ಕಿಟ್ ವಿತರಣೆಯನ್ನು ಸ್ಥಗಿತಗೊಳಿಸಿದರು.ಬುಧವಾರ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಕಾರ್ಮಿಕರ ಕಾರ್ಯಾಲಯದಲ್ಲಿ ಕಿಟ್ ವಿತರಣೆಗೆ ಮುಂದಾದ ಅಧಿಕಾರಿಗಳನ್ನು ತಡೆದು, ಕಿಟ್ ಹಂಚಿಕೆ ಬೇಡ. ಮೊದಲು ಅರ್ಹ ಕಾರ್ಮಿಕರ ಯಾದಿ ಮಾಡಿ. ಅನರ್ಹರನ್ನು ತೆಗೆದು ಹಾಕಿ. ಬೋಗಸ್ ಕಾರ್ಡುದಾರರಿಗೇ ಕಾರ್ಮಿಕರ ಸೌಲಭ್ಯಗಳು ಸಿಗುತ್ತಿವೆ. ಇದನ್ನು ಸಹಿಸುವುದಿಲ್ಲ. ಈಗಾಗಲೇ ಕೆಲವರಿಗೆ ಕಿಟ್ ನೀಡಲಾಗಿದ್ದು ಅವನ್ನು ಮರಳಿ ಪಡೆಯಬೇಕು. ಬೋಗಸ್ ಕಾರ್ಡುದಾರರ ಮಾಹಿತಿ ಪಡೆದು, ಪರಿಶೀಲಿಸಿ ಕ್ರಮ ಜರುಗಿಬೇಕು ಎಂದು ಒತ್ತಾಯಿಸಿ ಕಿಟ್ ವಿತರಣೆಯನ್ನು ಸ್ಥಗಿತಗೊಳಿಸಿದರು.ಈ ಸಂದರ್ಭದಲ್ಲಿದ್ದ ಎಲ್ಲ ಕಾರ್ಮಿಕರು ತಾಪಂ ಕಚೇರಿಯಲ್ಲಿರುವ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರ ಕೊಠಡಿಗೆ ತೆರಳಿದರು. ಅಲ್ಲಿ ಕಾರ್ಮಿಕ ಇಲಾಖೆ ನೌಕರರು ಹಾಗೂ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದವು. ಸರ್ಕಾರ ಅರ್ಹರಿಗೆ ಸೌಲಭ್ಯ ಕೊಡಲು ಅನುವು ಮಾಡಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಏಜೆಂಟರ ಮಧ್ಯಪ್ರವೇಶದಿಂದಾಗಿ ಕಾರ್ಮಿಕರ ಸೌಲಭ್ಯಗಳು ಅನ್ಯರ ಪಾಲಾಗುತ್ತಿವೆ ಎಂದು ಆಪಾದಿಸಿದರು. ತಾಲೂಕಿನಲ್ಲಿ 4500 ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ದಾಖಲಾಗಿದ್ದಾರೆ. ಆದರೆ ಕಿಟ್‌ಗಾಗಿ ಅರ್ಜಿ ಸಲ್ಲಿಸಲು ಸೂಚಿಸಿದ ಸಂದರ್ಭದಲ್ಲಿ ಮೆಶಿನ್ ಕಿಟ್‌ಗಾಗಿ 215, ವೆಲ್ಡಿಂಗ್ ಕಿಟ್‌ಗಾಗಿ 30, ಎಲೆಕ್ಟ್ರಿಕಲ್ ಕಿಟ್‌ಗಾಗಿ 40, ಟೈಲ್ಸ್‌ ಕಿಟ್‌ಗಾಗಿ 30, ರೋಡ್ ಕಿಟ್‌ಗಾಗಿ 56 ಜನ ಮಾತ್ರ ಬೇಡಿಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ತಾಲೂಕಿಗೆ 254 ಮೆಶಿನ್ ಕಿಟ್, 55 ವೆಲ್ಡಿಂಗ್ ಕಿಟ್, 45 ಎಲೆಕ್ಟ್ರಿಕಲ್ ಕಿಟ್, 120 ಟೈಲ್ಸ್ ಕಿಟ್, 150 ಕೋಡ್ ಕಿಟ್‌ಗಳು ಸರ್ಕಾರದಿಂದ ಬಂದಿವೆ. ಅರ್ಜಿ ಸಲ್ಲಿಸಿದ ಸದಸ್ಯರಿಗಿಂತಲೂ ಹೆಚ್ಚು ಕಿಟ್‌ಗಳು ತಾಲೂಕಿಗೆ ಸರಬರಾಜು ಆಗಿವೆ.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ತರುಣಮ್ ಅವರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಮಾತನಾಡಿದ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಈಗ ಕಿಟ್‌ಗಳ ವಿತರಣೆ ನಿಲ್ಲಿಸಬೇಕು. ಜು. 25ರ ನಂತರ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಖುದ್ದಾಗಿ ಹಾನಗಲ್ಲಿಗೆ ಆಗಮಿಸಿ, ಸಮಸ್ಯೆಗಳ ಬಗೆಗೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಅಲ್ಲಿಯವರೆಗೆ ಕಿಟ್ ವಿತರಣೆ ಬೇಡ ಎಂದರು.ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ತಾಲೂಕು ಗ್ಯಾರಂಟಿ ಸಮಿತಿಯ ಇರ್ಫಾನ್ ಮಿಠಾಯಿಗಾರ, ಲಿಂಗರಾಜ ಮಡಿವಾಳರ, ರಾಜು ಗಾಡಿಗೇರ, ಪುರಸಭೆ ನಾಮನಿರ್ದೇಶಿತ ಸದಸ್ಯ ಮೇಕಾಜಿ ಕಲಾಲ, ಕಾರ್ಮಿಕ ಮುಖಂಡರಾದ ಮಂಜುನಾಥ ಕೂಸನೂರ, ಗೌಸ ಅಕ್ಕಿವಳ್ಳಿ, ಮಾಲತೇಶ ಅಪ್ಪಣ್ಣವನರ, ನರೇಂದ್ರ ಚಿಕ್ಕಣ್ಣನವರ, ಉಡಚಪ್ಪ ಮಾಸಣಗಿ, ರವಿ ಕಬ್ಬೂರ, ಕಾರ್ಮಿಕ ಇಲಾಖೆ ಬ್ಯಾಡಗಿ ವೃತ್ತದ ಡಾಟಾ ಎಂಟ್ರಿ ಅಪರೇಟರ್ ಲಲಿತಾ ಗಾಂಜಿ, ಹಾನಗಲ್ಲ ಕಾರ್ಮಿಕ ಇಲಾಖೆಯ ಡಾಟಾ ಎಂಟ್ರಿ ಅಪರೇಟರ್ ಮಂಜು ಬಾರ್ಕಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ