ಬೀರೂರು ಎನ್. ಗಿರೀಶ್
ಕನ್ನಡಪ್ರಭ ವಾರ್ತೆ ಕಡೂರುರಾಜ್ಯ ಸರ್ಕಾರ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರ ವೃತ್ತಿಯನ್ನು ಉತ್ತೇಜಿಸುವ ಜೊತೆಗೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಕಡೂರು ತಾಲೂಕಿನ ಕಾರ್ಮಿಕ ಕಲ್ಯಾಣ ಇಲಾಖೆ ವಿಫಲವಾಗಿದೆ ಎಂದು ಕಾರ್ಮಿಕರು ಇಲಾಖೆ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ಈ ಇಲಾಖೆ ಎಲ್ಲಾ ಸಾರ್ವಜನಿಕರು ಮತ್ತು ಕಾರ್ಮಿಕರ ನೆರವಿಗೆ ಸಿಗುವಂತೆ ಕಡೂರು ಕೋರ್ಟ್ ರಸ್ತೆಯ ಪಶುಪಾಲನಾ ಇಲಾಖೆ ಕಟ್ಟಡದ ಹೃದಯ ಭಾಗದಲ್ಲಿತ್ತು. ಆದರೆ ಅಧಿಕಾರಿಗಳು ಇಲ್ಲಿನ ಹಳೆಯ ಕಟ್ಟಡ ಖಾಲಿ ಮಾಡುವಂತೆ ಸೂಚಿಸಿದಾಗ ಇದನ್ನು ಯುಬಿ ರಸ್ತೆಯ ಕೆನರಾ ಬ್ಯಾಂಕ್ ಹಿಂಭಾಗದ ಸೋಮೇಶ್ವರ ನಗರದ ಬಾಡಿಗೆ ಮನೆಯ ಮೊದಲ ಅಂತಸ್ತಿನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.ಇಂತಹ ಕಚೇರಿಗಳು ಜನರ ಸಮೀಪ ವಿರಬೇಕು. ಕಾರ್ಮಿಕರಿಗೆ ಸರ್ಕಾರ ನೀಡುವ ಸೌಲಭ್ಯದ ಮಾಹಿತಿ ದೊರಯಬೇಕು. ಆದರೆ ಎಲ್ಲೋ ಮೂಲೆ ಮತ್ತು ಕೊಂಪೆಯಲ್ಲಿ ಕಚೇರಿ ಮಾಡಿದರೆ ಯಾರಿಗೆ ಕಚೇರಿ ಇದೆ ಎಂದು ತಿಳಿಯುತ್ತದೆ ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಡೂರು ತಾಲೂಕಿನಲ್ಲಿ ಈ ಹಿಂದೆ ಸುಮಾರು 37ಸಾವಿರ ಕಾರ್ಮಿಕರು ನೋಂದಣಿಯಾಗಿದ್ದರು. ಅದರಲ್ಲಿ ಬೋಗಸ್ ಕಾರ್ಡ ಮತ್ತಿತರನ್ನು ತಡೆಹಿಡಿದು, ಅರ್ಹರನ್ನು ಗುರುತಿಸಿದ ನಂತರ 21,200 ಕಾರ್ಮಿಕರ ಕಾರ್ಡ ಸದ್ಯ ಚಾಲ್ತಿಯಲ್ಲಿವೆ.ಕರ್ನಾಟಕ ಬ್ಲೂ ಆರ್ಮಿ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್ ಮಾತನಾಡಿ, ಇಲಾಖೆ ಅಧಿಕಾರಿಗಳು ಸರ್ಕಾರದ ಅಧಿಸೂಚನೆಯಂತೆ ಸ್ಥಳ ಪರಿಶೀಲನೆ ನಡೆಸಿ ಅವರಿಗೆ ಕಾರ್ಮಿಕ ಕಾರ್ಡ್ ನೋಂದಾಯಿಸಬೇಕು. ಆದರೆ ಇಲ್ಲಿನ ಅಧಿಕಾರಿಗಳು ಸಿಬ್ಬಂದಿ ಕೊರತೆ ನೆಪವೊಡ್ಡಿ ಅರ್ಜಿದಾರರ ಕಾರ್ಮಿಕರ ಸಾಕ್ಷಿ ದಾರರಿಗೆ ದೂರವಾಣಿ ಮಾಡಿ ಅವರು ಕೆಲಸ ಮಾಡುತ್ತಿಲ್ಲವೆಂಬ ನೆಪವೊಡ್ಡಿ ಅವರನ್ನು ರಿಜೆಕ್ಟ್ ಮಾಡುವುದು ಎಷ್ಟು ಸರಿ. ಇದು ಅಧಿಕಾರಿಗಳ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ. ಇಂತವರ ವಿರುದ್ಧ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲ ವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.ಕಟ್ಟಡ ಕಾರ್ಮಿಕರ ನಿರ್ಮಾಣ ಸಂಘದ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ನಮ್ಮಲ್ಲಿ ದಿನಗೂಲಿ ನಡೆಸುವ ಅನೇಕ ಕಾರ್ಮಿಕರು ಅರ್ಜಿ ಸಲ್ಲಿಸುತ್ತಿದ್ದಾರೆ. ಅವರೆಲ್ಲ ನಿಜವಾದ ಫಲಾನುಭವಿಗಳು, ಇತ್ತೀಚೆಗೆ ಇಲಾಖೆ ಹೊಸದಾಗಿ ಬಂದಿರುವ ಡಾಟಾ ಎಂಟ್ರಿ ಆಪರೇಟರ್ ನಿರ್ಲಕ್ಷ್ಯದಿಂದ ಎಲ್ಲವನ್ನು ರಿಜೆಕ್ಟ್ ಮಾಡಿ ಅವರ ಬಾಳನ್ನೆ ಹಾಳು ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದ ಇವರನ್ನು ಮೊದಲು ಬದಲಾಯಿಸಿ ಕಾರ್ಮಿಕರು ನಿಟ್ಟುಸಿರು ಬಿಡುತ್ತಾರೆ ಎಂದರು.
ಒಟ್ಟಾರೆ ಬಡವರು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆ ರೂಪಿಸುತ್ತದೆ. ಈ ಸಮಸ್ಯೆಯನ್ನು ಶಾಸಕ ಆನಂದ್ ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕ ಸ್ಥಳಕ್ಕೆ ಈ ಕಚೇರಿಯನ್ನು ಸ್ಥಳಾಂತರಿ, ಕಾರ್ಮಿಕ ವರ್ಗಕ್ಕೆ ಅನುಕೂಲ ಮಾಡಿಕೊಡುವರಾ ಎಂದು ಕಾದು ನೋಡಬೇಕಿದೆ.ಇಲಾಖೆ ಅಧಿಸೂಚನೆಯಂತೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದು, ನಮಗೆ ಸಿಬ್ಬಂದಿ ಕೊರತೆ ಇದೆ. ಕಾರ್ಮಿಕರಿಗೆ ಗಾರೆ ಮತ್ತು ಎಲೆಕ್ಟ್ರೀಷಿಯನ್ ಗೆ ಸರ್ಕಾರ 100 ಮತ್ತು 700 ಕಿಟ್ ಗಳನ್ನು ನೀಡಿದ್ದು, ಶಾಸಕರ ಅನುಮೋದನೆ ಪಡೆದು ಸದ್ಯದಲ್ಲಿಯೇ ವಿತರಿಸಲಾಗುವುದು. ನೋಂದಣಿಯಾದ ಕಾರ್ಮಿಕರಿಗೆ ಶೈಕ್ಷಣಿಕ, ಮದುವೆ ಸಹಾಯಧನ, ಹೆರಿಗೆ ಇನ್ನಿತರ ಪ್ರಮುಖ ಸೌಲಭ್ಯಗಳನ್ನು ನೀಡಲಾಗುತ್ತಿದೆ.
- ಮಹಾದೇವಪ್ಪ, ನಿರೀಕ್ಷಕ, ಕಡೂರು ತಾಲೂಕು ಕಾರ್ಮಿಕ ಇಲಾಖೆ