ಕನ್ನಡಪ್ರಭ ವಾರ್ತೆ ಹೊಸಕೋಟೆ
ದುಬಾರಿ ಪ್ರದರ್ಶನ ವೆಚ್ಚ ಹಾಗೂ ಪ್ರೇಕ್ಷಕರ ಕೊರತೆಯಿಂದ ನಾಟಕ ಕಲೆ ನಶಿಸುತ್ತಿದೆ ಎಂದು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ನಟರಾಜ್ ತಿಳಿಸಿದರು.ತಾಲೂಕಿನ ಕಸಬಾ ಹೋಬಳಿಯ ಹಲಸಹಳ್ಳಿ ಗ್ರಾಮದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಾಜ ಸತ್ಯವ್ರತ ನಾಟಕ ಮತ್ತು ಹಿರಿಯ ಹರಿಕಥಾ ವಿದ್ವಾನ್ ಹಾಗೂ ನಾಟಕ ನಿರ್ದೇಶಕ ತವಟಹಳ್ಳಿ ಮುನಿರಾಜು ಭಾಗವತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಸಂಸ್ಕೃತಿ, ಆಚಾರ-ವಿಚಾರ, ಸಂಸ್ಕಾರ ಅಡಗಿರುವ ರಂಗಭೂಮಿ ಕಲೆ ಇತ್ತೀಚಿನ ಟಿವಿ ಧಾರಾವಾಹಿ, ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳ ಮನರಂಜನಾ ಕಾರ್ಯಕ್ರಮಗಳಿಂದ ನಶಿಸುತ್ತಿದೆ. ಆದರೂ ಕೂಡ ಕಷ್ಟಪಟ್ಟು ಕಲಾವಿದರು ಪ್ರದರ್ಶನ ಏರ್ಪಡಿಸಿದರೆ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಬರುತ್ತಿದ್ದು ಕಲಾವಿದರಿಗೆ ಪ್ರದರ್ಶನ ನೀಡಲು ಬೇಸರವಾಗುತಿದೆ. ನಾಟಕಗಳ ಸಂಖ್ಯೆಯೂ ದಿನೆದಿನೇ ಕಡಿಮೆಯಾಗುತ್ತಿದೆ ಎಂದರು.ಹಿರಿಯ ಹರಿಕಥಾ ವಿದ್ವಾನರು ರಂಗನಿರ್ದೇಶಕರೂ ಆದ ತವಟಹಳ್ಳಿ ಮುನಿರಾಜು ಭಾಗವತರು ಮಾತನಾಡಿ, ಕಲಾ ಪ್ರಕಾರಗಳಲ್ಲೆ ಗಂಡುಕಲೆಯೆಂದರೆ ನಾಟಕ. ಸಿನಿಮಾ, ಧಾರಾವಾಹಿಗಳಲ್ಲಿ ಆಕ್ಷನ್ ಕಟ್ ಇರುತ್ತದೆ. ಆದರೆ ನಾಟಕದಲ್ಲಿ ಒಮ್ಮೆ ಪ್ರಾರಂಭಿಸಿದರೆ ಸನ್ನಿವೇಶ ಮುಗಿಯುವವರೆಗೆ ಯಾವುದೇ ಅಡೆತಡೆಯಿರುವುದಿಲ್ಲ. ಜೊತೆಗೆ ಏಕಾಗ್ರತಾ ಶಕ್ತಿ ಹೆಚ್ಚಾಗುವುದಲ್ಲದೆ, ನಾಟಕದಲ್ಲಿ ನವರಸಗಳು ತುಂಬಿ ಜೀವನದ ಪಾಠ ಇದ್ದು ಜಾತಿ, ಮತ, ಧರ್ಮದ ಭೇದವಿಲ್ಲದೆ ಗ್ರಾಮಸ್ಥರೆಲ್ಲರನ್ನು ಒಂದೆಡೆ ಬೆಸೆಯುವ ಶಕ್ತಿ ಈ ನಾಟಕ ಕಲೆಗಿದೆ. ಇದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದರೆ ಸರ್ಕಾರದ ಜೊತೆಗೆ ಸ್ಥಳೀಯರು, ಉದ್ಯಮಿಗಳು, ಸ್ಥಿತಿವಂತರು ಕೈ ಜೋಡಿಸಿ ಆರ್ಥಿಕ ಸಹಕಾರ ನೀಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಾಟಕ ನಿರ್ದೇಶಕರಾದ ಕಡದನಹಳ್ಳಿ ಆಂಜನಪ್ಪ, ಕುರುಬರಹಳ್ಳಿ ಮುನಿಹುಲ್ಲೂರಪ್ಪ, ಯಜಮಾನ್ ಹಾಲು ಕೃಷ್ಣಪ್ಪ, ಊರಬಾಗಿಲು ಕೃಷ್ಣಪ್ಪ, ಮುನಿರಾಮಯ್ಯ ಬೆಮಲ್ ಶ್ರೀನಿವಾಸಯ್ಯ, ಗ್ರಾಪಂ ಸದಸ್ಯರಾದ ಚಿಕ್ಕನಾರಾಯಣಸ್ವಾಮಿ, ಚಂದ್ರಶೇಖರ, ಅಂಗಡಿ ಮಂಜುನಾಥ್, ಬಾಲಾಜಿ ಸೀನರಿ ಚಂದ್ರು ಇತರರಿದ್ದರು.