ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಕ್ಕಳ ದಾಖಲಾತಿ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಒಂದೊಂದಾಗಿ ಮುಚ್ಚುವ ಹಂತಕ್ಕೆ ಬಂದು ನಿಂತಿವೆ. ಕಳೆದ ಒಂದೂವರೆ ದಶಕದಿಂದ ತಾಲೂಕಿನಲ್ಲಿ ಒಟ್ಟಾರೆ 47 ಸರ್ಕಾರಿ ಶಾಲೆಗಳು ಬಂದ್ ಆಗಿವೆ.ಸರ್ಕಾರ, ಶಿಕ್ಷಣ ಇಲಾಖೆಯ ವೈಫಲ್ಯ, ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿನ ನಿರ್ಲಕ್ಷ್ಯದಿಂದಾಗಿ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಆತಂಕಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ.
ಸ್ವಾತಂತ್ರ್ಯದ ನಂತರ ತಾಲೂಕಿನಲ್ಲಿ ಒಟ್ಟು 349 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿದ್ದವು. ಸಾವಿರಾರು ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಆದರೆ, 47 ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚಿದ್ದು, ಪ್ರಸ್ತುತ 172 ಸರ್ಕಾರಿ ಕಿರಿಯ ಮತ್ತು 130 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಸೇರಿ ಒಟ್ಟು 302 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.1 ರಿಂದ 7ನೇ ತರಗತಿಯವರೆಗೆ ಒಟ್ಟು 22881 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. 302 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 49 ಏಕೋಪಾಧ್ಯಾಯ ಶಾಲೆಗಳಾಗಿವೆ. 38 ಶಾಲೆಗಳಲ್ಲಿ 5ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸರ್ಕಾರಿ ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ.
ಈ ಹಿಂದೆ 39 ಶಾಲೆಗಳು ಮುಚ್ಚಿದ್ದವು. ಪ್ರಸಕ್ತ ಸಾಲಿನಲ್ಲಿ ಬೆಟ್ಟದ ಹೊಸೂರು, ಅಟ್ಟುಪ್ಪೆ, ಚೀಕನಹಳ್ಳಿ ಕೊಪ್ಪಲು, ಜಕ್ಕನಹಳ್ಳಿ, ದೊಡ್ಡ ಸೋಮನಹಳ್ಳಿ, ಕಟ್ಟಹಳ್ಳಿ, ವಡಕಹಳ್ಳಿ ಮತ್ತು ಮತ್ತಘಟ್ಟ ಸೇರಿ 8 ಶಾಲೆಗಳು ಮುಚ್ಚಿವೆ. ಮಕ್ಕಳ ಕೊರತೆಯಿಂದ ಮುಚ್ಚಿರುವ ಸರ್ಕಾರಿ ಶಾಲೆಗಳ ನಿರ್ವಹಣೆ ಹಾಗೂ ಆಸ್ತಿ ರಕ್ಷಣೆ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ನಿರ್ವಹಿಸುತ್ತಿಲ್ಲ. ಇದರಿಂದ ಶಾಲೆಗಳ ಜಾಗ ಅತಿಕ್ರಮಣವಾಗಿ ಜೂಜು ಅಡ್ಡೆ ಮತ್ತು ಕುಡುಕರ ಕೇಂದ್ರಗಳಾಗುತ್ತಿವೆ. ಕೆಲವೆಡೆ ಗುಜರಿ ಮತ್ತು ದನಕರುಗಳನ್ನು ಕಟ್ಟುವ ತಾಣಗಳಾಗುತ್ತಿವೆ.ಸರ್ಕಾರ ತನ್ನ ಶೈಕ್ಷಣಿಕ ಜವಾಬ್ದಾರಿಯಿಂದ ನುಣಚಿಕೊಳ್ಳಲು ಪ್ರತಿ ವರ್ಷ ಹೆಚ್ಚು ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡುತ್ತಿದೆ. ಒಂದೆಡೆ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ನಂಬಿಕೆ ಕಳೆದುಕೊಳ್ಳುತ್ತಿರುವುದು ಮಕ್ಕಳ ದಾಖಲಾತಿ ಕೊರತೆಗೆ ಬಹುಮುಖ್ಯ ಕಾರಣ ಎನ್ನಲಾಗಿದೆ. ಎಲ್ ಕೆಜಿ ಹಂತದಿಂದಲೇ ಇಂಗ್ಲಿಷ್ ಮಾಧ್ಯಮದ ಕಲಿಕೆ ಆರಂಭಿಸಿ ಮಕ್ಕಳ ಪೋಷಕರನ್ನು ತಮ್ಮತ್ತ ಆಕರ್ಷಿಸುತ್ತಿವೆ. ಜೊತೆಗೆ ಸರ್ಕಾರದ ವಸತಿ ಶಾಲೆಗಳ ಹೆಚ್ಚಳವೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಪೋಷಕರ ಆಂಗ್ಲ ಭಾಷಾ ವ್ಯಾಮೋಹವನ್ನು ಅರಿತುಕೊಂಡಿರುವ ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಾಥಮಿಕ ಹಂತದಿಂದಲೇ ಆಂಗ್ಲ ಭಾಷಾ ಮಾಧ್ಯಮದ ಶಾಲೆಗಳನ್ನು ಉತ್ತೇಜಿಸುತ್ತಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷಾ ಮಾಧ್ಯಮದಲ್ಲಿ ಬೋಧಿಸುವ ಸಾಮರ್ಥ್ಯವುಳ್ಳ ಶಿಕ್ಷಕರ ಕೊರತೆಯಿದೆ.ಬಿಸಿಯೂಟ ಯೋಜನೆ ಮತ್ತಿತರ ಸರ್ಕಾರಿ ಕೆಲಸಗಳಿಗೆ ಶಿಕ್ಷಕರ ಬಳಕೆಯೂ ಸರ್ಕಾರಿ ಶಾಲೆಗಳ ಬೋಧನಾ ಕಾರ್ಯಗಳಿಗೆ ಅಡ್ಡಿಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಶಿಕ್ಷಕರು ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿಲ್ಲ. ರಾಜ್ಯ ಸರ್ಕಾರಿ ನೌಕರರ ಸಂಘ ಅಸ್ತಿತ್ವದಲ್ಲಿದೆ. ಶಿಕ್ಷಕರು ಸಂಘಟನೆ ಕಾರ್ಯ ಚಟುವಟಿಕೆಗಳಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ಬೋಧನಾ ಸಾಮರ್ಥ್ಯ ಉನ್ನತ್ತೀಕರಣಕ್ಕೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಶಾಲಾಭಿವೃದ್ಧಿ ಸಮಿತಿಗಳಿದ್ದರೂ ಅವು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರಿದ್ದರೂ ಮಕ್ಕಳ ಕಲಿಕಾ ಪ್ರಗತಿಯಲ್ಲಿ ವಿಫಲವಾಗಿದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಇದರಿಂದ ಶಾಲೆಗಳು ವರ್ಷದಿಂದ ವರ್ಷಕ್ಕೆ ಮುಚ್ಚು ಹಂತಕ್ಕೆ ಬರುತ್ತಿವೆ. ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ಖಾಸಗೀಕರಣವಾಗಿ ಭವಿಷ್ಯದಲ್ಲಿ ಬಡವರು, ಮಧ್ಯಮ ವರ್ಗದ ಜನರಿಗೆ ಶಿಕ್ಷಣ ಗಗನ ಕುಸುಮವಾಗಲಿದೆ.ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ಸರ್ಕಾರ ಮತ್ತು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಮಕ್ಕಳ ಮನೆ ಆರಂಭಿಸಿ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಒತ್ತು ನೀಡುತ್ತಿದ್ದು, ತಾಲೂಕಿನಲ್ಲಿ 17 ಸರ್ಕಾರಿ ಮಕ್ಕಳ ಮನೆಗೆ ದಾಖಲಾತಿ ಸಂಖ್ಯೆ ಉತ್ತಮವಾಗಿದೆ. ಶಾಲೆಗಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಮಕ್ಕಳ ಸಂಖ್ಯೆ ಕೊರತೆಯಿಂದ ಕೆಲ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.-ವೈ.ಕೆ.ತಿಮ್ಮೇಗೌಡ, ಬಿಇಒಸರ್ಕಾರಿ ಶಾಲೆ ಮುಚ್ಚುವುದನ್ನು ತಡೆಯಲು ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ಸೇರಿಸಿ ಗ್ರಾಮ ಪಂಚಾಯ್ತಿಗೆ ಒಂದು ಶಾಲೆ ಸ್ಥಾಪಿಸಬೇಕು. ಶಾಲೆಗಳಿಗೆ ಮಕ್ಕಳು ಹೋಗಲು ವಾಹನ ವ್ಯವಸ್ಥೆ ಮಾಡಬೇಕು. ಶಾಲಾ ಶಿಕ್ಷಕ ಸಂಘಟನೆಗಳನ್ನು ವಿಸರ್ಜಿಸಿ ಅಥವಾ ಶಿಕ್ಷಕರಿಗೆ ಅಂತರ್ ಜಿಲ್ಲಾ ವರ್ಗಾವಣೆ ನೀತಿ ಜಾರಿಗೆ ತರಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡದೆ ಕದ್ದಾಡುವ ಶಿಕ್ಷಕರಿಗೆ ಪಾಠವಾಗಬೇಕು.
-ಕಾರಿಗನಹಳ್ಳಿ ಪುಟ್ಟೇಗೌಡ, ಅಧ್ಯಕ್ಷರು, ತಾಲೂಕು ರೈತಸಂಘ