ಗದಗ: ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ನೈತಿಕ ಮೌಲ್ಯಗಳು ಅತೀ ಅವಶ್ಯ, ಸಂಸ್ಕಾರವಂತ ಯವಕ, ಯುವತಿಯರ ಕೊರತೆ ನಮ್ಮ ಸಮಾಜವನ್ನು ಬಹುವಾಗಿ ಕಾಡುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬ ಪಾಲಕರು, ಶಿಕ್ಷಕರು ಮಕ್ಕಳಿಗೆ ಪಠ್ಯಗಳ ಬೋಧನೆ ಜತೆಗೆ ನೈತಿಕ ಶಿಕ್ಷಣವನ್ನು ಬೋಧಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಅವರು ಶನಿವಾರ ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಕರ್ನಾಟಕ ಪತ್ರಾಗಾರ ಇಲಾಖೆ, ಪ್ರಾದೇಶಿಕ ಪತ್ರಾಗಾರ ಇಲಾಖೆ ಧಾರವಾಡ ಹಾಗೂ ಹುಲಕೋಟಿ ಕೆ.ಎಚ್. ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಹುಲಕೋಟಿಯ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಏಕೀಕರಣ ಚಳವಳಿ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ. ಅದರಲ್ಲಿ ಗದಗ ಜಿಲ್ಲೆಯ ಪಾತ್ರ ಬಹು ಪ್ರಮುಖವಾಗಿದೆ. ಪತ್ರಾಗಾರ ಇಲಾಖೆಯು ಮಹತ್ವದ ದಾಖಲೆಗಳನ್ನು ಪ್ರದರ್ಶನಕ್ಕೆ ಇಟ್ಟಿದೆ. ವಿದ್ಯಾರ್ಥಿಗಳು ದಾಖಲೆಗಳ ಬಗ್ಗೆ ಅರಿತುಕೊಂಡು ಜ್ಞಾನ ಬೆಳೆಸಿಕೊಳ್ಳುವುದರ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸನ್ನದ್ಧರಾಗಬೇಕು ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ವೈಚಾರಿಕತೆಯಲ್ಲಿ ಭಿನ್ನಾಭಿಪ್ರಾಯ ಇರಲಿ. ವೈಚಾರಿಕತೆಯನ್ನು ವೈಯಕ್ತಿಕ ದ್ವೇಷಕ್ಕಾಗಿ ಸಾಧಿಸಬಾರದು. ಗುರಿ ಸಾಧನೆಗಾಗಿ ಯಾರನ್ನೂ ವೈಯಕ್ತಿಕವಾಗಿ ದ್ವೇಷಿಸಬಾರದು. ಬೇರೊಬ್ಬರಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ವಿದ್ಯಾರ್ಥಿಗಳು ನಿಸ್ವಾರ್ಥ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಪಠ್ಯ ಪುಸ್ತಕಗಳ ಬೋಧನೆಯಿಂದ ಉದ್ಯೋಗ ದೊರಕಬಹುದು ಆದರೆ ಇಂದಿನ ವಿಧ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ ಎಂದ ಅವರು, ಕರ್ನಾಟಕ ಏಕೀಕರಣದಲ್ಲಿ ಗದುಗಿನ ಪಾತ್ರ ಮಹತ್ವದಾಗಿದೆ. ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ್ದ ಗದುಗಿನ ಮಹನೀಯರ ದಾಖಲೆಗಳನ್ನು ಜಾಲತಾಣಗಳಲ್ಲಿ ದಾಖಲೀಕರಿಸಿ ಕರ್ನಾಟಕ ಏಕೀಕರಣದ ಇತಿಹಾಸವನ್ನು ಸಮಾಜಕ್ಕೆ ಹೇಳುವ ಕಾರ್ಯವಾಗಬೇಕು ಎಂದು ಅಭಿಪ್ರಾಯ ಪಟ್ಟರು.ಪತ್ರಾಗಾರ ಇಲಾಖೆ ನಿರ್ದೇಶಕ ಗವಿಸಿದ್ದಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಗಣ್ಯ ವ್ಯಕ್ತಿ, ಮಠ ಮಾನ್ಯಗಳಲ್ಲಿ ಹಾಗೂ ರಾಜ್ಯದ ಇತರೆ ಭಾಗದಲ್ಲಿ ಸಿಗುವ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿ, ಸಂರಕ್ಷಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಮೈಸೂರು ಪ್ರಾಂತ, ಮುಂಬೈ ಪ್ರಾಂತ, ಹೈದ್ರಾಬಾದ್ ಪ್ರಾಂತ್ಯಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ. 1.40 ಲಕ್ಷಕ್ಕೂ ಅಧಿಕ ದಾಖಲೆಗಳನ್ನು ರಾಜ್ಯ ಪತ್ರಗಾರ ಇಲಾಖೆ ಸಂರಕ್ಷಿಸುತ್ತಿದೆ ಎಂದು ತಮ್ಮ ಇಲಾಖೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಡಿಡಿಪಿಐ ಎಂ.ಎ. ರಡ್ಡೇರ, ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ, ಜೆ.ಕೆ. ಜಮಾದಾರ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ಶಿವಪ್ಪ ಕುರಿ ಸ್ವಾಗತಿಸಿದರು. ಧಾರವಾಡ ಪ್ರಾದೇಶಿಕ ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ವಂದಿಸಿದರು. ಬಾಹುಬಲಿ ಜೈನರ ನಿರೂಪಿಸಿದರು. ಪಂ.ವೆಂಕಟೇಶ ಅಲಕೋಡ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು.