ಎಂ.ಕೆ. ಹರಿಚರಣತಿಲಕ್
ಹೇಮಾವತಿ ನದಿ ನೀರಿನಿಂದ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸುವ ಸದುದ್ದೇಶದಿಂದ ಆರಂಭವಾಗಿದ್ದ ಎರಡು ಪ್ರಮುಖ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಅನುದಾನ ಕೊರತೆಯಿಂದ ಸ್ಥಗಿತಗೊಂಡಿದ್ದು, ರೈತ ಸಮುದಾಯ ಸಂಕಷ್ಠಕ್ಕೆ ಸಿಲುಕಿದೆ.
ಪ್ರಸಕ್ತ ಸಾಲಿನಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ತಾಲೂಕಿನಾದ್ಯಂತ ಕೆರೆ-ಕಟ್ಟೆಗಳು ಒಣಗಲಾರಂಭಿಸಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದ ತಾಲೂಕಿನ ಕಟ್ಟಹಳ್ಳಿ ಏತ ನೀರಾವರಿ ಯೋಜನೆ ಹಾಗೂ ಗೂಡೇ ಹೊಸಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗಳು ಸ್ಥಗಿತಗೊಂಡಿರುವುರಿಂದ ಕೆರೆ, ಕಟ್ಟೆಗಳಲ್ಲಿ ನೀರಿಲ್ಲದೇ ರೈತರು ಆತಂಕಕ್ಕೆ ಒಳಗಾಗಿದ್ದಾರೆ.ತಾಲೂಕಿನ ಬೂಕನಕೆರೆ ಗ್ರಾಮದ ಸುಪುತ್ರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕಾರದ ಅವಧಿಯಲ್ಲಿ ಹುಟ್ಟೂರಿನ ಋಣ ತೀರಿಸುವ ಸಂಕಲ್ಪದಿಂದ ತಾಲೂಕಿನ ಬೂಕನಕೆರೆ ಮತ್ತು ಶೀಳನೆರೆ ಹೋಬಳಿಗಳ 89 ಕೆರೆಗಳನ್ನು ಹೇಮೆಯ ನೀರಿನಿಂದ ತುಂಬಿಸಲು ಕಟ್ಟಹಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದರು.
ಈಗಲೂ ನೀರು ತುಂಬಿಸಬಹುದು:
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಅವರ ಅವಧಿಯಲ್ಲಿ ತಾಲೂಕಿನ ಬರಪೀಡಿತ ಸಂತೇಬಾಚಹಳ್ಳಿ ಮತ್ತು ನೆರೆಯ ನಾಗಮಂಗಲ ತಾಲೂಕಿನ ಕೆರೆ ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸಲು ₹212 ಕೋಟಿ ಅಂದಾಜು ವೆಚ್ಚದಲ್ಲಿ ಗೂಡೇ ಹೊಸಹಳ್ಳಿ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಅಗತ್ಯ ಅನುದಾನ ಒದಗಿಸಿದ್ದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೀರಾವರಿ ಯೋಜನೆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಕಟ್ಟಹಳ್ಳಿ ಮತ್ತು ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿವೆ. ತಾಲೂಕಿನ ರೈತರ ಹಿತಾಸಕ್ತಿಗೆ ಪೂರಕವಾಗಿರುವ ಗೂಡೇಹೊಸಹಳ್ಳಿ ಮತ್ತು ಕಟ್ಟಹಳ್ಳಿ ಏತ ನೀರಾವರಿ ಯೋಜನೆ ಸೇರಿದಂತೆ ತಾಲೂಕಿನಲ್ಲಿ ಅರ್ಧಕ್ಕೆ ನಿಂತಿರುವ ಎಲ್ಲ ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಎಚ್.ಟಿ.ಮಂಜು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ತಾಲೂಕಿನ ರೈತರ ಹಿತಾಸಕ್ತಿಗೆ ಪೂರಕವಾಗಿರುವ ಕಟ್ಟಹಳ್ಳಿ ಮತ್ತು ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಲು ಕ್ರಮ ವಹಿಸಬೇಕು. ಕಳೆದ ಎರಡು ದಶಕಗಳಿಂದ ಅರ್ಧಕ್ಕೆ ಸ್ಥಗಿತಗೊಂಡಿರುವ ಹೊಸಹೊಳಲು ಕೆರೆಕೋಡಿ ಕಾಲುವೆ ಕಾಮಗಾರಿಗೂ ಚಾಲನೆ ನೀಡಬೇಕು. ಇಲ್ಲದಿದ್ದರೆ ಶೀಘ್ರದಲ್ಲಿಯೇ ತಾಲೂಕಿನಾದ್ಯಂತ ಕರಪತ್ರ ಹಂಚಿ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಒತ್ತಾಯಿಸಿ ರಾಜ್ಯ ರೈತಸಂಘ ನಡುಬೀದಿ ಹೋರಾಟವನ್ನು ಆರಂಭಿಸಲಿದೆ ಎಂದು ರೈತರು ಎಚ್ಚರಿಸಿದ್ದಾರೆ. ಹೇಮೆ ನೀರಿನಿಂದ ತಾಲೂಕಿನ ಬರಪೀಡಿತ ಪ್ರದೇಶದ ಕೆರೆ-ಕಟ್ಟೆಗಳನ್ನು ತುಂಬಿಸಿ ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು, ಅಂತರ್ಜಲ ವೃದ್ಧಿ, ಪಂಪ್ ಸೆಟ್ ಆಧಾರಿತ ಕೃಷಿಕರಿಗೂ ಅನುಕೂಲವಾಗಲು ಸರ್ಕಾರ ಪಕ್ಷ ರಾಜಕಾರಣ ಬದಿಗೊತ್ತಿ ಕೂಡಲೇ ಏತ ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಇತ್ತೀಚೆಗೆ ಬರ ವೀಕ್ಷಣೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಎನ್.ಚಲುವರಾಯಸ್ವಾಮಿ ಅವರಿಗೆ ರೈತರ ಪರವಾಗಿ ಮನವಿ ಪತ್ರ ಅರ್ಪಿಸಿದ್ದೇನೆ.
- ಎಂ.ವಿ.ರಾಜೇಗೌಡ, ರೈತ ಸಂಘದ ಹಿರಿಯ ಮುಖಂಡರು