ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯ ಕೊರತೆ: ಪೋಷಕರ ಅಹವಾಲು

KannadaprabhaNewsNetwork | Updated : Feb 05 2024, 04:02 PM IST

ಸಾರಾಂಶ

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು ಅಧಿಕಾರಿಗಳು ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರ ಕುಂದು ಕೊರತೆಗಳ ಸಭೆ ನಡೆಯಿತು. ವಸತಿ ಶಾಲೆಯ ಮಕ್ಕಳ ಪೋಷಕರು ಶಾಲೆಯ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

ಕನ್ನಡಪ್ರಭವಾರ್ತೆ ವಿರಾಜಪೇಟೆ

ಬಡ ಮತ್ತು ನಿರ್ಗತಿಕರ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಬೇಕು ಎಂಬುದು ಸರ್ಕಾರದ ಚಿಂತನೆಯಿಂದ ಸಾಕಾರಗೊಂಡ ವಸತಿ ಶಾಲೆ. 

ಆದರೆ ಆಡಳಿತ ವರ್ಗದ ದರ್ಪ, ಮಕ್ಕಳ ಮೇಲೆ ದೌರ್ಜನ್ಯ, ಹಾಗೂ ಶುಚಿತ್ವವಿಲ್ಲದ ಶಾಲಾ ಆವರಣ ಸಮಸ್ಯೆಗಳ ಮುಕ್ತಿಗಾಗಿ ವಸತಿ ಶಾಲೆಯ ಮಕ್ಕಳ ಪೋಷಕರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳ ಮುಂದೆ ಮನವಿ ಸಲ್ಲಿಸಿ ಅಳಲು ತೋಡಿಕೊಂಡರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು ಅಧಿಕಾರಿಗಳು ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರ ಕುಂದು ಕೊರತೆಗಳ ಸಭೆ ನಡೆಸಿದರು. ಈ ಸಂದರ್ಭ ಪೋಷಕರು ದೂರು ದುಮ್ಮಾನಗಳನ್ನು ಸಲ್ಲಿಸಿದರು.

ವಿರಾಜಪೇಟೆ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಮಕ್ಕಳ ಮೇಲೆ ದೌರ್ಜನ್ಯ ಬಗ್ಗೆ ಮಾನವ ಹಕ್ಕುಗಳ ಅಯೋಗದ ಅಧ್ಯಕ್ಷ ನ್ಯಾ. ಎಲ್. ನಾರಾಯಣ ಸ್ವಾಮಿ ಅವರಿಗೆ ಮನವಿ ಮಾಡಲಾಯಿತು. ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಪೋಷಕರೊಂದಿಗೆ ಸಭೆ ನಡೆಸಿ ಅವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯಲಾಯಿತು.

ಕರ್ನಾಟಕ ರಾಜ್ಯ ಮಾನವ ಹಕ್ಕು ಅಯೋಗದ ಅಧ್ಯಕ್ಷರ ಅಪ್ತ ಕಾರ್ಯದರ್ಶಿ ಅರುಣ್ ಪೂಜಾರ್ ಮತ್ತು ಡಿವೈಎಸ್ಪಿ ಸುಧಿರ್ ಹೆಗ್ಡೆ ಹಾಗೂ ಜಿಲ್ಲಾ. ಬಿ.ಸಿ.ಎಂ . ಅಧಿಕಾರಿ ದಿವಾಕರ್, ಉಪ ತಹಸೀಲ್ದಾರ್ ಪ್ರದೀಪ್ ಕುಮಾರ್, ವಿರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿಗಳಾದ ರವೀಂದ್ರ ಸಮ್ಮುಖದಲ್ಲಿ ವಸತಿ ಶಾಲೆಯ ಆವರಣಗಳು, ಅಡುಗೆ ಕೋಣೆ, (ಬಾಲಕ ಮತ್ತು ಬಾಲಕಿಯರ) ವಸತಿ ನಿಲಯಗಳನ್ನು ಪರಿಶೀಲನೆ ಮಾಡಿದರು.

ಬಳಿಕ ವಸತಿ ಶಾಲೆ ಸಭಾಂಗಣದಲ್ಲಿ ಸಭೆ ನಡೆಸಿದರು. ಪೋಷಕರ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭ ಡಿ.ವೈ.ಎಸ್ಪಿ ಸುಧೀರ್ ಹೆಗ್ಡೆ ಅವರು ಪೋಷಕರಾದ ಡೆಲ್ಫೀನಾ ಬೆಂಗಳೂರು ಮತ್ತು ಜಗದೀಶ್ ಅವರಿಂದ ದೂರು ಅರ್ಜಿಗಳನ್ನು ಸ್ವೀಕರಿಸಿದರು. 

ನಂತರ ಇಲಾಖೆಯ ವತಿಯಿಂದ ವಿರಾಜಪೇಟೆ ನಗರ ಠಾಣೆಗೆ ಅರ್ಜಿಯನ್ನು ಸಲ್ಲಿಸಿದರು. ಪೋಷಕರು ತಮ್ಮ ಮಕ್ಕಳಿಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ಶಾಲೆಯ ವ್ಯವಸ್ಥೆ ಸರಿದೂಗಿಸುವಂತೆ ದೂರುಗಳನ್ನು ಸಲ್ಲಿಸಿದರು.ಎಸ್.ಡಿ.ಎಂ.ಸಿ. ಅದ್ಯಕ್ಷ ಪ್ರಮೀತಾ ಕಾರ್ತೀಕ್ ಪೊನ್ನಂಪೇಟೆ ಇದ್ದರು.

Share this article