ಬಸವರಾಜ ಸರೂರ
ನಗರದ ಹುಣಸಿಕಟ್ಟಿ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಎಆರ್‌ಟಿಒ) ಸಮರ್ಪಕ ಸೌಕರ್ಯಗಳ ಕೊರತೆಯಿಂದ ಜನರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷ ನಗರದ ಹೊರವಲಯದ ಹುಣಿಸಿಕಟ್ಟಿ ರಸ್ತೆಯಲ್ಲಿ ಸುಮಾರು 4.32 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಎಆರ್‌ಟಿಒ ಕಚೇರಿಗೆ ತೆರಳುವ ಸಂಪರ್ಕ ರಸ್ತೆ, ನಾಮಫಲಕ ಅಳವಡಿಕೆ, ಬೀದಿದೀಪ, ಸಾರ್ವಜನಿಕ ಸಾರಿಗೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿತ್ತು. ಆದರೆ ಕಚೇರಿ ಆರಂಭಗೊಂಡ ಬಳಿಕವೂ ಈ ಸೌಲಭ್ಯಗಳ ಕೊರತೆ ಮುಂದುವರಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಈ ಕಚೇರಿಯ ವ್ಯಾಪ್ತಿಗೆ ರಾಣಿಬೆನ್ನೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ತಾಲೂಕುಗಳು ಒಳಪಡುತ್ತವೆ. ಕಚೇರಿಗೆ ಪ್ರತಿನಿತ್ಯ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಾಹನ ಮಾಲೀಕರು ಚಾಲನಾ ಪರವಾನಗಿ, ವಾಹನ ನೋಂದಣಿ, ವಾಹನ ಪರಿಶೀಲನೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಕಚೇರಿಗೆ ಹೋಗಿ ಬರುತ್ತಾರೆ. ಇಂತಹ ಕಚೇರಿಯಲ್ಲಿ ಜನರಿಗೆ ಒದಗಿಸುವ ಬೇಕಾದ ಮೂಲಭೂತ ಸೌಕರ್ಯಗಳಿಲ್ಲದೆ ಇರುವುದು ಹೊಸ ಕಚೇರಿಗೆ ಕಪ್ಪುಚುಕ್ಕೆ ಇಟ್ಟಂತೆ ಆಗಿದೆ.
ಮಣ್ಣಿನ ರಸ್ತೆ, ಮಳೆಗಾಲದಲ್ಲಿ ಸಂಕಷ್ಟ: ನಗರದ ಹುಣಸಿಕಟ್ಟಿ ಪ್ರಮುಖ ರಸ್ತೆಯಿಂದ ಹೊಸ ಎಆರ್‌ಟಿಒ ಕಚೇರಿಗೆ ತೆರಳುವ ಸಂಪರ್ಕ ರಸ್ತೆಯ ಯಾವುದೇ ಅಭಿವೃದ್ಧಿ ಮಾಡದೇ ಮಣ್ಣಿನ ರಸ್ತೆಯಿದ್ದು, ಇಲ್ಲಿಯವರಿಗೂ ಅದಕ್ಕೆ ಡಾಂಬರೀಕರಣವಾಗಿಲ್ಲ. ಮಳೆಗಾಲದಲ್ಲಿ ರಸ್ತೆ ಕೆಸರು ಮಯವಾಗುವುದರಿಂದ ಕಚೇರಿ ಕೆಲಸಕ್ಕೆ ತೆರಳುವ ಅನೇಕ ಬೈಕ್ ಸವಾರರು ಬಿದ್ದ ಉದಾಹರಣೆಗಳಿವೆ. ರಸ್ತೆಯಲ್ಲಿ ಯಾವುದೇ ಬೀದಿದೀಪಗಳಿಲ್ಲ, ಈ ರಸ್ತೆಯ ಮೇಲೆ ಎಆರ್‌ಟಿಒ ಕಚೇರಿಗೆ ಬರುವವರು ಅವಲಂಬಿತರಾಗಿದ್ದಾರೆ. ಇದಕ್ಕೆ ಯಾವುದೇ ಸಂಪರ್ಕ ರಸ್ತೆಯಿಲ್ಲದೆ ಇರುವುದು ಸಮಸ್ಯೆ ಉಲ್ಬಣವಾಗಲು ಮತ್ತಷ್ಟು ಕಾರಣವಾಗಿದೆ. ಕೂಡಲೇ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಎಆರ್‌ಟಿಒ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಬೀದಿದೀಪ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ನಗರಸಭೆಗೆ ಈಗಾಗಲೇ ಮನವಿ ಮಾಡಲಾಗಿದೆ. ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಡಿಪೋ ವ್ಯವಸ್ಥಾಪಕರಿಗೂ ತಿಳಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಣಿಬೆನ್ನೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಸುಬ್ರಾಯ ಹೆಗಡೆ ಹೇಳಿದರು.