ಸಂತೋಷ ದೈವಜ್ಞ
ಕಾಲಕಾಲಕ್ಕೆ ಹೂಳೆತ್ತುವುದಾಗಲಿ, ಗೇಟ್ ದುರಸ್ತಿ ಮುಂತಾದ ಅಗತ್ಯ ನಿರ್ವಹಣಾ ಕ್ರಮ ಕೈಗೊಳ್ಳುವುದಾಗಲಿ ನಡೆಯದೇ ಇಲ್ಲಿಯ ಬಹುತೇಕ ಜಲಾಶಯಗಳು ಅಧೋಗತಿಯತ್ತ ತಲುಪಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ರೋಸಿಹೋಗಿರುವ ರೈತರು ಸಾರ್ವಜನಿಕರು ಆಡಳಿತದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜಲಾಶಯ ಹಾಗೂ ಕೆರೆಗಳನ್ನು ಹೊಂದಿದ ಹೆಗ್ಗಳಿಕೆ ಮುಂಡಗೋಡ ತಾಲೂಕಿನದ್ದಾಗಿದೆ. ತಾಲೂಕಿನ ಧರ್ಮಾ ಜಲಾಶಯ ಹಾಗೂ ಬಾಚಣಕಿ ಜಲಾಶಯ ಹೊರತುಪಡಿಸಿ ಇನ್ನುಳಿದ ಯಾವೊಂದು ಜಲಾಶಯಗಳು ಸುಭದ್ರವಾಗಿಲ್ಲ. ಒಡ್ಡಿನಲ್ಲಿ ಆಗಾಗ ಡೊಂಬು ಕಾಣಿಸಿಕೊಳ್ಳುವುದು ಗೇಟ್‌ಗಳಿಂದ ನೀರು ಪೋಲಾಗುವುದು ಇಲ್ಲಿ ಸಾಮಾನ್ಯ. ಚಿಗಳ್ಳಿ ಜಲಾಶಯ ಎರಡು ಬಾರಿ ಒಡ್ಡು ಕುಸಿದು ಆಸ್ತಿ ಪಾಸ್ತಿ ಹಾನಿ ಸಂಬವಿಸಿದ ಆ ಕರಾಳ ದಿನವನ್ನು ಇಂದಿಗೂ ಮರೆಯುವಂತಿಲ್ಲ. ಇದೇ ರೀತಿ ಸನವಳ್ಳಿ, ನ್ಯಾಸರ್ಗಿ, ಸಿಂಗನಳ್ಳಿ, ಅರಶಿಣಗೇರಿ ಸೇರಿದಂತೆ ಬಹುತೇಕ ಜಲಾಶಯಗಳ ಒಡ್ಡು ದುರ್ಬಲಗೊಂಡು ನೀರು ಪೋಲಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡುತ್ತಲೇ ಸಾಗಿದೆ. ಜಲಾಶಯದ ಒಡ್ಡಿನಲ್ಲಿ ಸಮಸ್ಯೆ ಕಾಣಿಸಿಕೊಂಡಾಗಲೆಲ್ಲ ಆ ಕ್ಷಣಕ್ಕೆ ಮಾತ್ರ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ತಾತ್ಕಾಲಿವಾಗಿ ಮಣ್ಣು ಹಾಕಿ ಡೊಂಬು ಮುಚ್ಚುವ ಕೆಲಸ ಮಾಡಿ ಕೈತೊಳೆದುಕೊಳ್ಳುತ್ತಾರೆಯೇ ವಿನಹ ಶಾಶ್ವತ ಪರಿಹಾರ ಕಂಡುಕೊಳ್ಳುವುದಿಲ್ಲ.ಒಡ್ಡು ದುರಸ್ತಿ, ಕಾಲುವೆ, ಗೇಟ್ ಸೇರಿದಂತೆ ಯಾವುದೇ ರೀತಿ ನಿರ್ವಹಣೆ ಇಲ್ಲದೇ ಬಹುತೇಕ ಜಲಾಶಯಗಳು ದುಸ್ಥಿತಿಗೆ ತಲುಪಿವೆ. ತಾಲೂಕಿನಲ್ಲಿ ೬ ಪ್ರಮುಖವಾದ ಜಲಾಶಯಗಳಿದ್ದರೂ ಹಲವು ವರ್ಷಗಳಿಂದ ಯಾವೊಂದು ಜಲಾಶಯಗಳಲ್ಲಿ ಹೂಳು ತೆಗೆಯಲಾಗಿಲ್ಲ. ಇಲಾಖೆಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಹೂಳೆತ್ತುವ ಕೆಲಸ ನಡೆದೇ ಇಲ್ಲ. ಅಲ್ಲದೇ ಮಳೆಗಾಲದಲ್ಲಿ ಅರಣ್ಯ ಪ್ರದೇಶದಿಂದ ಜಲಾಶಯಗಳಿಗೆ ನೀರು ಹರಿದು ಬರುವ ಕೆಲವು ಕಾಲುವೆಗಳು ಕೂಡ ಹೂಳು ತುಂಬಿಕೊಂಡಿರುವುದರಿಂದ ಜಲಾಶಯಗಳಿಗೆ ಸಮರ್ಪಕ ಮಳೆಯ ನೀರು ಹರಿದು ಬರುವುದಿಲ್ಲ. ಇದು ಕೂಡ ತಾಲೂಕಿನ ರೈತ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಮ್ಮನ್ನಾಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಜಲಾಶಯಗಳು ಯಾವುದೇ ರೀತಿ ಅಭಿವೃದ್ಧಿ ಕಾಣದೇ ಇರುವುದು ವಿಪರ್ಯಾಸವೇ ಸರಿ.
ತಾಲೂಕಿನ ಜಲಾಶಯಗಳೆಲ್ಲ ನಿರ್ವಹಣೆ ಇಲ್ಲದೇ ದುರ್ಬಲಾವಸ್ಥೆ ತಲುಪಿವೆ. ಬಹುತೇಕ ಜಲಾಶಯಗಳ ಕಾಲುವೆ ದುರಸ್ತಿಗೊಳಿಸಿ ರೈತರ ಭೂಮಿಗೆ ನೀರು ಹರಿಸುವ ಕೆಲಸ ಕೂಡ ಮಾಡಿಲ್ಲ. ಪ್ರತಿ ವರ್ಷ ಜಲಾಶಯಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಹೆಸರಲ್ಲಿ ಕೋಟ್ಯಂತರ ಹಣ ಖರ್ಚು ಹಾಕಲಾಗುತ್ತದೆಯೇ ವಿನಃ ಯಾವುದೇ ರೀತಿ ಜಲಾಶಯಗಳು ಮಾತ್ರ ಅಭಿವೃದ್ದಿ ಕಂಡಿಲ್ಲ. ಚಿಕ್ಕನೀರಾವರಿ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ಕೆಲಸ ಮಾಡುತ್ತಾರೆ ಎನ್ನುತ್ತಾರೆ ರೈತ ಮುಖಂಡ ಶಿವಾನಂದ ದೊಡ್ಮಮನಿ.