ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣ ಕೊರತೆಯಿಂದ ಸೈದ್ಧಾಂತಿಕ ನೆಲೆ ಮಾಯ-ಕುಲಪತಿ ಭಾಸ್ಕರ

KannadaprabhaNewsNetwork | Published : Sep 11, 2024 1:02 AM

ಸಾರಾಂಶ

ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಹಿರಿಯರ ಆದರ್ಶಪ್ರಾಯ ನಿದರ್ಶನಗಳು ಗೌಣವಾಗುತ್ತಿದ್ದು, ಹಣದ ಆದಾಯವೇ ವಿಜೃಂಭಿಸುತ್ತಿದೆ. ನೈತಿಕ ಶಿಕ್ಷಣ ಕೊರತೆಯಿಂದ ಬದುಕಿನಲ್ಲಿ ಸೈದ್ಧಾಂತಿಕ ನೆಲೆ ಕಳೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಜೀವನ ಗೊಂದಲಮಯ ಮಾಡಿಕೊಂಡಿದ್ದಾರೆ ಎಂದು ಗೋಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ ಕಳವಳ ವ್ಯಕ್ತಪಡಿಸಿದರು.

ಬ್ಯಾಡಗಿ: ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಹಿರಿಯರ ಆದರ್ಶಪ್ರಾಯ ನಿದರ್ಶನಗಳು ಗೌಣವಾಗುತ್ತಿದ್ದು, ಹಣದ ಆದಾಯವೇ ವಿಜೃಂಭಿಸುತ್ತಿದೆ. ನೈತಿಕ ಶಿಕ್ಷಣ ಕೊರತೆಯಿಂದ ಬದುಕಿನಲ್ಲಿ ಸೈದ್ಧಾಂತಿಕ ನೆಲೆ ಕಳೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಜೀವನ ಗೊಂದಲಮಯ ಮಾಡಿಕೊಂಡಿದ್ದಾರೆ ಎಂದು ಗೋಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ ಕಳವಳ ವ್ಯಕ್ತಪಡಿಸಿದರು.

ಗಣೇಶೋತ್ಸವದ ಅಂಗವಾಗಿ ಪಟ್ಟಣದ ಆಂಜನೇಯ ಯುವಕ ಮಂಡಳ ಹಮ್ಮಿಕೊಂಡಿದ್ದ ಜಮೀರ ರಿತ್ತಿ ರಚಿಸಿದ ಕತ್ತಲ ಕಿಚ್ಚು, ಖಾಲಿ ಬಾಟ್ಲಿ ಕವನ ಸಂಕಲನ ಕೃತಿಗಳು ಹಾಗೂ ಕನಕದಾಸರ ಬದುಕು ಕುರಿತು ಮಾಯೆಯೊಳಗಿನ ಮಾಯೆ ನಾಟಕ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಣಕೊಟ್ಟು ಪಡೆಯುವ ಶಿಕ್ಷಣ ನಿಲ್ಲಬೇಕು: ಬುದ್ಧ, ಬಸವ, ಕನಕದಾಸ, ಸರ್ವಜ್ಞ, ಅಂಬೇಡ್ಕರ್ ಅವರ ದೂರದೃಷ್ಟಿ ಮಾತುಗಳು ಪಾಲನೆಯಾಗುತ್ತಿಲ್ಲ. ವೈಜ್ಞಾನಿಕ ತಳಹದಲ್ಲಿ ಸಮಾಜವನ್ನು ಕಟ್ಟಬೇಕಾಗಿದೆ. ಬಡವರಿಗೆ ಉನ್ನತ ಶಿಕ್ಷಣ ದೊರೆಯುತ್ತಿಲ್ಲ ಇಂದಿಗೂ ಉಳ್ಳವರ ಪಾಲಾಗುತ್ತಿದೆ. ಹಣ ಕೊಟ್ಟು ಶಿಕ್ಷಣ ಪಡೆಯುವ ವ್ಯವಸ್ಥೆಗೆ ತಿಲಾಂಜಲಿ ಹೇಳಬೇಕು. ಮಕ್ಕಳ ಆದಾಯ ಕ್ರಮ ಬದ್ಧವಲ್ಲ ಎಂದು ತಿಳಿದಿದ್ದರೂ ಅನ್ಯಮಾರ್ಗದಿಂದ ಗಳಿಸಿದ ಆಸ್ತಿಯಲ್ಲಿ ಪಾಲಕರು ಸಂಭ್ರಮಿಸುತ್ತಿದ್ದಾರೆ. ಹಣ ಮಾಡುವ ಉದ್ದೇಶದಿಂದ ಶಿಕ್ಷಣ ಕೊಡಿಸಿದರೇ ಮುಂದಿನ ಎಲ್ಲ ಘಟನೆಗಳಿಗೆ ಪಾಲಕರೇ ಜವಾಬ್ದಾರರಾಗಬೇಕಾಗುತ್ತದೆ ಎಂದರು.

ಕೋಟಿಗಟ್ಟಲೇ ಹಣ ವ್ಯಯಿಸಿ ವೈದ್ಯನಾದವನು ಹಣ ಮಾಡುವ ಆಸೆಯಿಂದ ಆರೋಗ್ಯವಂತರನ್ನು ಅನಾರೋಗ್ಯವಂತರನ್ನಾಗಿ ಮಾಡುವ ಅನಿವಾರ್ಯತೆ ಎದುರಾಗಿದೆ. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದ್ದು ಸಮಾಜದಲ್ಲಿ ಖಳನಾಯಕರ ಸಂಖ್ಯೆ ಹೆಚ್ಚಾಗುತ್ತಿದೆ. ತಂದೆ ತಾಯಿ ಜೊತೆ ಮಕ್ಕಳು, ಅತ್ತೆಯ ಜೊತೆ ಸೊಸೆ ಇರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಯೋವೃದ್ಧ ಪಾಲಕರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದರು.

ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡರ ಮಾತನಾಡಿ, ಸರ್ಕಾರಗಳ ಸೂಕ್ತ ಪ್ರೋತ್ಸಾಹವಿಲ್ಲದೇ ಕಬಡ್ಡಿ, ಖೋಖೋ, ಕುಸ್ತಿ, ಲಗೋರಿ ಸೇರಿದಂತೆ ಇನ್ನಿತರ ದೇಶೀಯ ಕ್ರೀಡೆಗಳು ನಶಿಸುತ್ತಿದ್ದು ಜಾನಪದ ವಿವಿಯಲ್ಲಿ ದೇಶೀಯ ಕ್ರೀಡೆಗಳ ಸಂಶೋಧನಾ ವಿಭಾಗ ಆರಂಭಿಸುವ ಮೂಲಕ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿದೆ ಎಂದರು.

ಬಹುಮುಖ ಪ್ರತಿಭೆ ಜಮೀರ್: ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಂಕಮ್ಮ ಸಂಕಣ್ಣನವರ ಮಾತನಾಡಿ, ಜಮೀರ ರಿತ್ತಿಯವರಂತಹ ಬಹುಮುಖ ಪ್ರತಿಭೆಗಳನ್ನು ಪಡೆದ ನಮ್ಮ ನೆಲವೇ ಧನ್ಯ ಚಿಕ್ಕ ವಯಸ್ಸಿನಲ್ಲೇ ಬಹುದೊಡ್ಡ ಸಾಧನೆ ತೋರಿದ್ದು ಒಂದು ಬಾರಿಗೆ ಮೂರು ಕೃತಿಗಳನ್ನು ರಚಿಸಿದ್ದಾರೆ, ಇವರ ಸಾಧನೆಯನ್ನು ನೋಡಿದ ಶಿಕ್ಷಣ ಇಲಾಖೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಘೋಷಿಸಿದ್ದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ವೇದಿಕೆಯಲ್ಲಿ ಸಾಹಿತಿ ಸತೀಶ ಕುಲಕರ್ಣಿ, ಸಂಶೋಧಕ ಡಾ.ಜಗನ್ನಾಥ ಗೇನಣ್ಣನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಜಿ. ಬೂದಿಹಾಳ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹದೇವ ಕರೆಣ್ಣನವರ, ಕಲಾವಿದ ಹರೀಶ ಮಾಳಪ್ಪನವರ, ಲೇಖಕ ಜಮೀರ ರಿತ್ತಿ ಸೇರಿದಂತೆ ಇನ್ನಿತರರಿದ್ದರು. ಸಮಿತಿಯ ಅಧ್ಯಕ್ಷ ಶಂಭು ಮಠದ ಸ್ವಾಗತಿಸಿದರು, ಸಾಹಿತಿ ಮಲ್ಲಪ್ಪ ಕರಿಯಣ್ಣನವರ ನಿರೂಪಿಸಿದರು, ರಮೇಶ ಮೋಟೆಬೆನ್ನೂರ ವಂದಿಸಿದರು.

Share this article