ಕಾರಟಗಿ: ತುಂಗಭದ್ರಾ ವಿಷಯವಾಗಿ ರಾಜಕಾರಣಿಗಳು ಇಲ್ಲಿಯವರೆಗೂ ಗಟ್ಟಿಯಾಗಿ ಮಾತನಾಡಿಲ್ಲ. ಆಡಳಿತ ಮತ್ತು ವಿರೋಧ ಪಕ್ಷದ ಜನಪ್ರತಿನಿಧಿಗಳಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ತುಂಗಭದ್ರಾ ಎಡದಂಡೆ ಕಾಲುವೆ ಕೆಲವರಿಗೆ ಕಾಮಧೇನುವಾಗಿದ್ದರೆ, ರೈತರಿಗೆ ಮಾತ್ರ ಇದರಿಂದ ಏನು ಪ್ರಯೋಜನವಾಗಿದೆ ಎಂದು ರೈತ ಹೋರಾಟಗಾರ ಚಾಮರಸ ಪಾಟೀಲ್ ಕಾರವಾಗಿ ಪ್ರಶ್ನಿಸಿದರು.
ನಮ್ಮಲ್ಲಿ ಹೋರಾಟದ ಮನೋಭಾವ ಕಡಿಮೆಯಾಗಿದೆ. ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ತುಂಗಭದ್ರಾ ನೀರಿನ ಸಮರ್ಪಕ ಬಳಕೆ ಕುರಿತು ಗಂಭೀರವಾಗಿ ಧ್ವನಿ ಎತ್ತುತ್ತಿಲ್ಲ. ನೀರಾವರಿ ಸಲಹಾ ಸಮಿತಿ ಕೇವಲ ಕಾಲುವೆ ಮತ್ತು ಅಣೆಕಟ್ಟೆಯ ನೀರಿನ ಲೆಕ್ಕಾಚಾರಕ್ಕೆ ಸೀಮಿತವಾಗಿದೆ. ಸಮನಾಂತರ ಜಲಾಶಯ, ಫ್ಲಡ್ ಫ್ಲೋ ಕೆನಾಲ್ ಹಾಗೂ ವ್ಯರ್ಥವಾಗಿ ಹರಿದುಹೋಗುವ ನೀರಿನ ಬಳಕೆಯ ಯೋಜನೆಗಳ ಕುರಿತು ಸಮಿತಿ ಗಂಭೀರ ಚರ್ಚೆ ನಡೆಸಿಲ್ಲ ಎಂದು ಆರೋಪಿಸಿದರು.
ಮೌಲ್ಯವರ್ಧಿತ ಘಟಕಗಳ ಸ್ಥಾಪನೆ ಅಗತ್ಯ: ಜಿಲ್ಲೆಯಲ್ಲಿ ಭತ್ತ, ತೋಟಗಾರಿಕೆ ಹಾಗೂ ದ್ವಿದಳ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ ಇವುಗಳಿಗೆ ಸೂಕ್ತ ಬೆಲೆ ದೊರೆಯಲು ಅಗತ್ಯವಾದ ಮೌಲ್ಯವರ್ಧನೆ ಮತ್ತು ಸಂಸ್ಕರಣ ಘಟಕಗಳಿಲ್ಲದಿರುವುದು ರೈತರ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಕೃಷಿ ವಿಜ್ಞಾನಿ ಡಾ. ಕೆ.ಆರ್. ಬದರಿಪ್ರಸಾದ ಹೇಳಿದರು.ಜಿಲ್ಲೆಯ ಕೃಷಿಯ ಹೊಸ ಸಾಧ್ಯತೆಗಳ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಸ್ಕರಣ ಘಟಕ ಸ್ಥಾಪನೆಯಾಗಬೇಕು ಎಂದರು.
ಕಾರಟಗಿ ತಾಲೂಕಿನ ಅಭಿವೃದ್ಧಿಯ ಸಾಧ್ಯತೆಗಳ ಕುರಿತು ಲಿಂಗಯ್ಯಸ್ವಾಮಿ ಶೀಲವಂತಮಠ ಪಟ್ಟಿ ಮಾಡಿ ಮಾತನಾಡಿದರು. ಮರಿಯಪ್ಪ ಸಾಲೋಣಿ, ಸಂಗಮೇಶಗೌಡ ಬೂದುಗುಂಪಾ, ಬಸವರಾಜಪ್ಪ ಚೆಳ್ಳೂರು, ಸೋಮಶೇಖರ ಕೋಲ್ಕಾರ್, ರಾಘವೇಂದ್ರ ಕುಲಕರ್ಣಿ, ಮಂಜುನಾಥ ಪುತ್ಕಗೇರಿ, ಮಂಜುನಾಥ ಹೊನಗುಡಿ, ಉಮೇಶ ಹೊಸಮನಿ, ವಿಠ್ಠಲ್ ಪಟೇಲ್ ಸೇರಿದಂತೆ ಇತರರು ಇದ್ದರು. ಹನುಮಂತಪ್ಪ ಚಂದಲಾಪೂರ ಆಶಯ ನುಡಿಗಳನ್ನು ಆಡಿದರು. ಶಿವಕುಮಾರ ಹುಳ್ಕಿಹಾಳಕ್ಯಾಂಪ್, ಮಹೆಬೂಬ್ ಕನಕಗಿರಿ ನಿರ್ವಹಿಸಿದರು.