ಮಿಮ್ಸ್‌ ಜಮೀನು ಒತ್ತುವರಿ ತೆರವಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ: ಆರೋಪ

KannadaprabhaNewsNetwork |  
Published : Nov 10, 2025, 12:30 AM IST
9ಕೆಎಂಎನ್‌ಡಿ-7ಮಂಡ್ಯ ವೈದ್ಯಕೀಯ ಕಾಲೇಜಿನ ಒತ್ತುವರಿ ತೆರವುಗೊಳಿಸಬೇಕೆಂದು ಒತ್ತಾಯಿಸಿ ಚಲನಚಿತ್ರ ನಟ ದಿವಂಗತ ಶಂಕರ್ ನಾಗ್ ಜನ್ಮದಿನದಂದು ಎಸ್‌.ಡಿ.ಜಯರಾಂ ವೃತ್ತದಲ್ಲಿ ಆಟೋ ಚಾಲಕರು ಪೋಸ್ಟರ್ ಅಭಿಯಾನ ನಡೆಸಿದರು. | Kannada Prabha

ಸಾರಾಂಶ

ಮಿರ್ಜಾ ಇಸ್ಮಾಯಿಲ್ ಮತ್ತು ನಾಲ್ವಡಿ ಅವರ ದೂರದೃಷ್ಟಿಯಿಂದ 1941ರಲ್ಲಿ ಜಿಲ್ಲಾ ಆಸ್ಪತ್ರೆಗಾಗಿ ರೈತರಿಂದ 45 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಇದರಲ್ಲಿ ತಮಿಳು ಕಾಲೋನಿ ಸೇರಿದಂತೆ ಪಟ್ಟಭದ್ರರು 19 ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವೈದ್ಯಕೀಯ ಕಾಲೇಜಿಗೆ ಸೇರಿದ 19 ಎಕರೆ ಭೂಮಿಯ ಅತಿಕ್ರಮಣ ತೆರವುಗೊಳಿಸಲು ಜಿಲ್ಲಾ ಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲ ಎಂದು ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯಕೀಯ ಕಾಲೇಜಿನ ಒತ್ತುವರಿ ತೆರವುಗೊಳಿಸಬೇಕೆಂದು ಒತ್ತಾಯಿಸಿ ಚಲನಚಿತ್ರ ನಟ ದಿವಂಗತ ಶಂಕರ್ ನಾಗ್ ಅವರ ಜನ್ಮದಿನದಂದು ನಗರದ ಎಸ್‌.ಡಿ.ಜಯರಾಂ ವೃತ್ತದಲ್ಲಿ ಆಟೋ ಚಾಲಕರು ಆಯೋಜಿಸಿದ್ದ ಪೋಸ್ಟರ್ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಮಿರ್ಜಾ ಇಸ್ಮಾಯಿಲ್ ಮತ್ತು ನಾಲ್ವಡಿ ಅವರ ದೂರದೃಷ್ಟಿಯಿಂದ 1941ರಲ್ಲಿ ಜಿಲ್ಲಾ ಆಸ್ಪತ್ರೆಗಾಗಿ ರೈತರಿಂದ 45 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಇದರಲ್ಲಿ ತಮಿಳು ಕಾಲೋನಿ ಸೇರಿದಂತೆ ಪಟ್ಟಭದ್ರರು 19 ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ. ಸ್ಥಳಾವಕಾಶದ ಕೊರತೆಯಿಂದ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್, ಕ್ರಿಟಿಕಲ್ ಕೇರ್, ತಾಯಿ-ಮಗು ಆಸ್ಪತ್ರೆ ಸೇರಿದಂತೆ ಅನೇಕ ಆರೋಗ್ಯ ಸೇವೆಗಳು ಜಿಲ್ಲೆಯ ಜನರಿಗೆ ಲಭ್ಯವಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ರಾಜಕೀಯ ಇಚ್ಛಾಶಕ್ತಿ ಮತ್ತು ದೃಢಸಂಕಲ್ಪದ ಕೊರತೆಯಿಂದಾಗಿ ಮಂಡ್ಯ ಇಂದಿಗೂ ದೊಡ್ಡ ಗ್ರಾಮವಾಗಿ ಉಳಿದಿದೆ ಎಂದು ಅವರು ವಿಷಾದಿಸಿದರು.

ಕನ್ನಡ ಮತ್ತು ರೈತ ಪರ ಸಂಘಟನೆಗಳ ನಿರಂತರ ಹೋರಾಟದ ಪರಿಣಾಮವಾಗಿ, ಅತಿಕ್ರಮಣಗೊಂಡ ವೈದ್ಯಕೀಯ ಕಾಲೇಜು ಭೂಮಿಯನ್ನು ಉಪಗ್ರಹ ಸಮೀಕ್ಷೆಗಳ ಮೂಲಕ ಗುರುತಿಸಲಾಗಿದೆ. ಆದಾಗ್ಯೂ, ಆಡಳಿತಗಾರರರಿಗೆ ಜಿಲ್ಲೆಯ ಅಭಿವೃದ್ಧಿ ಬಗೆಗಿನ ನಿರ್ಲಕ್ಷದಿಂದ ಒತ್ತುವರಿ ತೆರವು ವಿಳಂಬವಾಗಿದೆ‌. ಓಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿರುವ ರಾಜಕೀಯ ನಾಯಕರು ಹಾಗೂ ಅಧಿಕಾರಿಗಳ ವಿರುದ್ಧ ಕನ್ನಡಿಗರ ಜಾಗೃತಿ ಆಂದೋಲನವನ್ನು ಪೋಸ್ಟರ್ ಅಭಿಯಾನದ ಮೂಲಕ ಮುನ್ನಡೆಸಲಾಗುವುದು. ಇದಕ್ಕಾಗಿ ಜಿಲ್ಲೆಯಲ್ಲಿ ಐದು ಸಾವಿರ ಆಟೋಗಳಿಗೆ ಪೋಸ್ಟರ್ ಅಳವಡಿಸಿ ಕನ್ನಡಿಗರನ್ನು ಜಾಗೃತಿಗೊಳಿಸಲಾಗುವುದು ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಮಾತನಾಡಿ, ಮೆಡಿಕಲ್ ಕಾಲೇಜು ಒತ್ತುವರಿ ತೆರವುಗೊಳಿಸಿ ಅಗತ್ಯ ಆರೋಗ್ಯ ಸೇವೆ ಒದಗಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ರೈತಸಂಘದ ಲಿಂಗಾಪ್ಪಾಜಿ, ಕರುನಾಡ ಸೇವಕರು ಸಂಘಟನೆಯ ಎಸ್.ಕೆ,ರಾಜೂಗೌಡ, ಮನು, ರಕ್ಷಣಾ ವೇದಿಕೆಯ ಆಟೋ ಘಟಕದ ವೆಂಕಟೇಶ್, ಸೋಮಶೇಖರ್, ಮುದ್ದೇಗೌಡ, ಪ್ರವೀಣ್ ಸೇರಿದಂತೆ ಹಲವು ಚಾಲಕರು ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ ಒತ್ತುವರಿ ತೆರವುಗೊಳಿಸುವಂತೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸುವಂತೆ ಆಗ್ರಹವುಳ್ಳ ಪೋಸ್ಟರ್ ಗಳನ್ನು ನೂರಾರು ಆಟೋಗಳಿಗೆ ಅಳವಡಿಸಲಾಯಿತು. ಸಾರ್ವಜನಿಕರು ಸಹ ಸ್ವಯಂಪ್ರೇರಿತವಾಗಿ ಅಭಿಯಾನದಲ್ಲಿ ಭಾಗವಹಿಸಿ ತಮಿಳು ಕಾಲೋನಿ ಸೇರಿದಂತೆ ಮೆಡಿಕಲ್ ಕಾಲೇಜು ಒತ್ತುವರಿ ತೆರವಿಗೆ ಆಗ್ರಹಿಸಿದರು.

PREV

Recommended Stories

ಕುಸಿದ ಮೆಕ್ಕೆಜೋಳ ಬೆಲೆ, ಆರಂಭವಾಗದ ಖರೀದಿ ಕೇಂದ್ರ
2028ಕ್ಕೆ ಪುನಃ ನಮ್ಮದೇ ಸರ್ಕಾರ: ಡಿಸಿಎಂ ಡಿ.ಕೆ. ಶಿವಕುಮಾರ್