ಕೋಣೆ ಕೊರತೆ - ಮರದಡಿ ಮಕ್ಕಳಿಗೆ ಪಾಠ!

KannadaprabhaNewsNetwork |  
Published : Jun 22, 2024, 12:49 AM IST
ಗುಂಡ್ಲೂರು ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಮರದ ಕೆಳಗೆ ಪಾಠ ಬೋಧನೆ. | Kannada Prabha

ಸಾರಾಂಶ

ವಡಗೇರಾ ತಾಲೂಕಿನ ತೆಲಂಗಾಣ ಗಡಿಭಾಗದ ಗುಂಡ್ಲೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಣೆಗಳ ಕೊರತೆಯಿಂದ ಮಕ್ಕಳು ಮರದ ಕೆಳಗೆ ಪಾಠ ಕೇಳುವಂತಾಗಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ವಡಗೇರಾ ತಾಲೂಕಿನ ತೆಲಂಗಾಣ ಗಡಿಭಾಗದ ಗುಂಡ್ಲೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಣೆಗಳ ಕೊರತೆಯಿಂದ ಮಕ್ಕಳು ಮರದ ಕೆಳಗೆ ಪಾಠ ಕೇಳುವಂತಾಗಿದೆ.

ರಾಜ್ಯ ಸರ್ಕಾರಿ ಶಾಲೆಯ ಮಕ್ಕಳಿಗೆ ಓದಲು ಅನುಕೂಲವಾಗುವಂತೆ ಹಲವಾರು ಯೋಜನೆ ಜಾರಿಗೆ ತಂದಿದ್ದು, ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಶ್ರಮಿಸುತ್ತಿದೆ. ಆದರೆ ಗುಂಡ್ಲೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5ರವರಿಗೆ ತರಗತಿಗಳು ಇದ್ದು, ಈ ಶಾಲೆಯಲ್ಲಿ 90 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಮೂವರು ಶಿಕ್ಷಕರಿದ್ದಾರೆ.

ಆದರೆ ಈ ಶಾಲೆಯಲ್ಲಿ ಎರಡು ಕೋಣೆ ಮಾತ್ರ ಇವೆ. ಒಂದು ಕೋಣೆಯಲ್ಲಿ ಪಾಠ ಮಾಡುವುದರ ಜೊತೆಗೆ ಅಲ್ಲಿಯೇ ಸ್ವಲ್ಪ ಜಾಗದಲ್ಲಿ ಶಾಲೆಗೆ ಸಂಬಂಧಿಸಿದ ದಾಖಲಾತಿ ಪುಸ್ತಕ ಇನ್ನಿತರ ವಸ್ತುಗಳನ್ನು ಇಡುವ ವ್ಯವಸ್ಥೆ ಮತ್ತು ಕಾರ್ಯಾಲಯ ಇದರಲ್ಲಿಯೇ ಮಾಡಿಕೊಂಡಿದ್ದಾರೆ. ಪಕ್ಕದ ಇನ್ನೊಂದು ಕೋಣೆ ಇದೆ.

ಅಲ್ಲಿ ಬೆಳಿಗ್ಗೆಯಿಂದ ಬಿಸಿಯೂಟ ಮಾಡುವ ಕಾರಣ ಮಧ್ಯಾಹ್ನದವರೆಗೆ ಮಕ್ಕಳಿಗೆ ಮರದ ಕೆಳಗೆ ಪಾಠ ಬೋಧನೆ ಹೇಳಿಕೂಡುತ್ತಾರೆ. ಬಿಸಿಯೂಟದ ಅಡುಗೆ ಮುಗಿದ ಮೇಲೆ ಮಧ್ಯಾಹ್ನದಿಂದ ಅಡುಗೆ ಕೋಣೆಯಲ್ಲಿಯೇ ಮಕ್ಕಳಿಗೆ ಪಾಠ ಬೋಧನೆ ಮಾಡುತ್ತಾರೆ. ಅಲ್ಲಿ ಪಕ್ಕದಲ್ಲಿಯೇ ಅಡುಗೆ ಅನಿಲ ಸಿಲಿಂಡರ್‌ ಇರುತ್ತವೆ. ಒಂದು ವೇಳೆ ಏನಾದರೂ ಅನಾಹುತವಾದರೆ ಇದಕ್ಕೆ ಯಾರು ಹೊಣೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆ ಬಂದರೆ ಒಂದೇ ಕೋಣೆಯಲ್ಲಿ ಎಲ್ಲಾ ಮಕ್ಕಳನ್ನು ಕೂಡಿಸುತ್ತಾರೆ. ಬೇರೆ ಬೇರೆ ತರಗತಿಯಲ್ಲಿ ಓದುವ ನಮಗೆ ತುಂಬಾ ತೊಂದರೆಯಾಗುತ್ತಿದೆ. ಶಾಲಾ ಕೋಣೆಗಳನ್ನು ನಿರ್ಮಿಸಿ, ನಮಗೆ ಓದಲು ಅನುಕೂಲ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಶಾಲಾ ಸಮಸ್ಯೆ ಕುರಿತು ಈ ಮೊದಲು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಾಲಕರು ದೂರಿದ್ದಾರೆ.

-

ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಪಾಠ ಕೇಳುತ್ತಾರೆ. ಒಂದು ವೇಳೆ ಏನಾದರೂ ಅನಾಹುತವಾದರೆ ಇದಕ್ಕೆ ಯಾರು ಹೊಣೆ?- ಮಲ್ಲಣ್ಣಗೌಡ ಹಗರಟಗಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ