ಸಂಶಿ ಗ್ರಾಪಂ ಪಿಡಿಒ ಅಮಾನತಿಗೆ ಲಾಡ್‌ ಆದೇಶ

KannadaprabhaNewsNetwork |  
Published : Aug 01, 2024, 12:36 AM IST
124 | Kannada Prabha

ಸಾರಾಂಶ

ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಸಾಕಷ್ಟು ಜನರಿಗೆ ತೊಂದರೆ ಆಗುತ್ತಿದೆ. ಮನೆಗಳು ಹಾನಿಯಾಗಿ ಆಶ್ರಯದ ತೊಂದರೆ ಆಗಿದೆ. ಇಷ್ಟಾಗಿಯೂ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡದೇ, ಅನುಮತಿ ಪಡೆಯದೇ, ಕಳೆದ ಒಂದು ತಿಂಗಳಿಂದ ಸಂಶಿ ಗ್ರಾಪಂ ಪಿಡಿಒ ಗೈರಾಗಿದ್ದಾರೆ.

ಧಾರವಾಡ: ಕಳೆದ ಒಂದು ತಿಂಗಳಿಂದ ಅನಧಿಕೃತ ರಜೆ ಉಳಿದಿರುವ ಮತ್ತು ಅತಿವೃಷ್ಟಿ ಸಮಯದಲ್ಲೂ ಸ್ಪಂದಿಸದಿರುವ ಕುಂದಗೋಳ ತಾಲೂಕಿನ ಸಂಶಿ ಗ್ರಾಮ ಪಂಚಾಯಿತಿ ಪಿಡಿಒ ನಾಗರಾಜ ಗಿಣಿವಾಲ ಅವರನ್ನು ಅಮಾನತು ಮಾಡಲು ತಕ್ಷಣ ಕ್ರಮವಹಿಸಬೇಕೆಂದು ಸಚಿವ ಸಂತೋಷ ಲಾಡ್ ಜಿಪಂ ಸಿಇಒಗೆ ಆದೇಶಿಸಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ 2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಪರಿಹಾರಕೈಗೊಂಡ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣೆ ಸಭೆ ಜರುಗಿಸಿ ಮಾತನಾಡಿದರು. ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಸಾಕಷ್ಟು ಜನರಿಗೆ ತೊಂದರೆ ಆಗುತ್ತಿದೆ. ಮನೆಗಳು ಹಾನಿಯಾಗಿ ಆಶ್ರಯದ ತೊಂದರೆ ಆಗಿದೆ. ಇಷ್ಟಾಗಿಯೂ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡದೇ, ಅನುಮತಿ ಪಡೆಯದೇ, ಕಳೆದ ಒಂದು ತಿಂಗಳಿಂದ ಸಂಶಿ ಗ್ರಾಪಂ ಪಿಡಿಒ ಗೈರಾಗಿದ್ದಾರೆ. ಅವರನ್ನು ತಕ್ಷಣ ಅಮಾನತು ಮಾಡಬೇಕು. ಉದಾಸೀನತೆ ತೋರಿದ ಕುಂದಗೋಳ ತಾಪಂ ಇಒಗೂ ಕಾರಣ ಕೇಳಿ ನೋಟಿಸ್ ನೀಡಬೇಕು. ಈ ರೀತಿಯಾಗಿ ಯಾವುದೇ ಹಂತದ ಅಧಿಕಾರಿ ಕರ್ತವ್ಯದಲ್ಲಿ ಉದಾಸೀನತೆ, ಬೇಜವಾಬ್ದಾರಿ ತೋರಿದರೆ ಜಿಲ್ಲಾಧಿಕಾರಿ ಮತ್ತು ಸಿಇಒ ಕಠಿಣ ಕ್ರಮ ಜರುಗಿಸಬೇಕು ಎಂದರು.ಜೂನ್, ಜುಲೈ ತಿಂಗಳ ಮಳೆಯಿಂದ ಜನರಿಗೆ ಸಾಕಷ್ಟು ತೊಂದರೆ ಆಗಿದೆ. ಆಗಸ್ಟ್ ತಿಂಗಳಲ್ಲೂ ಅತಿ ಮಳೆ ಆಗುವ ಮುನ್ಸೂಚನೆ ಇದೆ. ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಪ್ರತಿ ಅಧಿಕಾರಿ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು. ತಹಸೀಲ್ದಾರ್‌ ಮತ್ತು ಇಒ ಜಂಟಿಯಾಗಿ ತಾಲೂಕು ಸುತ್ತಬೇಕು. ಜನರಲ್ಲಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಚಿವರು ತಿಳಿಸಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಈ ವರೆಗೆ 443 ಕಚ್ಚಾಮನೆ ಗುರುತಿಸಿದ್ದು ಈ ಪ್ರತಿ ಮನೆಯ ನಿವಾಸಿಗಳಿಗೆ ಮಳೆ ಹಾನಿ ಬಗ್ಗೆ ತಿಳಿವಳಿಕೆ ನೀಡಲಾಗಿದೆ. ಈಗಾಗಲೆ 33 ಕುಟುಂಬಗಳು ಬೇರೆಡೆ ವರ್ಗ ಆಗಿದ್ದಾರೆ ಎಂದು ತಹಸೀಲ್ದಾರ್‌ಗಳು ವರದಿ ನೀಡಿದ್ದಾರೆ. ಅಗತ್ಯವಿರುವ ಕಡೆ ಕಾಳಜಿ ಕೇಂದ್ರ ತೆರೆಯಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಸ್ವರೂಪ ಟಿ.ಕೆ. ಮಾತನಾಡಿ, ಎಲ್ಲ ತಾಪಂ ಇಒಗಳು ಸ್ಥಾನಿಕವಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಪತ್ತು ಪರಿಹಾರ ಕಾರ್ಯಗಳ ಮೇಲುಸ್ತುವಾರಿ ಹಾಗೂ ಅಧಿಕಾರಿಗಳ ಮೇಲೆ ನಿರಂತರ ನಿಗಾವಹಿಸುವಂತೆ ಸೂಚಿಸಿದರು.ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ