ರಾಕ್ಷಸೀ ಕೃತ್ಯ ಎಸಗಿದ ಬಿಹಾರ ಮೂಲದ ರಿತೇಶ್‌ಗೆ ಲೇಡಿ ಸಿಂಗಂ ಅನ್ನಪೂರ್ಣಾ ಗುಂಡೇಟು!

KannadaprabhaNewsNetwork | Updated : Apr 14 2025, 05:50 AM IST

ಸಾರಾಂಶ

ಬಾಲಕಿಯ ಹಂತಕನನ್ನು ಎನ್‌ ಕೌಂಟರ್‌ ಮಾಡಿರುವುದು ಅನ್ನಪೂರ್ಣಾ ಎಂಬ ಮಹಿಳಾ ಪಿಎಸ್‌ಐ. ಅವರನ್ನೀಗ ಹುಬ್ಬಳ್ಳಿಯ ಜನ ಲೇಡಿ ಸಿಂಗಂ ಎಂದು ಹಾಡಿಹೊಗಳುತ್ತಿದ್ದಾರೆ.

ಹುಬ್ಬಳ್ಳಿ: ಬಾಲಕಿಯ ಹಂತಕನನ್ನು ಎನ್‌ ಕೌಂಟರ್‌ ಮಾಡಿರುವುದು ಅನ್ನಪೂರ್ಣಾ ಎಂಬ ಮಹಿಳಾ ಪಿಎಸ್‌ಐ. ಅವರನ್ನೀಗ ಹುಬ್ಬಳ್ಳಿಯ ಜನ ಲೇಡಿ ಸಿಂಗಂ ಎಂದು ಹಾಡಿಹೊಗಳುತ್ತಿದ್ದಾರೆ.

ನಗರದಲ್ಲಿ ಭಾನುವಾರ ಬಾಲಕಿಯೊಬ್ಬಳನ್ನು ಬಿಹಾರ ಮೂಲದ ವ್ಯಕ್ತಿ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಘಟನೆ ನಡೆಯುತ್ತಿದ್ದಂತೆ ಇಡೀ ಊರಿಗೆ ಊರೇ ರೊಚ್ಚಿಗೆದ್ದಿತ್ತು. ಸಾರ್ವಜನಿಕರು ಎಲ್ಲರೂ ಜಾತಿ, ಮತ, ಪಂಥಗಳನ್ನೆಲ್ಲ ಬಿಟ್ಟು ಬಾಲಕಿ ಸಾವಿಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಬೀದಿಗಿಳಿದು ಪ್ರತಿಭಟನೆ ಶುರು ಮಾಡಿದ್ದರು. ಸಾರ್ವಜನಿಕರ ಪ್ರತಿಭಟನೆಯಿಂದ ಕಂಗೆಟ್ಟ ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿತ್ತು.

ಪೊಲೀಸ್‌ ಕಮಿಷನರ್‌ ಶಶಿಕುಮಾರ ಅವರು, ಐದು ಟೀಂ ಮಾಡಿ ಎಲ್ಲರಿಗೂ ಏನೇ ಆಗಲಿ ಇನ್ನೆರಡು ಗಂಟೆಯಲ್ಲಿ ಆರೋಪಿಯನ್ನೇ ಬಂಧಿಸಲೇಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿ ಟೀಂಗಳನ್ನು ರವಾನಿಸಿದ್ದರು. ಅದರಲ್ಲಿ ಒಂದು ಟೀಂನಲ್ಲಿ ಅನ್ನಪೂರ್ಣಾ ಇದ್ದರು.

ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕನವರು ಇವರು. ಹುಬ್ಬಳ್ಳಿ ಶಹರ ಠಾಣೆ, ಸಿಇಎನ್‌ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡವರು. ಇದೀಗ ಅಶೋಕನಗರ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಪಿ ತಾರಿಹಾಳ ಬ್ರಿಡ್ಜ್‌ ಬಳಿ ಮನೆಯೊಂದರಲ್ಲಿ ಅಡಗಿ ಕುಳಿತಿದ್ದಾನೆ ಎಂಬುದು ಗೊತ್ತಾಗಿದೆ.

ಆತ್ಮರಕ್ಷಣೆಗೆ ಗುಂಡು

ಆರೋಪಿ ಮೇಲೆ ಬೇಕು ಅಂತಲೇ ಗುಂಡು ಹಾರಿಸಲಿಲ್ಲ. ಆತ್ಮರಕ್ಷಣೆಗೆ ಗುಂಡು ಹಾರಿಸಿದ ಗುಂಡಿನಿಂದ ಆತ ಸತ್ತಿದ್ದಾನೆ. ಹೀಗಾಗಿ, ಇದು ಎನ್‌ಕೌಂಟರ್‌ ಆದಂತಾಗಿದೆ. ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸಲು ಆತನ ಮನೆ ಬಳಿ ತೆರಳಿದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಜತೆಗೆ ಪೊಲೀಸರ ವಾಹನದ ಮೇಲೂ ಕಲ್ಲು ತೂರಿದ್ದಾನೆ. ಇದರಿಂದ ಪಿಎಸ್‌ಐ ಅನ್ನಪೂರ್ಣಾ ಸೇರಿದಂತೆ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ.

ಎಚ್ಚರಿಕೆ ಸಂದೇಶ ನೀಡುವ ಉದ್ದೇಶದಿಂದ ಮಹಿಳಾ ಪಿಎಸ್‌ಐ ಅನ್ನಪೂರ್ಣಾ ಮೊದಲು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಆತನ ದಾಳಿ ಮಾತ್ರ ಮುಂದುವರಿದಿತ್ತು. ಹೀಗಾಗಿ, ಬೆದರದೆ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಆತನ ಕಾಲಿಗೆ ಮೊದಲಿಗೆ ಗುಂಡು ಹಾರಿಸಲಾಗಿದೆ. ಆಗಲೂ ಆತ ತನ್ನ ಪ್ರಯತ್ನ ಮುಂದುವರಿಸಿದ್ದಾನೆ. ಆಗ ಹಾರಿಸಿದ ಗುಂಡು ಆತನ ಬೆನ್ನಿಗೆ ಬಿದ್ದಿದೆ. ಆತನಿಗೆ ಗುಂಡು ಹಾರಿಸದಿದ್ದರೆ ಪೊಲೀಸರ ಮೇಲೆ ಇನ್ನಷ್ಟು ದಾಳಿ ಮಾಡುತ್ತಿದ್ದ. ಹೀಗಾಗಿ, ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ.

ಆತ್ಮರಕ್ಷಣೆಗಾದರೂ ಹಾರಿಸಿರಲಿ ಅಥವಾ ಬೇಕಂತ ಹಾರಿಸಿರಲಿ, ಮಹಿಳಾ ಪಿಎಸ್‌ಐ ಕೈಗೊಂಡ ಕ್ರಮಕ್ಕೆ ಮಾತ್ರ ಇಡೀ ನಗರದಲ್ಲೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನ್ನಪೂರ್ಣಾ ಹುಬ್ಬಳ್ಳಿಯ ಲೇಡಿ ಸಿಂಗಂ ಆಗಿದ್ದಾರೆ ಎಂಬ ಮಾತು ಇದೀಗ ಎಲ್ಲರ ಬಾಯಲ್ಲೂ ಕೇಳಿಬರುತ್ತಿದೆ. ಆರೋಪಿ ಹಲ್ಲೆಯಿಂದ ಗಾಯಗೊಂಡಿರುವ ಲೇಡಿಸಿಂಗಂ ಅನ್ನಪೂರ್ಣಾ ಸೇರಿದಂತೆ ಇನ್ನಿಬ್ಬರು ಸಿಬ್ಬಂದಿ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share this article