ಕನ್ನಡಪ್ರಭ ವಾರ್ತೆ ಯಾದಗಿರಿ
ಜಲಮೂಲಗಳ ಪುನಶ್ಚೇತನ ಅಡಿಯಲ್ಲಿ ಕೆರೆಗಳ ಹೂಳೆತ್ತುವ ಯೋಜನೆ ಹಮ್ಮಿಕೊಂಡಿದ್ದು, ಕೆರೆಗಳ ಹೂಳೆತ್ತುವುದರಿಂದ ರೈತರಿಗೆ ಫಲವತ್ತಾದ ಹೂಳು(ಸಾವಯವ ಗೊಬ್ಬರ) ಉಚಿತವಾಗಿ ದೊರೆಯಲಿದೆ ಎಂದು ಭಾರತೀಯ ಜೈನ್ ಸಂಘಟನೆಯ ರಾಯಚೂರು ವಲಯದ ಅಧ್ಯಕ್ಷ ರಾಜೇಶ್ ತಿಳಿಸಿದರು.ಸಮೀಪದ ನಾಯ್ಕಲ್ ಗ್ರಾಮದಲ್ಲಿ ಪೂನಾದ ಫೋರ್ಸ್ ಮೋಟಾರ್ ಲಿಮಿಟೆಡ್‌ನ ಚೇರ್ಮನ್ ಅಭಯ ಫಿರೋಧಿಯಾ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಕಂಚನ ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.
ರೈತರಿಗೆ ಯಂತ್ರಗಳ ಮೂಲಕ ಹೂಳನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಇದರಿಂದ ರೈತರಿಗೆ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಲಿದೆ ಎಂದರು.ಕೆರೆಗಳಲ್ಲಿ ಹೂಳು ಹೊರ ತೆಗೆಯುವುದರಿಂದ ಮಳೆಗಾಲದ ಅವದಿಯಲ್ಲಿ ಹೆಚ್ಚು ನೀರು ಸಂಗ್ರಹವಾಗಿ ಕೆರೆಯ ಸುತ್ತಲ್ಲಿನ ಪ್ರದೇಶಗಳಲ್ಲಿ ಮತ್ತು ರೈತರ ಕೃಷಿ ಹೊಂಡಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಇದರಿಂದ ದಿನನಿತ್ಯದ ಬಳಕೆ, ಪಶು ಪ್ರಾಣಿಗಳಿಗೆ, ಜಲಚರಗಳಿಗೆ ಹಾಗೂ ವ್ಯವಸಾಯಕ್ಕೆ ನೀರು ಲಭ್ಯವಾಗಲಿದೆ ಎಂದರ
ಫೋರ್ಸ್ ಮೋಟಾರ್ ಲಿಮಿಟೆಡ್ ಪೂನಾದ ಅಧ್ಯಕ್ಷ ಅಭಯ ಫಿರೋದಿಯಾ ಮಾತನಾಡಿ, ಭಾರತೀಯ ಜೈನ್ ಸಂಘಟನೆಯು 5 ರಾಜ್ಯಗಳಲ್ಲಿನ 125 ಕೆರೆಗಳಿಗೆ ಆರ್ಥಿಕ ಸಹಾಯವನ್ನು ಒದಗಿಸಿರುವುದು ಶ್ಲಾಘನೀಯವಾದದ್ದು. ಕರ್ನಾಟಕ, ತಮಿಳುನಾಡು, ಮದ್ಯಪ್ರದೇಶ, ಛತ್ತಿಸಗಢ, ಹಾಗೂ ಗುಜರಾತ್ ರಾಜ್ಯಗಳಲ್ಲಿ ಕಾರ್ಯಕ್ರವು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.ಈ ವೇಳೆ ಬಿಜೆಎಸ್‌ನ ರಾಯಚೂರ ವಲಯದ ಕಾರ್ಯದರ್ಶಿ ಅಜಿತಕುಮಾರ ದೋಕಾ, ಬಿಜೆಎಸ್‌ನ ಯಾದಗಿರಿ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಮಹ್ಯಕುಮಾರ, ನಾಯ್ಕಲ್ ಗ್ರಾಮದ ಮುಖಂಡರಾದ ಜಾವೀದ್ ಕುರುಕುಂದಿ, ಫಾರೋಕ್ ಹೊಸಳ್ಳಿ ಭೀಮರಾಯ ತುಮಕೂರ, ದೇವಿಂದ್ರಪ್ಪ ನಾಟೇಕಾರ್, ಮರೆಪ್ಪ ಕಂಚಗಾರ, ಮೋನಪ್ಪ, ನಾಗಪ್ಪ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ, ರೈತರು ಇತರರಿದ್ದರು.