ಕೈಗಾರಿಕೆಗಳ ತ್ಯಾಜ್ಯದಿಂದ ಕೆರೆಗಳ ನೀರು ಮಲಿನ

KannadaprabhaNewsNetwork | Published : Nov 18, 2024 12:03 AM

ಸಾರಾಂಶ

ಹಾರೋಹಳ್ಳಿ: ಕೈಗಾರಿಕಾ ಪ್ರದೇಶಗಳ ತ್ಯಾಜ್ಯದಿಂದಾಗಿ ಹಾರೋಹಳ್ಳಿ ಸುತ್ತಮುತ್ತಲಿನ ಕೆರೆಗಳು ಕಲುಷಿತಗೊಳ್ಳುತ್ತಿದ್ದು, ಜನ ಸಾಮಾನ್ಯರಲ್ಲಿ ಆತಂಕ ಹೆಚ್ಚಿಸಿದೆ. ಹಾರೋಹಳ್ಳಿ ಪಟ್ಟಣದ ಸಮೀಪದ, ಏಷ್ಯಾದಲ್ಲಿಯೇ ಎರಡನೇ ಸ್ಥಾನದಲ್ಲಿರುವ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 500 ಕ್ಕೂ ಹೆಚ್ಚು ಕಾರ್ಖಾನೆಗಳನ್ನು ಹೊಂದಿದ್ದು, ಈ ಪ್ರದೇಶದ ತ್ಯಾಜ್ಯಗಳು ಹಳ್ಳಕೊಳ್ಳಗಳ ಮೂಲಕ ಹರಿದು ಕೆರೆ ಒಡಲು ಸೇರುತ್ತಿದೆ.

ಹಾರೋಹಳ್ಳಿ: ಕೈಗಾರಿಕಾ ಪ್ರದೇಶಗಳ ತ್ಯಾಜ್ಯದಿಂದಾಗಿ ಹಾರೋಹಳ್ಳಿ ಸುತ್ತಮುತ್ತಲಿನ ಕೆರೆಗಳು ಕಲುಷಿತಗೊಳ್ಳುತ್ತಿದ್ದು, ಜನ ಸಾಮಾನ್ಯರಲ್ಲಿ ಆತಂಕ ಹೆಚ್ಚಿಸಿದೆ. ಹಾರೋಹಳ್ಳಿ ಪಟ್ಟಣದ ಸಮೀಪದ, ಏಷ್ಯಾದಲ್ಲಿಯೇ ಎರಡನೇ ಸ್ಥಾನದಲ್ಲಿರುವ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 500 ಕ್ಕೂ ಹೆಚ್ಚು ಕಾರ್ಖಾನೆಗಳನ್ನು ಹೊಂದಿದ್ದು, ಈ ಪ್ರದೇಶದ ತ್ಯಾಜ್ಯಗಳು ಹಳ್ಳಕೊಳ್ಳಗಳ ಮೂಲಕ ಹರಿದು ಕೆರೆ ಒಡಲು ಸೇರುತ್ತಿದೆ.

ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೆಗಳು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲರು ಬೋರ್‌ವೆಲ್‌ಗಳನ್ನು ಅವಲಂಬಿಸುತ್ತಿದ್ದಾರೆ. ಬೋರ್‌ವೆಲ್‌ಗಳನ್ನು ಕೊರೆಯುತ್ತಿರುವುದರಿಂದ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಕೆರೆ ಕುಂಟೆಗಳನ್ನು ಉಳಿಸಿಕೊಳ್ಳದಿದ್ದರೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಬಹುದಾಗಿದೆ.

ಪಟ್ಟಣ ವ್ಯಾಪ್ತಿಯಲ್ಲಿ ಬರುವ ದೊಡ್ಡಕೆರೆ, ಚುಳುಕನ ಕೆರೆ, ಮೇಡಮಾರನಹಳ್ಳಿ ಕೆರೆ, ಗಾಣಾಳ್‌ದೊಡ್ಡಿ ಕೆರೆ, ವಡಿಕೆ ಕೆರೆ, ಹೊಸಕೋಟೆ ಸೇರಿದಂತೆ ಪಟ್ಟಣ ವ್ಯಾಪ್ತಿಯ ಕೆರೆಗಳು 7 ದೊಡ್ಡ ಕೆರೆಗಳನ್ನು ಹೊಂದಿದ್ದು, 6 ಸಣ್ಣ ಕೆರೆಗಳು ಒಳಗೊಂಡಿದೆ.

ಕೆಲವು ಸಣ್ಣಪುಟ್ಟ ಹಾಗೂ ದೊಡ್ಡ ಕೆರೆಗಳು ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆಲವು ಕೆರೆಗಳು ಮಲಿನಗೊಂಡಿವೆ. ಕಳೆದ 2 ವರ್ಷಗಳ ಬರಗಾಲದಲ್ಲಿ ಬಂದ ಅಲ್ಪಸ್ವಲ್ಪ ಮಳೆಯಿಂದಾಗಿ ಕೆಲವು ಕೆರೆಗಳು ಪೂರ್ತಿಯಾಗಿ ಬತ್ತದೆ ಉಳಿದುಕೊಂಡಿದೆ. ಇದರಿಂದ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಪೂರ್ತಿಯಾಗಿ ಕುಂದಿಲ್ಲ. ಆದರೆ ಕೆರೆಗಳು ನಾಶವಾದರೆ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಪೂರ್ತಿಯಾಗಿ ಕುಸಿಯುವ ಆತಂಕವಿದೆ.

ಬಗೆಹರಿಯದ ನೀರಿನ ಸಮಸ್ಯೆ:

ತಾಲೂಕಿನ ಕೆಲವು ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ರೈತರ ಬೆಳೆಗೆ ಬೆಳೆಯಲು ಕೂಡ ಕೊಳವೆಬಾವಿ ನೀರು ಬೀಳದೆ ವಿಫಲರಾಗಿದ್ದಾರೆ. ರೈತರು ಜಮೀನಿನಲ್ಲಿ 700 ರಿಂದ 800 ಅಡಿ ಬೋರ್‌ವೆಲ್ ಹಾಕಿಸಿದರು ಕೂಡ ನೀರು ಸಿಗುತ್ತಿಲ್ಲ. ಆದ್ದರಿಂದ ಹಾರೋಹಳ್ಳಿಯ ಸುತ್ತಮುತ್ತಲಿನ ಜನತೆಯು ಕೂಡ ಕೆರೆಗಳಿಗೆ ಯಾವುದೇ ತರಹದ ತ್ಯಾಜ್ಯ ವಸ್ತುಗಳಾಗಲಿ, ಕಲ್ಮಶ ನೀರನ್ನು ಸಹ ಕೆರೆಗಳಿಗೆ ಬಿಡಬಾರದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೆರೆಗಳ ಸಂರಕ್ಷಣೆಯನ್ನು ಮಾಡಬೇಕು. ತಿಂಗಳಿಗೆ ಒಮ್ಮೆಯಾದರೂ ಕೂಡ ಕೆರೆಗಳ ಕಡೆ ಗಮನ ಹರಿಸಬೇಕು ಎಂಬುದು ಜನಸಾಮಾನ್ಯರ ಆಗ್ರಹವಾಗಿದೆ.ಬಾಕ್ಸ್ ................

ಕೆರೆಗಳ ಅಭಿವೃದ್ಧಿಗೆ ಏನು ಮಾಡಬೇಕು

ಕೆರೆಯಲ್ಲಿ ಕಲ್ಮಶಯುಕ್ತ ಹೂಳನ್ನು ತೆಗೆದು ಕೆರೆಯ ನೀರು ಕುಲುಷಿತಗೊಳ್ಳದಂತೆ ತಡೆಯಬೇಕು. ಕೆರೆಗಳಿಗೆ ಚರಂಡಿ ನೀರು ಸೇರದಂತೆ ತಡೆಯುವ ಕೆಲಸಗಳನ್ನು ಮಾಡಬೇಕು. ಜಾಗಿಂಗ್, ವಾಕಿಂಗ್ ಪಾಥ್, ಕೆರಗಳು ಸೌಂದರ್ಯೀಕರಣಕ್ಕೆ ಅನುವು ಮಾಡಿಕೊಡಬೇಕು. ಕೆರೆ ಪರಿಸರವನ್ನು ಪುನಶ್ಚೇತನಗೊಳಿಸುವ ಕೆಲಸವಾಗಬೇಕು. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತು ಕಾರ್ಯನಿರ್ವಹಣಾ ಪ್ರಾಧಿಕಾರವನ್ನು ರಚಿಸಿ ಕೆರೆಗಳ ಸಮಗ್ರ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಸಂಬಂಧಪಟ್ಟ ಇಲಾಖೆಗಳು ಸಂಸ್ಥೆಗಳು ಜೊತೆಗೂಡಿ ಸಮನ್ವಯ ಸಾಧಿಸಿಬೇಕು.

ತಾಲೂಕಿನ ಕೆಲವು ಒತ್ತುವರಿ ಆಗಿರುವ ಕೆರೆಗಳನ್ನು ಅಧಿಕಾರಿಗಳು ತೆರವುಗೊಳಿಸಿಬೇಕು. ಕೈಗಾರಿಕ ಪ್ರದೇಶದ ಸುತ್ತಮುತ್ತಲಿನ ಕೆರೆಗಳು ಮಲಿನವಾಗದಂತೆ ನೋಡಿಕೊಳ್ಳಬೇಕು, ಮಾಲಿನ್ಯ ಮಾಡುತ್ತಿರುವರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಪಟ್ಟಣ ವ್ಯಾಪ್ತಿಯ ಕೆರೆಗಳ ಸುತ್ತ ಕಾಂಪೌಂಡ್ ವ್ಯವಸ್ಥೆ, ಕ್ಯಾಮೆರಾಗಳನ್ನು ಅಳವಡಿಸಿದರೆ ಕೆರೆಗಳ ಸಂರಕ್ಷಣೆಗೆ ಅನುಕೂಲವಾಗುತ್ತದೆ.

ಬಾಕ್ಸ್‌...............

ಜನರ ಕರ್ತವ್ಯ ಏನು

ಹಾರೋಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಸಾರ್ವಜನಿಕರು ಯಾವುದೇ ತರಹದ ತ್ಯಾಜ್ಯ ವಸ್ತುಗಳಾಗಲಿ, ಪ್ಲಾಸ್ಟಿಕ್ ವಸ್ತುಗಳಾಗಲಿ, ಕಸ ಕಡ್ಡಿಗಳನ್ನು ಹಾಕಬಾರದು. ಕೆರೆ ಕೆರೆಗಳನ್ನು ಶುಚಿಯಾಗಿ ಇಟ್ಟುಕೊಳ್ಳುವುದಕ್ಕೆ, ಕೆರೆಗಳ ರಕ್ಷಣೆಗೆ ಜನತೆಯು ಕೂಡ ಸಹಕರಿಸಬೇಕು. ಹಾಗಿದ್ದರೆ ಮಾತ್ರ ಕೆರೆಗಳನ್ನು ಉಳಿಸಿಕೊಳ್ಳಲು ಸಾಧ್ಯ.ಇದರಿಂದ ಮುಂದಿನ ದಿನಗಳಲ್ಲಿ ನೀರಿನ ಅಭಾವವನ್ನು ತಡೆಯಬಹುದಾಗಿದೆ.ಕೋಟ್ .....................

ಕೆರೆಗಳನ್ನು ಉಳಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಹಾಗೂ ರೈತರಿಗೆ, ಪ್ರಾಣಿ, ಪಕ್ಷಿ, ಜಲಚರ ಪ್ರಾಣಿಗಳಿಗೂ ತೊಂದರೆಯಾಗುತ್ತದೆ. ಆದುದರಿಂದ ಕೆರೆಗಳನ್ನು ಸಂರಕ್ಷಣೆ ಮಾಡಬೇಕು.

-ಹಾರೋಹಳ್ಳಿ ಮುರಳೀಧರ್ಕೋಟ್ ................

ಹಾರೋಹಳ್ಳಿ ಸುತ್ತಮುತ್ತಲಿನ ಮಲಿನಗೊಂಡಿರುವ ಕೆರೆಗಳನ್ನು ಶುಚಿಗೊಳಿಸಬೇಕು ಹಾಗೂ ಕೆರೆಗಳ ಮಲಿನಕ್ಕೆ ಕಾರಣರಾದವರ ವಿರುದ್ಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಜರುಗಿಸಿ ಕೆರೆಗಳ ಸಂರಕ್ಷಣೆ ಮಾಡಬೇಕು.

-ಹಾರೋಹಳ್ಳಿ ಚಂದ್ರು17ಕೆಆರ್ ಎಂಎನ್ 2,3.ಜೆಪಿಜಿ

ಹಾರೋಹಳ್ಳಿಯಲ್ಲಿನ ಕೆರೆಗಳು ಮಲಿನಗೊಂಡಿರುವುದು.

Share this article