ಮನುಷ್ಯನ ದುರಾಸೆಗೆ ಬಲಿಯಾದ ಕೆರೆಗಳು

KannadaprabhaNewsNetwork |  
Published : Mar 23, 2024, 01:03 AM IST
21ಎಚ್‌ಪಿಟಿ5- ಹಂಪಿ ಕನ್ನಡ ವಿವಿ ವತಿಯಿಂದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಚಿಕ್ಕಕೆರೆಯಾಗಿನಹಳ್ಳಿ ಕೆರೆಕಟ್ಟೆಯ ಬಳಿ ಕರ್ನಾಟಕ `ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮಕ್ಕೆ ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ನಗರ ಪ್ರದೇಶದ ನೂರಾರು ಕೆರೆಗಳು ಮನುಷ್ಯನ ದುರಾಸೆಗೆ ಬಲಿಯಾಗಿವೆ. ನೀರಿನ ಮೂಲಸೆಲೆಯಾದ ಕೆರೆಗಳು ಹಾಳಾದರೆ ಗ್ರಾಮೀಣ ಮಟ್ಟದಲ್ಲಿ ಅಂತರ್ಜಲ ಕುಸಿಯುತ್ತದೆ.

ಹೊಸಪೇಟೆ:

ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗ, ಕರ್ನಾಟಕ ಇತಿಹಾಸ ಅಕಾಡೆಮಿ, ಚಿಕ್ಕಕೆರೆಯಾಗಿನಹಳ್ಳಿ ಮತ್ತು ಬಿ.ಬಿ. ತಾಂಡಾ ಗ್ರಾಮಸ್ಥರ ಸಹಯೋಗದೊಂದಿಗೆ ಸಂಡೂರು ತಾಲೂಕಿನ ಚಿಕ್ಕಕೆರೆಯಾಗಿನಹಳ್ಳಿ ಕೆರೆಕಟ್ಟೆಯ ಬಳಿ ಕರ್ನಾಟಕ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ, ವಿಜಯನಗರ ಸಾಮ್ರಾಜ್ಯದ ಮಂತ್ರಿ ಬಯಕಾರ ರಾಮಪ್ಪ ಕ್ರಿ.ಶ. 1539ರಲ್ಲಿ ನಿರ್ಮಿಸಿದ ಶಾಸನವಿದು. ಕರ್ನಾಟಕ ಚರಿತ್ರೆಯಲ್ಲಿ ಅತಿ ಹೆಚ್ಚು ಶಾಸನಗಳನ್ನು ಇಡೀ ದಕ್ಷಿಣ ಭಾರತದಾದ್ಯಂತ ಹಾಕಿಸಿರುವವರು ವಿಜಯನಗರ ಸಾಮ್ರಾಜ್ಯದ ಅರಸರು. ಹಾಗೆಯೇ ದಕ್ಷಿಣ ಭಾರತದಾದ್ಯಂತ ಅತಿ ಹೆಚ್ಚು ಕೆರೆ ನಿರ್ಮಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದರು.ಚಿಕ್ಕಕೆರೆಯಾಗಿನಹಳ್ಳಿ ಶಾಸನದಲ್ಲಿ ತನ್ನ ತಾಯಿಯ ಹೆಸರಿನಲ್ಲಿ ಬಯಕಾರ ರಾಮಪ್ಪನು ಲಕ್ಕಸಮುದ್ರ ಎನ್ನುವ ಕೆರೆ ನಿರ್ಮಿಸಿದ. ಜೀವಿತಾವಧಿಯಲ್ಲಿ 25ಕ್ಕೂ ಹೆಚ್ಚು ಕೆರೆ ನಿರ್ಮಿಸಿದ್ದಾರೆ. ಈ ಪರಿಸರದಲ್ಲಿ ಮಳೆಯ ಪ್ರಮಾಣ ಬಹಳ ಕಡಿಮೆ. ಜನರಿಗೆ ನೀರಿನ ಸೌಲಭ್ಯ ಕಲ್ಪಿಸುವುದಕ್ಕೆ ಕೆರೆಯ ಮಹತ್ವ ಅರಿತು ತಮ್ಮ ಕುಟುಂಬದವರ ಹೆಸರಿನಲ್ಲಿ ಕೆರೆ-ಬಾವಿ ನಿರ್ಮಿಸಿದ್ದಾನೆ ಎಂದು ಹೇಳಿದರು.ಈಗ ನಾವು ಇಷ್ಟೆಲ್ಲ ವಿದ್ಯಾವಂತರಾಗಿದ್ದರೂ ಕೆರೆಗಳ ನಿರ್ಮಾಣಕ್ಕೆ ಮಹತ್ವ ನೀಡುತ್ತಿಲ್ಲ. ನಗರ ಪ್ರದೇಶದ ನೂರಾರು ಕೆರೆಗಳು ಮನುಷ್ಯನ ದುರಾಸೆಗೆ ಬಲಿಯಾಗಿವೆ. ನೀರಿನ ಮೂಲಸೆಲೆಯಾದ ಕೆರೆಗಳು ಹಾಳಾದರೆ ಗ್ರಾಮೀಣ ಮಟ್ಟದಲ್ಲಿ ಅಂತರ್ಜಲ ಕುಸಿಯುತ್ತದೆ. ವ್ಯವಸಾಯಕ್ಕೆ ನೀರಿನ ಅಭಾವ ಉಂಟಾಗುವುದನ್ನು ಅರಿತು ತನ್ನ ಪ್ರದೇಶದ ವ್ಯಾಪ್ತಿಯಲ್ಲಿ ಅಂದರೆ ಕೂಡ್ಲಿಗಿ, ಸಂಡೂರು, ಹೊಸಪೇಟೆ, ಹಗರಿಬೊಮ್ಮನಹಳ್ಳಿ ತಾಲೂಕುಗಳ ಭೂಭಾಗದಲ್ಲಿ 25ಕ್ಕೂ ಹೆಚ್ಚು ಕೆರೆ ನಿರ್ಮಿಸಿದ ಕೀರ್ತಿ ಬಯಕಾರ ರಾಮಪ್ಪನಿಗೆ ಸಲ್ಲುತ್ತದೆ ಎಂದರು.ಬಯಕಾರ ರಾಮಪ್ಪನನ್ನು ಕೆರೆಗಳ ಪಿತಾಮಹ ಎಂದು ಕರೆದರೆ ತಪ್ಪಾಗಲಾರದು. ಕೆರೆ ನಿರ್ಮಿಸಿದರೆ ಮುಂದಿನ ಜನಾಂಗ ಸುಖವಾಗಿರುತ್ತದೆ ಎಂಬ ಪೂರ್ವಾಲೋಚನೆ ಬಯಕಾರ ರಾಮಪ್ಪನಿಗೆ ಇತ್ತು. ವಿಜಯನಗರ ಆಳ್ವಿಕೆ ಕಾಲದಲ್ಲಿ ಅತ್ಯುತ್ತಮ ಅಧಿಕಾರಿಗಳಿದ್ದುದ್ದಕ್ಕೆ ವಿಜಯನಗರ ಅರಸರಿಗೆ ಕೀರ್ತಿ ಪ್ರಾಪ್ತವಾಯಿತು ಕುಲಪತಿ ಹೇಳಿದರು.ಅಧ್ಯಯನಾಂಗದ ನಿರ್ದೇಶಕ, ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅಮರೇಶ ಯತಗಲ್ ಮಾತನಾಡಿ, ಕರ್ನಾಟಕವನ್ನು ಅನೇಕ ರಾಜ ಮನೆತನಗಳು ಆಳ್ವಿಕೆ ಮಾಡಿದ್ದು, ಅನೇಕ ಅರಸರು, ಮಂತ್ರಿಗಳು ಆಳ್ವಿಕೆ ಮಾಡಿದ್ದಾರೆ. ಆದರೆ ಬಯಕಾರ ರಾಮಪ್ಪ ತನ್ನ ಜನೋಪಯೋಗಿ ಕಾರ್ಯಗಳ ಮೂಲಕ ಗುರುತಿಸುವಂತಹವರು. ರಾಮಪ್ಪ ಅವರನ್ನು ಭೌತಿಕವಾಗಿ ನೋಡಲು ಸಾಧ್ಯವಿಲ್ಲ. ಆದರೆ ಅವರ ಜನಮುಖಿ ಕಾರ್ಯಗಳು ನಮ್ಮ ಮುಂದಿವೆ. ಹಾಗಾಗಿ ರಾಮಪ್ಪ ನಮಗೆಲ್ಲ ಮಾದರಿ. ನಮ್ಮ ಮಧ್ಯೆ ಇರುವ ಸ್ಮಾರಕ, ಶಾಸನಗಳು ಹಾಳಾಗುತ್ತಿವೆ. ಅವುಗಳ ಸಂರಕ್ಷಣೆ ತುರ್ತಾಗಿ ಜರಗುವ ಅವಶ್ಯಕತೆಯಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕೆ.ಆರ್. ನರಸಿಂಹನ್, ಧನಪಾಲ್‌ ಮಾತನಾಡಿದರು.

ಟಿ.ಎಂ. ಬಸವರಾಜ, ಡಾ. ಆರ್. ಯುವರಾಜ್, ಡಿ. ವೀರೇಶ, ಲಿಂಬ್ಯಾನಾಯ್ಕ, ಶಶಿಕುಮಾರ ನಾಯ್ಕ, ಓಬಯ್ಯನಾಯಕ, ಪಂಪಣ್ಣ ಒ. ಶಂಕ್ರಪ್ಪ ಬಾರಕೇರ, ಬಿ.ಬಿ. ತಾಂಡಾ ಹಾಗೂ ಚಿಕ್ಕಕೆರೆಯಾಗಿನಹಳ್ಳಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...