ಮುಂಡರಗಿ: ಕಳೆದ ಅನೇಕ ವರ್ಷಗಳಿಂದ ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಜರುಗುತ್ತಿದ್ದು, ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಬೆಳಕು ಮೂಡಿಸುವುದೇ ಲಕ್ಷ ದೀಪೋತ್ಸವದ ಉದ್ದೇಶವಾಗಿದೆ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.
ಹರಿಹರನಿಗೆ ಜನಿಸಿದ ಮಗ ಅಯ್ಯಪ್ಪಸ್ವಾಮಿ ಇಂದು ಇಡೀ ದೇಶ ಬೆಳಗುತ್ತಿದ್ದಾನೆ.ಅಂತಹ ಒಂದು ಸ್ವಾಮಿ ಶ್ರೀಕ್ಷೇತ್ರದಲ್ಲಿ ಜರುಗುತ್ತಿರುವ ಕಾರ್ಯಕ್ರಮದಲ್ಲಿ ಜನತೆಯಲ್ಲಿ ಧರ್ಮಶ್ರೆದ್ಧೆ,ವಿಶ್ವಾಸ ಮೂಡಿಸಲಾಗುತ್ತಿದೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಬಿಜೆಪಿ ಮುಂಡರಗಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ.ಮೋರನಾಳ ಮಾತನಾಡಿ, ದೇಶದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಆಚರಣೆ ನಿರಂತರವಾಗಿ ಮಾಡುತ್ತಾ ಬರಲಾಗುತ್ತಿದೆ. ಪಟ್ಟಣದಲ್ಲಿ ಜರುಗುವ ಅನ್ನದಾನೀಶ್ವರ ಜಾತ್ರೆ, ಕನಕರಾಯಣ ಜಾತ್ರೆಯ ಜತೆಗೆ ಅಯ್ಯಪ್ಪಸ್ವಾಮಿ ಲಕ್ಷ ದೀಪೋತ್ಸವವೂ ಸೇರಿದೆ. ಇವೆಲ್ಲವೂ ಜಾತ್ಯಾತೀತ, ಪಕ್ಷಾತೀತವಾಗಿ ನಡೆಯುತ್ತಾ ಬಂದಿವೆ. ಇಲ್ಲಿನ ಮಂಜುನಾಥ ಕಲಾಲ್ ಗುರುಸ್ವಾಮಿಯವರು ಇಲ್ಲೊಂದು ಸಾಕ್ಷಾತ್ ಶಬರಿ ಕ್ಷೇತ್ರ ನಿರ್ಮಾಣ ಮಾಡಿದ್ದು, ಎಲ್ಲರೂ ಅಯ್ಯಪ್ಪನ ದರ್ಶನ ಮಾಡಿ ಪುಣೀತರಾಗೋಣ ಎಂದರು.ಕಾರ್ಯಕ್ರಮದಲ್ಲಿ ಡಾ. ವಿರೇಶ ಹಂಚಿನಾಳ, ನಾಗೇಶ ಹುಬ್ಬಳ್ಳಿ,ಅಮೀನಸಾಬ್ ಬಿಸನಳ್ಳಿ, ಸಾವಂತ್ರೆಮ್ಮ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಡಾ. ವಿರೇಶ ಹಂಚಿನಾಳ ಮಾತನಾಡಿ, ಅಯ್ಯಪ್ಪಸ್ವಾಮಿ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಜಾತಿ-ಜನಾಂಗದವರೂ ಸಹ ಮಾಲಾಧಾರಿಗಳಾಗಬಹುದು. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಾಲಾಧಾರಿ ಹೊಂದಿದ್ದು, ಇದೀಗ ಗದಗ ಜಿಲ್ಲೆಯಲ್ಲಿಯೂ ಹೆಚ್ಚಿನ ಮಾಲಾಧಾರಿಗಳಿದ್ದಾರೆ. ಮಂಜುನಾಥ ಗುರುಸ್ವಾಮಿಗಳು ಇಲ್ಲಿನ ಅಯ್ಯಪ್ಪನ ದೇವಸ್ಥಾನದ ನಿರ್ಮಾಣಕ್ಕೆ ಕಾರಣೀಕರ್ತರಾಗಿದ್ದಾರೆ ಎಂದರು.ಮಂಜುನಾಥ ಗುರುಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಟ್ಟಿಯ ಬಸವರಾಜ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕರಬಸಪ್ಪ ಹಂಚಿನಾಳ, ಎಂ.ಐ. ಹಿರೇಮನಿಪಾಟೀಲ, ಪ್ರಶಾಂತಸ್ವಾಮಿ ಅಳವಂಡಿ, ಅನಂತ ಕಂಚಗಾರ, ಸತೀಶ ಕಂಚಗಾರ, ನಾರಾಯಣಸ್ವಾಮಿ ಅಳವಂಡಿ, ಹನಮಂತಸ್ವಾಮಿ ಕುಕನೂರು, ಶಿವಾನಂದಸ್ವಾಮಿ ಪುರದ, ಸಚೀನಸ್ವಾಮಿ ಮೇಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಗಿರೀಶಗೌಡ ಪಾಟೀಲ ಸ್ವಾಗತಿಸಿದರು. ಮುತ್ತು ನಾಗರಹಳ್ಳಿ, ಮಂಜುನಾಥ ಹೊಸಮನಿ ನಿರೂಪಿಸಿ, ವಂದಿಸಿದರು. ನಂತರ ಭಕ್ತರು ದೀಪಗಳನ್ನು ಹಚ್ಚಿ ಭಕ್ತಭಾವ ತೋರಿದರು.