ಕೊರೋನಾ ಬಳಿಕ ಲಕ್ಷದ್ವೀಪದ ಪ್ರಥಮ ಪ್ರಯಾಣಿಕರ ಹಡಗು ಮಂಗಳೂರಿಗೆ

KannadaprabhaNewsNetwork |  
Published : May 03, 2024, 01:08 AM ISTUpdated : May 03, 2024, 08:09 AM IST
ಲಕ್ಷದ್ವೀಪದಿಂದ ಮಂಗಳೂರಿನ ಹಳೆ ಬಂದರಿಗೆ ಆಗಮಿಸಿದ ಪ್ರಯಾಣಿಕರ ಹಡಗು. | Kannada Prabha

ಸಾರಾಂಶ

ಲಕ್ಷದ್ವೀಪದ ಆಡಳಿತವು ಖಾಸಗಿ ಹಡಗಿನ ಜತೆ ಒಪ್ಪಂದದೊಂದಿಗೆ ಈ ಪ್ರಯಾಣವನ್ನು ಏರ್ಪಡಿಸಿದ್ದು, ಪ್ರತಿ ಪ್ರಯಾಣಿಕರಿಗೆ 450 ರು. ಪ್ರಯಾಣದರ ವಿಧಿಸಿದೆ ಎಂದು ಪ್ರಯಾಣಿಕರು ಮಾಹಿತಿ ನೀಡಿದರು.

 ಮಂಗಳೂರು :  ಕೊರೋನಾ ಬಳಿಕ ಪ್ರಥಮ ಪ್ರಯಾಣಿಕರ ಹೈಸ್ಪೀಡ್‌ ಹಡಗು ಲಕ್ಷದ್ವೀಪದಿಂದ ಮಂಗಳೂರಿಗೆ ಗುರುವಾರ ಸಂಜೆ ವೇಳೆಗೆ ಹಳೆ ಬಂದರಿಗೆ ಆಗಮಿಸಿದೆ. ಈ ಮೂಲಕ ಲಕ್ಷದ್ವೀಪ- ಮಂಗಳೂರು ನಡುವೆ ನಾಲ್ಕು ವರ್ಷಗಳ ನಂತರ ಮತ್ತೆ ಪ್ರಯಾಣಿಕರ ಸಂಚಾರ ಪುನಾರಂಭವಾಗುವ ಆಶಾಭಾವನೆ ಹುಟ್ಟಿದೆ.

ಲಕ್ಷದ್ವೀಪದ 150ಕ್ಕೂ ಅಧಿಕ ಪ್ರಯಾಣಿಕರು, ಒಬ್ಬರು ಪೈಲಟ್‌, ಒಬ್ಬರು ಚೀಫ್‌ ಎಂಜಿನಿಯರ್‌, ಒಬ್ಬರು ಅಸಿಸ್ಟೆಂಟ್‌ ಎಂಜಿನಿಯರ್‌, 8 ಮಂದಿ ಸಿಬ್ಬಂದಿ ಮಂಗಳೂರಿಗೆ ಬಂದಿಳಿದರು. ಮಾಜಿ ಶಾಸಕ ಜೆ.ಆರ್. ಲೋಬೊ ಸೇರಿದಂತೆ ಮುಖಂಡರು ಅವರನ್ನು ಸ್ವಾಗತಿಸಿದರು. ಈ ಹಡಗು ಶನಿವಾರ ಮುಂಜಾನೆ ಮರಳಿ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಲಿದೆ.7 ಗಂಟೆ ಪ್ರಯಾಣ, 450 ರು. ಟಿಕೆಟ್‌:

ಈ ಹೈಸ್ಪೀಡ್‌ ಪ್ರಯಾಣಿಕರ ಹಡಗು ಬೆಳಗ್ಗೆ ಲಕ್ಷದ್ವೀಪದಿಂದ ಹೊರಟು 7 ಗಂಟೆ ಪ್ರಯಾಣಿಸಿ ಸಂಜೆ ಸುಮಾರು 5 ಗಂಟೆ ವೇಳೆಗೆ ಮಂಗಳೂರು ತಲುಪಿದೆ. ಲಕ್ಷದ್ವೀಪದ ಆಡಳಿತವು ಖಾಸಗಿ ಹಡಗಿನ ಜತೆ ಒಪ್ಪಂದದೊಂದಿಗೆ ಈ ಪ್ರಯಾಣವನ್ನು ಏರ್ಪಡಿಸಿದ್ದು, ಪ್ರತಿ ಪ್ರಯಾಣಿಕರಿಗೆ 450 ರು. ಪ್ರಯಾಣದರ ವಿಧಿಸಿದೆ ಎಂದು ಪ್ರಯಾಣಿಕರು ಮಾಹಿತಿ ನೀಡಿದರು.ನೇರ ಪ್ರಯಾಣ ಮುಂದುವರಿಯಲಿ:

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷದ್ವೀಪ ನಿವಾಸಿ ಡಾ.ಲತೀಫ್‌, ‘ಮಂಗಳೂರಿನಲ್ಲಿ ನಮ್ಮ ಸಂಬಂಧಿಕರು, ಸ್ನೇಹಿತರು ಇದ್ದಾರೆ. ಕೊರೋನಾ ಬಳಿಕ ಮಂಗಳೂರಿಗೆ ಪ್ರಯಾಣಿಕರ ಸಂಪರ್ಕ ವ್ಯವಸ್ಥೆ ಇಲ್ಲದೆ ಇದ್ದ ಕಾರಣ ಕೇರಳದ ಕೊಚ್ಚಿಗೆ ಬಂದು, ಅಲ್ಲಿಂದ ರೈಲಿನಲ್ಲಿ ಇಲ್ಲಿಗೆ ಬರಬೇಕಿತ್ತು. ಇದೀಗ ಮಂಗಳೂರಿಗೆ ನೇರ ಪ್ರಯಾಣದ ಹೈಸ್ಪೀಡ್‌ ಹಡಗು ವ್ಯವಸ್ಥೆ ಕಲ್ಪಿಸಿರುವುದರಿಂದ ತುಂಬಾ ಅನುಕೂಲವಾಗಿದೆ. ಲಕ್ಷದ್ವೀಪದ ಅನೇಕ ಮಂದಿ ಮಂಗಳೂರಿಗೆ ಶಿಕ್ಷಣಕ್ಕಾಗಿ, ಇನ್ನಿತರ ಕೆಲಸಗಳಿಗಾಗಿ ಅವಲಂಬಿತರಾಗಿದ್ದಾರೆ. ಆದ್ದರಿಂದ ಈ ವ್ಯವಸ್ಥೆ ಮುಂದುವರಿಯಬೇಕು. ಇದಕ್ಕಾಗಿ ಎರಡೂ ಕಡೆಯ ಆಡಳಿತ ಮುತುವರ್ಜಿ ವಹಿಸಬೇಕಿದೆ’ ಎಂದು ಹೇಳಿದರು.

‘ನಾನು ಮಂಗಳೂರಿಗೆ ಶಾಪಿಂಗ್‌ಗಾಗಿ ಆಗಮಿಸಿದ್ದೇನೆ. ಎರಡು ದಿನ ಇಲ್ಲೇ ಉಳಿದು ಅಗತ್ಯ ವಸ್ತುಗಳನ್ನು ಖರೀದಿಸಿ ಮರಳಿ ಲಕ್ಷದ್ವೀಪಕ್ಕೆ ತೆರಳಲಿದ್ದೇನೆ. ಮಂಗಳೂರಿಗೆ ನೇರವಾಗಿ ಪ್ರಯಾಣಿಕರ ಹಡಗಿನ ವ್ಯವಸ್ಥೆ ಕಲ್ಪಿಸಿರುವುದು ಖುಷಿಯಾಗಿದೆ’ ಎಂದು ಮುತ್ತುಕೋಯ ತಿಳಿಸಿದರು.

7 ವರ್ಷ ಬಳಿಕ ಹೈ ಸ್ಪೀಡ್ ಹಡಗು:  ಕೊರೋನಾ ಲಾಕ್‌ಡೌನ್‌ ಘೋಷಣೆಯಾಗುವ ಮೊದಲು 2020ರಲ್ಲಿ ಲಕ್ಷದ್ವೀಪದಿಂದ ಮಂಗಳೂರಿಗೆ ಕೊನೆಯ ಪ್ರಯಾಣಿಕರ ಹಡಗು ಆಗಮಿಸಿತ್ತು. 4 ವರ್ಷಗಳ ನಂತರ ಆಗಮಿಸಿದ ಮೊದಲ ಪ್ರಯಾಣಿಕರ ಹಡಗು ಇದು. ಹೈಸ್ಪೀಡ್‌ ಪ್ರಯಾಣಿಕರ ಹಡಗು ಬಂದಿರೋದು 7 ವರ್ಷಗಳ ಬಳಿಕ.

ಅಭಿವೃದ್ಧಿಗೆ ಪೂರಕ:  ಕೊರೋನಾ ಬಳಿಕ ಪ್ರಯಾಣಿಕರ ಹಡಗು ಸಂಚಾರ ಪುನಾರಂಭಿಸಲು ಯಾರೂ ಮುತುವರ್ಜಿ ವಹಿಸದೆ ಇದ್ದ ಕಾರಣ ಪ್ರಯಾಣಿಕರು ಕೇರಳದ ಕೊಚ್ಚಿಯಿಂದಲೇ ಲಕ್ಷದ್ವೀಪಕ್ಕೆ ಸಂಚರಿಸುವಂತಾಗಿತ್ತು. ಇತ್ತೀಚೆಗೆ ಕೇರಳದ ಮಾಜಿ ಸಂಸದ ಹಮ್ದುಲ್ಲಾ ಸಯ್ಯದ್‌ ಅವರು ಮಂಗಳೂರಿಗೆ ಆಗಮಿಸಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್ ಅವರೊಂದಿಗೆ ಮಾತುಕತೆ ನಡೆಸಿ ಈಗ ಪುನಾರಂಭ ಮಾಡಲಾಗಿದೆ. ಇದು ಮುಂದುವರಿದರೆ ಮಂಗಳೂರಿನ ಅಭಿವೃದ್ಧಿಗೆ, ಇಲ್ಲಿನ ವ್ಯಾಪಾರ- ವಹಿವಾಟು ವೃದ್ಧಿಯಾಗಲು ಅನುಕೂಲವಾಗಲಿದೆ ಎಂದು ಬೆಂಗ್ರೆಯ ಮುಖಂಡ ಅಬೂಬಕ್ಕರ್‌ ಅಶ್ರಫ್‌ ಹೇಳಿದರು.ಬಾಕ್ಸ್‌-1

ಲಕ್ಷದ್ವೀಪಕ್ಕೆ ಹೋಗಲು ಬೇಕು ಅನುಮತಿ!

ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಮಂಗಳೂರಿನಿಂದ ಅಲ್ಲಿಗೆ ತೆರಳಲು ಸಂಬಂಧಿತ ಇಲಾಖೆಗಳಿಂದ ಅನುಮತಿಯ ಅಗತ್ಯವಿದೆ. ಲಕ್ಷದ್ವೀಪದ ಯಾರಾದರೂ ನಿವಾಸಿಗಳ ಪರಿಚಯ ಇದ್ದು, ಅಲ್ಲಿಗೆ ತೆರಳಲು ಅವರಿಂದ ಆಹ್ವಾನ ಬೇಕು. ನಂತರ ಅರ್ಜಿ ಸಲ್ಲಿಸಿ, ಪೊಲೀಸ್ ಇಲಾಖೆಯಿಂದ ಪರಿಶೀಲನೆ ನಡೆದು ಅನುಮತಿ ದೊರೆಯಬೇಕು. ಇಲ್ಲದಿದ್ದರೆ ಟ್ರಾವೆಲ್‌ ಏಜೆನ್ಸಿಗಳ ಮೂಲಕವೂ ತೆರಳಬಹುದು. ಈ ಪ್ರಕ್ರಿಯೆ ಸರಳೀಕರಣಗೊಂಡರೆ ಮಾತ್ರ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳಲು ಹಾದಿ ಸುಗಮವಾಗಲಿದೆ.ಸರಕು ಬೋಟ್‌ಗಳ ಸಂಖ್ಯೆಯೂ ಇಳಿಕೆ!

ಸಿಮೆಂಟ್‌, ಇಟ್ಟಿಗೆ, ಮರಳು ಇತ್ಯಾದಿ ಎಲ್ಲ ಬಗೆಯ ನಿರ್ಮಾಣ ಸಾಮಗ್ರಿಗಳು ಸೇರಿದಂತೆ ತರಕಾರಿ, ಹಣ್ಣು, ಅಗತ್ಯ ವಸ್ತುಗಳು ಲಕ್ಷದ್ವೀಪಕ್ಕೆ ಹೊರಗಿನಿಂದಲೇ ಹೋಗಬೇಕು. ಮುಂಚೆ ಮಂಗಳೂರಿನಿಂದ ತಿಂಗಳಿಗೆ ಏನಿಲ್ಲವೆಂದರೂ ನೂರಕ್ಕೂ ಅಧಿಕ ಸರಕು ಮಂಜಿಗಳು ಮಂಗಳೂರಿನಿಂದ ಹೋಗುತ್ತಿದ್ದವು. ಕೊರೋನಾ ಬಳಿಕ ಎಲ್ಲ ಕೇರಳಕ್ಕೆ ಶಿಫ್ಟ್‌ ಆಗಿದೆ. ಈಗ ಮಂಗಳೂರಿನಿಂದ ತಿಂಗಳಿಗೆ ಏಳೆಂಟು ಮಂಜಿಗಳು ಮಾತ್ರ ಹೋಗುತ್ತಿವೆ. ಇಲ್ಲಿಂದ ಸರಕು ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ ಎಂದು ಅಬೂಬಕ್ಕರ್‌ ಅಶ್ರಫ್‌ ಹೇಳುತ್ತಾರೆ.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ