ಲಕ್ಷ್ಮೇಶ್ವರ: ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಪಟ್ಟಣದ 14ನೇ ವಾರ್ಡಿನ ಸಾರ್ವಜನಿಕರು ಮಂಗಳವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಲ್ಲನಗೌಡ ಪಾಟೀಲ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ವಾರ್ಡ್‌ಗಳಲ್ಲಿ ನಮ್ಮ ವಾರ್ಡಿನಲ್ಲಿ ಕುಡಿಯುವ ನೀರು ಬರುತ್ತಿಲ್ಲ. ದೀಪಾವಳಿ ಹಬ್ಬದಲ್ಲೂ ಕುಡಿಯುವ ನೀರು ಇಲ್ಲ. ಬೇರೆ ವಾರ್ಡುಗಳಲ್ಲಿ 15 ದಿನಗಳಿಗೊಮ್ಮೆ ನೀರು ಬಂದರೆ ನಮ್ಮ ವಾರ್ಡಿನಲ್ಲಿ ಯಾಕೆ ನೀರು ಬರುತ್ತಿಲ್ಲ, ಪುರಸಭೆಯವರು ಪ್ರತಿ ತಿಂಗಳು ನೀರಿನ ಬಿಲ್ಲನ್ನು ಕಟ್ಟಿಸಿಕೊಳ್ಳುತ್ತಾರೆ. ಆದರೆ ನೀರು ಮಾತ್ರ 15 ದಿನಗಳಿಗೊಮ್ಮೆ ಬರುತ್ತವೆ. ಹೀಗಾದಲ್ಲಿ ಬಡವರು, ಕೃಷಿ ಕೂಲಿಕಾರರು ಏನು ಮಾಡಬೇಕು. ತಿಂಗಳಲ್ಲಿ ಒಂದು ಬಾರಿ ಬಂದರೆ ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪುರಸಭೆ ಸದಸ್ಯ ವಿಶ್ವಕರ್ಮ ಹುಲಬಜಾರ ಮಾತನಾಡಿ, ಪಟ್ಟಣದ ಪುರಸಭೆಯ ವ್ಯಾಪ್ತಿಯ 14ನೇ ವಾರ್ಡ್‌ನಲ್ಲಿ ಕಳೆದ ಒಂದು ತಿಂಗಳಿಂದ ನೀರು ಬರುತ್ತಿಲ್ಲವೆಂದು ಪುರಸಭೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಜನತೆ ಪುರಸಭೆಗೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪುರಸಭೆಯವರು ಸರಿಯಾಗಿ ಕುಡಿಯುವ ನೀರು ಬಿಡದೆ ಇರುವುದು ಇದಕ್ಕೆಲ್ಲ ಕಾರಣವಾಗಿದೆ. ಇನ್ನು ಮುಂದಾದರೂ 8- 10 ದಿನಗಳಿಗೊಮ್ಮೆ ನೀರು ಬಿಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.ಸುಜಾತಾ ಬಿಂಕದಕಟ್ಟಿ ಮಾತನಾಡಿ, ಕಳೆದ ಒಂದು ವರ್ಷದಿಂದ ಕುಡಿಯುವ ನೀರು ಸರಿಯಾಗಿ ಬರುವುದಿಲ್ಲ. ನೀರು ಯಾಕೆ ಬರುವುದಿಲ್ಲ ಎಂದು ಕೇಳಿದರೆ, ಅಲ್ಲಿ ದುರಸ್ತಿ ಇಲ್ಲಿ ದುರಸ್ತಿ ಎನ್ನುವ ಸಬೂಬು ಹೇಳುತ್ತಾರೆ. ಮಳೆಗಾಲದಲ್ಲಿ ಸರಿಯಾಗಿ ನೀರು ಬರುತ್ತಿಲ್ಲ ಎಂದರೆ ಬೇಸಿಗೆ ಕಾಲದಲ್ಲಿ ಹೇಗೆ ಎಂದು ಪ್ರಶ್ನಿಸಿದ ಅವರು, ಸರಿಯಾಗಿ ನೀರು ಬಿಡುತ್ತೇವೆ ಎಂದು ಹೇಳುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕುಡಿಯುವ ನೀರಿನ ಪೈಪುಗಳ ದುರಸ್ತಿ ಕಾರ್ಯದಿಂದ ಸರಬರಾಜು ಮಾಡುವಲ್ಲಿ ವ್ಯತ್ಯಾಸವಾಗಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಕ್ರಮ ಕೈಗೊಳ್ಳಲಾಗುವುದು. ನಾಳೆ(ಬುಧವಾರ) ನಿಮ್ಮ ಮನೆಗಳಿಗೆ ನೀರು ಕೊಡುವ ಕಾರ್ಯ ಮಾಡುತ್ತೇವೆ ಎಂದರು.ಈ ವೇಳೆ ಶಕ್ತಿ ಕತ್ತಿ, ಆರ್.ಎಸ್. ಹಡಗಲಿಮಠ, ಹೊಳಲಪ್ಪಗೌಡ ಪಾಟೀಲ, ಮಂಜುನಾಥ ಗಾಂಜಿ, ಸಂತೋಷ ಹೂಗಾರ, ಸೋಮನಗೌಡ ಪಾಟೀಲ, ಲೋಹಿತಗೌಡ ಪಾಟೀಲ, ನಿಂಗವ್ವ ಪಾಟೀಲ, ಲಲಿತಾ ಈಶ್ವರ ಗೌಡ ಪಾಟೀಲ, ಸುಜಾತಾ ಬಿಂಕದಕಟ್ಟಿ, ಬಸನಗೌಡ ಪಾಟೀಲ, ಮಲ್ಲವ್ವ ಪಾಟೀಲ, ಗಂಗಮ್ಮ ಫಕ್ಕೀರಸ್ವಾಮಿಮಠ, ಸಾವಕ್ಕ ಪಾಟೀಲ, ಪ್ರೇಮವ್ವ ಬಡಿಗೇರ ಸೇರಿದಂತೆ ಅನೇಕರು ಇದ್ದರು.
ಪಿಎಸ್ಐ ನಾಗರಾಜ ಗಡಾದ ಅವರು ಸಾರ್ವಜನಿಕರನ್ನು ಸಮಾಧಾನಪಡಿಸಿ ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳುವಂತೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಸಲಹೆ ನೀಡಿದರು.