ಕನ್ನಡಪ್ರಭ ವಾರ್ತೆ ಪರಶುರಾಂಪುರ
ಗ್ರಾಮದ ಎಲ್ಲೆಡೆ ಸಡಗರ ಸಂಭ್ರಮ ಮನೆ ಮಾಡಿದೆ. ಆರು ದಿನಗಳ ಈ ಉತ್ಸವ ಅಂಗವಾಗಿ ಗ್ರಾಮವು ಉತ್ಸವ ಮೆರವಣಿಗೆ, ಜಾತ್ರೆ, ನಾಡು -ನುಡಿ, ನೆಲ-ಜಲ ಕುರಿತು ಹತ್ತಾರು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ. ಕಳೆದ ಎರಡು ದಿನಗಳಿಂದ ಗ್ರಾಮದ ಮುಖ್ಯ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿವೆ. ಗ್ರಾಮಸ್ಥರು ಹಬ್ಬದ ಮೊದಲ ದಿನ ಕುಲದೇವತೆಗಳ ಮತ್ತು ಹಿರಿಯರ ದರ್ಶನ, ಪೂಜೆ ಪುರಸ್ಕಾರ ಮಾಡಲಿದ್ದಾರೆ.
ಏ.10ರಂದು ಚೌಡೇಶ್ವರಿ ಮತ್ತು ಶ್ರೀ ಚನ್ನಕೇಶವ ಸ್ವಾಮಿ ದೇವರ ಉತ್ಸವ ದೇವರುಗಳಿಗೆ ಗುಗ್ಗರಿ ಮತ್ತು ಪಾನಕ ಸೇವೆ ನೆರವೇರಿಸಲಾಗಿದೆ. ಕಲ್ಯಾಣ ರಸ್ತೆಯ ಮುಖ್ಯ ವೃತ್ತದಲ್ಲಿ ಶ್ರೀದೇವಿಯ 12 ಕೈವಾಡದವರು ಮಂಗಳವಾದ್ಯಗಳ ಮೂಲಕ ಸಮೀಪದ ವೇದಾವತಿ ನದಿಗೆ ತೆರಳಿ ಗಂಗಾ ಪೂಜೆ ಸಲ್ಲಿಸುವರು.ಬಳಿಕ ಸಂಜೆ ವೇದಾವತಿ ನದಿಯಿಂದ ಅಲಂಕೃತ ದೇವಿಯ ಮೂರ್ತಿಯನ್ನು ಗ್ರಾಮದ ಮಧ್ಯಭಾಗದಲ್ಲಿ ಇರುವ ಶಾಲ್ಮಲಿ ವೃಕ್ಷದ ಕೆಳಗೆ ಇರುವ ಕಟ್ಟೆಯ ಮೇಲೆ ಕರೆತಂದು ಪ್ರತಿಷ್ಠಾಪಿಸಲಾಗುವುದು. ಸಂಪ್ರದಾಯದಂತೆ ಗ್ರಾಮದ ಗೌಡ, ಕೊಂಚಗಾರ, ಪಾಳೇಗಾರ ವಂಶಸ್ಥರು ಸೇರಿದಂತೆ ಎಲ್ಲಾ ಗ್ರಾಮ ದೇವಿಗೆ ಮಡ್ಲಕ್ಕಿ, ಬಳೆ, ಸೀರೆ ಉಪಚಾರ, ಆರಿಶಿಣ, ಕುಂಕುಮ, ಹೂವಿನ ಹಾರ ಒಪ್ಪಿಸಿ ತಾಯಿಯ ಮಡಿಲ ತುಂಬಿಸುವರು. ಬಳಿಕ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಪ್ರಮುಖ ಬೀದಿಗಳಲ್ಲಿ ಕೊಂಡಯ್ಯಲಾಗುವುದು.